Belagavi NewsBelgaum NewsKannada NewsKarnataka News

ಐದು ಮಂಗಳವಾರ ಈ ಗ್ರಾಮ ಸಂಪೂರ್ಣ ಬಂದ್!

ಈ ೫ ದಿನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ, ಊರಿನಲ್ಲಿರುವ ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾ ಅಂಗಡಿಗಳು ಸೇರಿದಂತೆ ಹೇರ್‌ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು.



*ಅಡಿವೇಶ ಮುಧೋಳ
ಬೆಟಗೇರಿ: ಬಾಗಿಲು ಹಾಕಿದ ಅಂಗಡಿ-ಮುಂಗಟ್ಟುಗಳು… ಬಿಕೋ ಎನ್ನುತ್ತೀರುವ ಓಣಿಯ ಬೀದಿಗಳು… ಗ್ರಾಮದಲ್ಲಿ ಮೌನ ವಾತಾವರಣ… ಇದ್ಯಾವ ಬಂದ್ ಆಚರಣೆ.! ಎಲ್ಲಿ ಅನ್ನುತ್ತೀರಾ..?

ಇದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಗ್ರಾಮಸ್ಥರು ಕಟ್ಟಾ ವಾರ ಹಿಡಿದ ಆಚರಣೆ ಹಿನ್ನಲೆಯಲ್ಲಿ ಇದೇ ಮಂಗಳವಾರ ಜೂ.೨೦ ಸೇರಿದಂತೆ ವಾರದ ಐದು ಮಂಗಳವಾರ ಗ್ರಾಮದಲ್ಲೆಡೆ ಗೋಚರಿಸಲಿರುವ ದೃಶ್ಯವಿದು..!!
ಗ್ರಾಮದ ಜನ-ಜಾನುವಾರುಗಳಿಗೆ ರೋಗ -ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದ ಕಾರಣ ಮಳೆಗಾಗಿ ವಾರ ಹಿಡಿಯುವ ಸಂಪ್ರದಾಯದಂತೆ ಬೆಟಗೇರಿ ಗ್ರಾಮದಲ್ಲಿಯೂ ಸಹ ಇದೇ ಮಂಗಳವಾರ ಜೂ.೨೦ ಸೇರಿದಂತೆ ವಾರದ ಮಂಗಳವಾರ ಜು.೨೭, ಜು.೪, ಜು.೧೧, ಜು.೧೮ರಂದು ಒಟ್ಟು ಐದು ಮಂಗಳವಾರ ದಿನವನ್ನು ಸಂಪ್ರದಾಯದಂತೆ ಬೆಟಗೇರಿ ಗ್ರಾಮದಲ್ಲಿ ವಾರ ಹಿಡಿಯಲಾಗಿದೆ.
ಜೂ.೨೦ ರಂದು ಮುಂಜಾನೆ ೯ ಗಂಟೆಗೆ ಊರಿನ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಗ್ರಾಮದ ನಾಲ್ಕು ದಿಕ್ಕುಗಳ ಮುಖ್ಯ ರಸ್ತೆಗಳಿಗೆ ಊರಿನ ಸೀಮೆಗೆ ಕರಿ ಕಟ್ಟುವದು ನಡೆದ ಬಳಿಕ ಸ್ಥಳೀಯರಿಂದ ಪುರದೇವರ ದೇವಸ್ಥಾನಕ್ಕೆ ತೆರಳಿ ಪೂಜೆ, ನೈವೇದ್ಯ ಸಮರ್ಪಿಸುವ, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಸೇರಿದಂತೆ ವಿವಿಧ ಕಟ್ಟಾ ವಾರ ಆಚರಣೆಯ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.


ಐದು ಮಂಗಳವಾರ ಕಟ್ಟಾ ವಾರ ಆಚರಣೆ :

ಬೆಟಗೇರಿ ಗ್ರಾಮದಲ್ಲಿ ನಮ್ಮ ಪೂರ್ವಜರು ವಾರ ಬಿಡುವ ಪದ್ದತಿ ಅನುಸರಿಸಿಕೊಂಡು ಬಂದಿದ್ದರಿಂದ ವಾರದ ಮಂಗಳವಾರ ಒಂದು ದಿನ, ಒಟ್ಟು ೫ ಮಂಗಳವಾರ ದಿನ ಇಡೀ ಗ್ರಾಮದ ರೈತರ‍್ಯಾರೂ ವಾರದ ಈ ೫ ದಿನಗಳಂದು ಕೃಷಿ ಚಟುವಟಿಕೆ ಕೈಗೊಳ್ಳುವಂತಿಲ್ಲ, ವಾರದ ದಿನ ಎಲ್ಲರ ಮನೆಯಲ್ಲೂ ರೊಟ್ಟಿ ಮಾಡುವಂತಿಲ್ಲ, ವಗ್ಗರಣೆಯಂತೂ ಹಾಕುವಂತಿಲ್ಲ, ಮಾಂಸಾಹಾರ ಅಡುಗೆ ತಯಾರಿಸುವಂತಿಲ್ಲ, ಊರಿನಲ್ಲಿರುವ ಕಿರಾಣಿ, ಮದ್ಯದಂಗಡಿ, ಚಹಾಅಂಗಡಿ, ಪಾನ್ ಬೀಡಾ ಅಂಗಡಿಗಳು ಸೇರಿದಂತೆ ಹೇರ್‌ಕಟಿಂಗ್ ಅಂಗಡಿ ಸಹ ಬಾಗಿಲು ತೆರೆಯದೇ ಬಂದ್ ಮಾಡಲಾಗುವುದು. ಹೀಗಾಗಿ ವಾರ ಹಿಡಿದ ಪ್ರಯುಕ್ತ ೫ ಮಂಗಳವಾರ ದಿನ ಸಂಪ್ರದಾಯದಂತೆ ಗ್ರಾಮ ಸಂಪೂರ್ಣ ಬಂದ್ ಆಚರಿಸಿದಂತಿರುತ್ತದೆ ಎಂದು ಸ್ಥಳೀಯ ವಾರ ಹಿಡಿದ ಆಯೋಜನೆ ಸಮಿತಿಯ ಹಿರಿಯ ನಾಗರಿಕ ಮಾಯಪ್ಪ ಬಾಣಸಿ ತಿಳಿಸಿದ್ದಾರೆ.


ವಾರ ಬಿಡುವ ಸಂಪ್ರದಾಯದ ಹಿನ್ನಲೆ :

ಉತ್ತರ ಕರ್ನಾಟಕ ಭಾಗದ ಹಳ್ಳಿಗಳಲ್ಲಿ ಈ ವಾರ ಬಿಡುವ ಪದ್ಧತಿ ಇದೆ. ಗ್ರಾಮದ ಪುರ್ವಜರಿಂದ ಅನುಸರಿಸಿಕೊಂಡು ಬಂದ ವಾರ ಬಿಡುವ ಸಂಪ್ರದಾಯ ಪ್ರತಿ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ಗ್ರಾಮದ ಜನ-ಜಾನುವಾರುಗಳಿಗೆ ರೋಗ-ರುಜೀನ ಬರದಂತೆ ಹಾಗೂ ಸಕಾಲಕ್ಕೆ ಮಳೆಯಾಗದಿದ್ದರೆ, ಮಳೆಗಾಗಿ ವಾರದ ಒಂದು ದಿನ ಮಂಗಳವಾರ ಇಲ್ಲವೇ ಶುಕ್ರವಾರ ಸೇರಿದಂತೆ ಒಟ್ಟು ೫ ದಿನ ಇಡೀ ಗ್ರಾಮದ ಜನರು ಕೃಷಿ ಚಟುವಟಿಕೆ ನಿಲ್ಲಿಸಿ, ದೇವರಲ್ಲಿ ಪ್ರಾರ್ಥಿಸಿಕೊಳ್ಳುವ ಪದ್ದತಿಗೆ ವಾರ ಬಿಡುವ ಪದ್ದತಿ ಎನ್ನುತ್ತಾರೆ ಇಲ್ಲಿಯ ಹಿರಿಯ ನಾಗರಿಕರು.
ಕಟ್ಟಾ ವಾರ ಬಿಡುವ ಪದ್ಧತಿ : ಗ್ರಾಮದ ಸರ್ವ ಸಮುದಾಯದ ಹಿರಿಯರು ಸೇರಿ ವಾರಬಿಡುವ ದಿನ ನಿರ್ಧರಿಸಿ, ಗ್ರಾಮದಲ್ಲೆಡೆ ಡಂಗುರ ಹೊಡೆಯಲಾಗುತ್ತದೆ. ಪುರಜನರು ಪುರದೇವರ ಎಲ್ಲ ದೇವಸ್ಥಾನಕ್ಕೆ ತೆರಳಿ ನೈವೇದ್ಯ ಸಮರ್ಪಿಸುವದು, ದೇವಾಲಯ ಕಟ್ಟೆಗಳಿಗೆ ನೀರು ಹಾಕುವದು ಭಯ, ಭಕ್ತಿಯಿಂದ ನಡೆಯುತ್ತವೆ. ಅಷ್ಟೇ ಅಲ್ಲದೇ ವಾರ ಬಿಟ್ಟ ಮೊದಲ ದಿನದಂದು ಗ್ರಾಮದ ಹೊರವಲಯದ ನಾಲ್ಕು ದಿಕ್ಕುಗಳಲ್ಲಿ ಸೀಮೆಗೆ ಪುರ ದೇವರ ಪಲ್ಲಕ್ಕಿ ಉತ್ಸವದ ಮೂಲಕ ಕರಿಕಟ್ಟುವದು, ವಾರದ ದಿನಗಳಲ್ಲಿ ಊರಿನ ಪ್ರಮುಖ ಬೀದಿಗಳಲ್ಲಿ ಪುರದೇವರ ಪಲ್ಲಕ್ಕಿ ಉತ್ಸವ ನಡೆದು, ವಾರದ ಕೊನೆಯ ದಿನ ಕರಿ ಹರಿಯುವ ಕಾರ್ಯಕ್ರಮ ಕಟ್ಟುನಿಟ್ಟಿನ ಧಾರ್ಮಿಕ ವಿಧಿ ವಿಧಾನಗಳ ವೈಭವದಿಂದ ಊರಲ್ಲಿ ಕಟ್ಟಾ ವಾರ ಬಿಟ್ಟ ಆಚರಣೆ ನಡೆಯುತ್ತದೆ.
ಹಲವು ತಲೆಮಾರುಗಳಿಂದ ಗ್ರಾಮದಲ್ಲಿ ನಮ್ಮ ಪುರ್ವಜರು ವಾರ ಬಿಡುವ ಪದ್ದತಿ ಅನುಸರಿಸಿಕೊಂಡು ಬಂದಿದ್ದಾರೆ. ಊರಿಗೆ ಒಳ್ಳೆಯದಾಗುತ್ತದೆ ಎಂಬ ಉದ್ಧೇಶದಿಂದ ನಾವು ಗ್ರಾಮದಲ್ಲಿ ಈ ಪದ್ದತಿ ಮುಂದುವರಿಸಿಕೊಂಡು ಹೋಗುತ್ತಿದ್ದೆವೆ. ಕೆಲವೊಂದು ಕಟ್ಟುನಿಟ್ಟಿನ ವೃತಾಚರಣೆ ಮಾಡುವದರ ಮೂಲಕ ಪುರದೇವರಿಗೆ ಮೊರೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತೆವೆ. * ಪತ್ರೇಪ್ಪ ನೀಲಣ್ಣವರ. ಹಿರಿಯ ನಾಗರಿಕ, ಬೆಟಗೇರಿ, ತಾ. ಗೋಕಾಕ.



ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button