ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಏಷ್ಯಾದ ಅತೀದೊಡ್ಡ ತಾಂತ್ರಿಕ ವಿಶ್ವವಿದ್ಯಾಲಯ ಎನ್ನುವ ಖ್ಯಾತಿ ಹೊಂದಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ( ವಿಟಿಯು) ಈ ಬಾರಿಘಟಿಕೋತ್ಸವದಲ್ಲಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ.
ವಿಟಿಯು ಘಟಿಕೋತ್ಸವ ಸಮಾರಂಭನ್ನು ಪೆ. 8 ರಂದು ಆಯೋಜಿಸಲಾಗಿದೆ. ಈ ಘಟಿಕೊತ್ಸವದಲ್ಲಿ ಮೊಟ್ಟ ಮೊದಲ ಬಾರಿಗೆ ಹಳೆಯ ಸಂಪ್ರದಾಯಕ್ಕೆ ವಿದಾಯ ಹೇಳಿ ಹೊಸ ಸಂಪ್ರದಾಯ ಆರಂಭಿಸಲು ಸುತ್ತೋಲೆ ಹೊರಡಿಸಲಾಗಿದೆ.
ಪದವಿ ಪ್ರಧಾನ ಸಮಾರಂಭದಲ್ಲಿ ಕಡ್ಡಾಯವಾಗಿ ಕೈಮಗ್ಗ ಉತ್ನನ್ನಗಳನ್ನು ಬಳಸಲು ವಿಟಿಯು ಆದ್ಯತೆ ನೀಡಿದೆ.
ಪದವಿ ಪ್ರಧಾನ ಸಮಾರಂಭದಲ್ಲಿ ಗಣ್ಯರಿಂದ ಹಿಡಿದು ಪದವಿ ಸ್ವೀಕರಿಸುವ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ಕೈಮಗ್ಗದಿಂದ ನೇಯ್ದ ಬಟ್ಟೆಯನ್ನೆ ಧರಿಸುವಂತೆ ಕಡ್ಡಾಯವಾಗಿ ಆದೇಶಿಸಿದೆ.
ದೇಶಿಯ ಸಂಸ್ಕೃತಿಯನ್ನು ಉತ್ತೇಜಿಸಲು ಹಾಗೂ ವಿದೇಶಿ ಸಂಸ್ಕೃತಿಯನ್ನು ಹೋಗಲಾಡಿಸಲು ಪಾಶ್ಚಿಮಾತ್ಯ ಸಂಸ್ಕೃತಿಯ ಕಪ್ಪುಗೌನ್ ಮತ್ತು ಕಪ್ಪು ಕ್ಯಾಪ್‌ಗೆ ವಿದಾಯ ಹೇಳಲು ನಿರ್ಧರಿಸಲಾಗಿದೆ.
ಪದವಿ ಸ್ವೀಕರಿಸುವ ಹೆಣ್ಣು ಮಕ್ಕಳಿಗೆ ಭಾರತೀಯ ಸನಾತನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಅಪ್ಪಟ ಕೈಮಗ್ಗದಿಂದ ನೇಯ್ದ ಬಿಳಿ ಸೀರೆ, ಬಿಳಿ ಸಲವಾರ್‌ಕಮೀಜ್ ಮತ್ತು ಬಿಳಿ ಹೊದಿಕೆ (ದುಪಟ್ಟಾ) ಹಾಗೂ ಗಂಡು ಮಕ್ಕಳಿಗೆ ಬಿಳಿಉದ್ದ ತೋಳಿನ ಷರ್ಟ್ ಮತ್ತು ಬಿಳಿ ಪ್ಯಾಂಟ್ ಧರಿಸುವಂತೆ ಕಟ್ಟು ನಿಟ್ಟಿನ ಆದೇಶ ಹೊರಡಿಸಿದೆ.
ಈ ಆದೇಶವನ್ನು ಮೊಟ್ಟಮೊದಲಿಗೆ ಪರಿಣಾಮಕಾರಿಯಾಗಿಜಾರಿಗೆ ತಂದಿರುವ ವಿಟಿಯು ಕುಲಪತಿ ಪ್ರೊ: ಕರಿಸಿದ್ದಪ್ಪ ನವರನ್ನು ಬೆಳಗಾವಿಯ ತಾಳೂಕರ ಚಿತ್ರಕಲಾ ಹಾಗೂ ದೇವಾಂಗ ಸಮಾಜ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣರಾಜೇಂದ್ರತಾಳೂಕರ , ಮಹಾಂತೇಶಎಸ್ ಕಳ್ಳಿ, ಈರಣ್ಣಾ ಗರಗ , ವಿಶ್ವನಾಥ ತಾಳೂಕರ ಸಮಗ್ರ ನೇಕಾರ ಸಮುದಾಯದ ಪರವಾಗಿ ಗೌರವ ಸನ್ಮಾನಿಸಿದರು. ಈ ಸಂದರ್ಭದಲ್ಲಿ
ಪ್ರೊ: ಕರಿಸಿದ್ದಪ್ಪ ಮಾತನಾಡಿ, ವಿಶ್ವವಿದ್ಯಾಲಯ ಧನಸಹಾಯ ಆಯೋಗ , ನವದೆಹಲಿಯವರ ಆದೇಶದನ್ವಯ ಈ ಯೋಜನೆ ಜಾರಿಗೆ ಬಂದಿದ್ದು ಈ ಸುತ್ತೋಲೆಯನ್ನುದೇಶದ ಎಲ್ಲಾ ವಿಶ್ವವಿದ್ಯಾಲಯಗಳು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಈ ಆದೇಶದಿಂದ ಕೈಮಗ್ಗ ನೇಕಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಮೂಲಕ ಕೈಮಗ್ಗ ಉತ್ಪನ್ನಗಳಿಗೆ ಉತ್ತೇಜನ ಸಿಗಲಿದೆ ಎಂದು ನೇಕಾರ ಮುಖಂಡ ಮಹಾಂತೇಶ ಎಸ್ ಕಳ್ಳಿ ಮತ್ತು ಕೃಷ್ಣರಾಜೇಂದ್ರ ತಾಳೂಕರ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ