*ಶತ್ರುವಿನ ಶತ್ರು ಮಿತ್ರ ಎಂಬ ತಂತ್ರಗಾರಿಕೆ ಮೇಲೆ ಹೊಂದಾಣಿಕೆ ಮಾಡಿಕೊಳ್ಳಲು ಸಿಂಗಾಪುರಕ್ಕೆ ತೆರಳಿದ್ದಾರೆ: ಡಿಸಿಎಂ ಡಿ.ಕೆ. ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬ್ರ್ಯಾಂಡ್ ಬೆಂಗಳೂರು ಹಾಗೂ ಕರ್ನಾಟಕದ ಪಾಲಿಗೆ ಇಂದು ಹೊಸ ಅಧ್ಯಾಯ ಆರಂಭವಾಗುತ್ತಿದೆ. ಕರ್ನಾಟಕದ ಭವಿಷ್ಯದ ಅಭಿವೃದ್ಧಿಗೆ ಇದು ಹೆಜ್ಜೆಗುರುತಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಕೆಲ ವರ್ಷಗಳ ಹಿಂದೆ ವಿಶ್ವ ವಿನ್ಯಾಸ ರಾಜಧಾನಿ ಯಾವುದು ಎಂಬ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಇದರಲ್ಲಿ ಬೆಂಗಳೂರು ಯಶ ಕಾಣಲಿಲ್ಲ. ಬೆಂಗಳೂರು ವಾಸಯೋಗ್ಯ ನಗರವಾಗಿ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿ ಈ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.
ಬೆಂಗಳೂರು ವಿಶ್ವದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಈ ನಗರವನ್ನು ಬೆಂಗಳೂರನ್ನು ಜಾಗತಿಕ ನಗರವಾಗಿ ಮಾಡಲು ಸರ್ಕಾರ ಬದ್ಧವಾಗಿದೆ. ಯಾವುದೇ ಯೋಜನೆಯಾದರೂ ಅದರ ವಿನ್ಯಾಸ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹೀಗಾಗಿ ನಾವು ಇಂದು ಈ ಸಂಸ್ಥೆ ಜೊತೆ ಕೈಜೋಡಿಸುತ್ತಿದ್ದೇವೆ. ಈ ಸಂಸ್ಥೆ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳ ವಿಚಾರದಲ್ಲಿ ಸಲಹೆ, ಮಾರ್ಗದರ್ಶನ ನೀಡಲಿದೆ.
ಆರಂಭದಲ್ಲಿ ಈ ಒಪ್ಪಂದ ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಈಗ ಇದನ್ನು ಬಿಎಂಆರ್ ಡಿಎ ವ್ಯಾಪ್ತಿಯ ಪ್ರದೇಶಗಳನ್ನು ಒಳಗೊಳ್ಳಲಾಗಿದೆ. ಬೆಂಗಳೂರಿಗೆ ತನ್ನದೇ ಆದ ಇತಿಹಾಸ, ಪರಂಪರೆ, ಸಂಸ್ಕೃತಿ ಹೊಂದಿದೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡು ಇಂದು ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಒಪ್ಪಂದದಿಂದ ನಮಗೆ ಶಕ್ತಿ ಹೆಚ್ಚಲಿದೆ. ಸರ್ಕಾರ ಹಾಗೂ ಬಿಬಿಎಂಪಿ ಪರವಾಗಿ ಆಯುಕ್ತರು ಈ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಾರೆ.
ನಮ್ಮ ಹಿರಿಯರು ತಮ್ಮದೇ ಆದ ರೀತಿಯಲ್ಲಿ ಬೆಂಗಳೂರನ್ನು ಕಟ್ಟಿದ್ದಾರೆ. ಬಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ನಾವು ಅದಕ್ಕೆ ಹೊಸ ರೂಪ ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಈಗಿರುವ ಬೆಂಗಳೂರಿನಲ್ಲಿ ಯಾವ ರೀತಿಯ ಬದಲಾವಣೆ ಮಾಡಬಹುದು, ಮುಂದೆ ಬೆಳೆಯಲಿರುವ ಬೆಂಗಳೂರನ್ನು ಹೇಗೆ ರೂಪಿಸಬೇಕು, ಹೊಸ ಸ್ಯಾಟಲೈಟ್ ಟೌನ್ ಹೇಗೆ ರೂಪಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ.
ಈ ಸಂಸ್ಥೆ ಕೇಂದ್ರ ಕಚೇರಿ ಕೆನಡಾದಲ್ಲಿದ್ದು, ವಿಶ್ವದ ಅತ್ಯುತ್ತಮ ಆರ್ಕಿಟೆಕ್ಚರ್ ಗಳನ್ನು ಹೊಂದಿದೆ. ಈ ಸಂಸ್ಥೆ ಅನೇಕ ದೇಶಗಳ ಜತೆ ಕೆಲಸ ಮಾಡಿದೆ. ಮುಂದಿನ ದಿನಗಳಲ್ಲಿ ಸುಮಾರು 200-300 ಇಂಜಿನಿಯರ್ ಗಳು ಕೆಲಸ ಮಾಡಲಿದ್ದಾರೆ. ಇಲ್ಲಿ ಅವರು ಯಾವುದೇ ಕಟ್ಟಣ ನಿರ್ಮಾಣ ಮಾಡುವುದಿಲ್ಲ. ಇವರು ಬೆಂಗಳೂರಿಗೆ ಹೊಸ ರೂಪ ನೀಡಲು ಸಲಹೆ ನೀಡುತ್ತಾರೆ. ಇವರು ಈಗ ಯಾವ ರೀತಿ ಸಲಹೆ ನೀಡುತ್ತಾರೆ ಎಂಬುದನ್ನು ನೋಡಿಕೊಂಡು ನಂತರದ ದಿನಗಳಲ್ಲಿ ಜಿಲ್ಲಾ ಕೇಂದ್ರಗಳು ಹಾಗೂ ತಾಲೂಕು ಕೇಂದ್ರಗಳಿಗೆ ರೂಪ ನೀಡುವ ಬಗ್ಗೆ ಆಲೋಚಿಸುತ್ತೇವೆ. ಬೆಂಗಳೂರಿಗೆ ಹೊಸ ರೂಪ ನೀಡಲು ನಾವು ಪ್ರಯತ್ನ ಮಾಡುತ್ತಿದ್ದು, ನಿಮ್ಮೆಲ್ಲರ ಸಹಕಾರ ಅಗತ್ಯ.
ಈ ಹಿಂದೆ ಈ ಸಂಸ್ಥೆ ಜೊತೆ 200 ಕೋಟಿ ರೂ.ಗೆ ಒಪ್ಪಂದ ಆಗಿದ್ದು ಈಗ ಇದನ್ನು ಹೆಚ್ಚಿಸಲಾಗಿದೆಯೇ ಎಂದು ಕೇಳಿದ ಪ್ರಶ್ನೆಗೆ, “ಒಪ್ಪಂದದ ಮೊತ್ತವನ್ನು ಕಡಿಮೆ ಮಾಡಿದ್ದೇವೆ. ಮೊದಲ ವರ್ಷ ನೀಡಬೇಕಾದ ಮೊತ್ತದಲ್ಲಿ ಕೇವಲ ಅರ್ಧದಷ್ಟು ಮಾತ್ರ ನೀಡುತ್ತೇವೆ. ಅವರ ಕೆಲಸ ಹೇಗಿರುತ್ತದೆ ಎಂದು ನೋಡಿ ನಂತರ ಮುಂದುವರಿಯುವುದಾಗಿ ಹೇಳಿದ್ದೇವೆ. ಅವರು ನೀಡುವ ಸಲಹೆಗಳು ನಾವು ಜಾರಿ ಮಾಡುವಂತಿರಬೇಕು. ಹೀಗಾಗಿ ಈ ಒಪ್ಪಂದವನ್ನು ಷರತ್ತುಗಳ ಆಧಾರದ ಮೇಲೆ ಐದು ವರ್ಷಕ್ಕೆ ಮಾಡಿಕೊಳ್ಳಲಾಗಿದೆ. ಈ ಹಿಂದೆ ಕೂಡ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಈಗ ಅದರ ವ್ಯಾಪ್ತಿ ಹೆಚ್ಚಿಸಲಾಗಿದೆ. ಈಗ ಬೆಳೆದಿರುವ ಬೆಂಗಳೂರು ಯೋಜಿತವಾಗಿ ಬೆಳೆದಿಲ್ಲ. ಹೀಗಾಗಿ ಬೆಂಗಳೂರು ನಗರದಲ್ಲಿ ಎಷ್ಟು ಬದಲಾವಣೆ ತರಲು ಸಾಧ್ಯ? ಮುಂದೆ ಬೆಂಗಳೂರು ಬೆಳೆಯುವ ಪ್ರದೇಶಗಳಲ್ಲಿ ಸರಿಯಾದ ರೀತಿಯಲ್ಲಿ ಯೋಜನೆ ರೂಪಿಸಲು ಈ ತೀರ್ಮಾನ ಮಾಡಲಾಗಿದೆ” ಎಂದು ತಿಳಿಸಿದರು.
ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ತಂತ್ರ ನಡೆಯುತ್ತಿರುವುದು ವ್ಯಾಪಕ ಚರ್ಚೆಯಾಗುತ್ತಿರುವ ಬಗ್ಗೆ ಕೇಳಿದಾಗ, “ಚರ್ಚೆ ಆಗಬೇಕು. ಹೊರಗೆ ಹೋಗಿ ಚರ್ಚೆ ಮಾಡುವವರು ಹೋಗಲಿ. ಇಲ್ಲಿ ಚರ್ಚೆ ಮಾಡುವವರು ಮಾಡಲಿ. ಎಲ್ಲಿ ಯಾವ ಸಭೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ನಮಗೂ ಗೊತ್ತಿದೆ” ಎಂದು ತಿಳಿಸಿದರು.
“ಶತ್ರುವಿನ ಶತ್ರು ಮಿತ್ರ ಎಂಬ ತಂತ್ರಗಾರಿಕೆ ಮೇಲೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ಅದು ಮುಂದುವರಿಯುತ್ತದೆಯೋ ಇಲ್ಲವೋ ಗೊತ್ತಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಡಬ್ಲ್ಯೂಡಿಒ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಂದರ್ಭದಲ್ಲಿ ಶಿವಕುಮಾರ್ ಅವರು ಈ ವಿಚಾರ ತಿಳಿಸಿದರು. “ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಹೊಂದಾಣಿಕೆಗೆ ಮುಂದಾಗಿದ್ದು, ಇಲ್ಲಿ ಹಾಗೂ ದೆಹಲಿಯಲ್ಲಿ ಮಾತುಕತೆ ಮಾಡಲಾಗದೇ ಸಿಂಗಾಪುರಕ್ಕೆ ತೆರಳಿದ್ದಾರೆ” ಎಂದರು.
ಇನ್ನು ಪತ್ರಿಕಾಗೋಷ್ಠಿಯ ಪ್ರಶ್ನೋತ್ತರ ವೇಳೆ, ಸಿಂಗಾಪುರದಲ್ಲಿ ಸರ್ಕಾರ ಬೀಳಿಸುವ ತಂತ್ರ ನಡೆಯುತ್ತಿರುವುದು ವ್ಯಾಪಕ ಚರ್ಚೆಯಾಗುತ್ತಿರುವ ಬಗ್ಗೆ ಮಾಧ್ಯಮಗಳು ಕೇಳಿದಾಗ, “ಚರ್ಚೆ ಆಗಬೇಕು. ಹೊರಗೆ ಹೋಗಿ ಚರ್ಚೆ ಮಾಡುವವರು ಹೋಗಲಿ. ಇಲ್ಲಿ ಚರ್ಚೆ ಮಾಡುವವರು ಮಾಡಲಿ. ಎಲ್ಲಿ ಯಾವ ಸಭೆಗಳ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ನಮಗೂ ಗೊತ್ತಿದೆ” ಎಂದು ತಿಳಿಸಿದರು.
ಇನ್ನು ತ್ಯಾಜ್ಯ ನಿರ್ವಹಣೆ ವಿಚಾರವಾಗಿ ಮಾತನಾಡಿ, ‘ನಾನು ಕೆಲವು ಪ್ರದೇಶಗಳಿಗೆ ಭೇಟಿ ನಿಡಿದ್ದು, ಅನಿಲ ಹಾಗೂ ತ್ಯಾಜ್ಯ ಇಂಧನ ಉತ್ಪಾದನೆ ಯೋಜನೆಗಳ ಬಗ್ಗೆ ನಾವು ಗಮನಹರಿಸುತ್ತಿದ್ದೇವೆ. ತ್ಯಾಜ್ಯಗಳನ್ನು ಒಂದು ಕಡೆ ಗುಡ್ಡೆ ಹಾಕಿದರೆ ಯಾವುದೇ ಪ್ರಯೋಜನವಿಲ್ಲ. ತ್ಯಾಜ್ಯಗಳನ್ನು ಸುಟ್ಟು ಹಾಕಬೇಕು. ತ್ಯಾಜ್ಯದಿಂದ ವಿದ್ಯುತ್ ಉತ್ಪಾದನಾ ಘಟಕ ನಿಷ್ಕ್ರಿಯವಾಗಿದ್ದು, ಈ ವಿಚಾರವಾಗಿ ಅಧ್ಯಯನ ಮಾಡಲು ಮುಂಬೈ, ದೆಹಲಿ, ಇಂದೋರ್ ಗಳಿಗೆ ಭೇಟಿ ನೀಡಲಾಗುವುದು’ ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ