
ಪ್ರಗತಿವಾಹಿನಿ ಸುದ್ದಿ: ಸಚಿವ ಸಂಪುಟದಲ್ಲಿ ರಾಜ್ಯದ ನಾಲ್ಕು ನಿಗಮಗಳ ಬಸ್ ದರ ಹೆಚ್ಚಳಕ್ಕೆ ಸಂಪುಟ ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕಿದೆ. ದರ ಹೆಚ್ಚಳಕ್ಕೆ ಕಾರಣವೇನು ಎಂಬುದನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ವಿವರಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, 2020ರಲ್ಲಿ ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿತ್ತು. ಸದ್ಯ ಶೇ.15ರಷ್ಟು ಬಸ್ ಟಿಕೆಟ್ ದರ ಹೆಚ್ಚಳ ಮಾಡಲಾಗಿದ್ದು, ಸಿಬ್ಬಂದಿ ವೆಚ್ಚ ಕೂಡ ಶೇ.18ರಷ್ಟು ಏರಿಕೆಯಾಗಿದೆ. ಕಳೆದ 5-10 ವರ್ಷಗಳಿಂದ ಟಿಕೆಟ್ ದರ ಹೆಚ್ಚಳ ಮಾಡಿಲ್ಲ. ಸಾರಿಗೆ ಸಂಸ್ಥೆಯೂ ಉಳಿಯಬೇಕಂದ್ರೆ ದರ ಹೆಚ್ಚಳ ಮಾಡಲೇಬೇಕಾಗುತ್ತದೆ. ಆದಾಯ ಹೆಚ್ಚಳವಾದರೂ ಖರ್ಚು ಏರಿಕೆಯಾಗಿದೆ. ಆದರೆ, ಮಹಿಳೆಯರಿಗಾಗಿ ಇರುವ ಶಕ್ತಿ ಯೋಜನೆಯಿಂದ ನಮಗೆ ಲಾಭ ಆಗಿದೆ. ಬಿಜೆಪಿ ಸರ್ಕಾರ ಸಾವಿರಾರು ಕೋಟಿ ರೂಪಾಯಿ ಸಾಲಬಿಟ್ಟು ಹೋಗಿದೆ. ನಮ್ಮ ಸರ್ಕಾರದಲ್ಲಿ ವೇತನಕ್ಕೆ ಯಾವುದೇ ಸಮಸ್ಯೆ ಎದುರಾಗಿಲ್ಲ. ಸಮಯಕ್ಕೆ ಸರಿಯಾಗಿ ನಮ್ಮ ಅವಧಿಯಲ್ಲಿ ಸಾರಿಗೆ ಸಿಬ್ಬಂದಿಗೆ ಸಂಬಳವಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೂ ಈ ಹೊಸ ದರ ಇದೇ ಜ.5ರಿಂದ ಅನ್ವಯಿಸಲಿದೆ ಎಂದು ತಿಳಿಸಿದರು.




