ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಕಡಿಮೆ ಪ್ರಮಾಣದ ನೀರು ಬಳಕೆ ಮಾಡಿ ಕಬ್ಬಿನ ಬದಲಾಗಿ ಶುಗರ ಬೀಟ್ ಅನ್ನುವಂತಹ ಬೆಳೆಯನ್ನು ಬೆಳೆದು ಸಕ್ಕರೆ ಉತ್ಪಾದನೆ ಮಾಡಲು ಪ್ರಯೋಗಗಳು ನಡೆಯುತ್ತಿವೆ ಎಂದು ಭಾರತದ ರಾಷ್ಟ್ರೀಯ ಮಳೆಯಾಶ್ರಿತ ಬೇಸಾಯ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಡಾ.ಅಶೋಕ ದಳವಾಯಿ ಅವರು ಹೇಳಿದರು.
ಗುರುವಾರ (ಜ.೩೦) ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ನಾನು ಬೆಳಗಾವಿಗೆ ಬಂದ ಉದ್ದೇಶ ಒಣ ಪ್ರದೇಶ ಹಾಗೂ ನೀರಾವರಿ ಪ್ರದೇಶದಲ್ಲಿ ನೀರಿನ ಬಗ್ಗೆ ಜಾಗೃತಿ ಮೂಡಿಸಬೇಕು. ಅಂಕಿ ಸಂಖ್ಯೆಗಳ ಪ್ರಕಾರ ನಮ್ಮ ದೇಶ ಇಡೀ ವಿಶ್ವದಲ್ಲಿ ಶೇ.೧೭ ರಷ್ಟು ಜನರಿದ್ದು ನೀರಿನ ಪ್ರಮಾಣ ಶೇ.೪ ರಷ್ಟು ಇದೆ ಎಂದು ತಿಳಿಸಿದರು.
ಜಾಗತಿಕ ಮಟ್ಟದಲ್ಲಿ ಶೇ ೭೦ ನೀರು ಕೃಷಿಗೆ ಬೆಳಕೆ ಆಗಿತ್ತಿದ್ದು, ಉಳಿದ ನೀರನ್ನು ಕೈಗಾರಿಕೆ, ಜನ ಬಳಕೆ ಹೀಗೆ ಇತ್ಯಾದಿ ಕ್ಷೇತ್ರಗಳಲ್ಲಿ ಬಳಕೆ ಆಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ನೀರಿನ ಸಮರ್ಪಕವಾಗಿ ಬಳಕೆ ಮಾಡಬೇಕು. ಯಾವ ಬೇಳೆಗೆ ಎಷ್ಟು ಪ್ರಮಾಣದ ನೀರು ಬಳಸಬೇಕೆಂದು ರೈತನಿಗೆ ತಿಳುವಳಿಕೆ ನೀಡಿ ಹೊಸ ಹೊಸ ತಂತ್ರಜ್ಞಾನ ಬಳಕೆ ಮಾಡಿ ಕೃಷಿ ಬೆಳೆಗಳನ್ನು ಬೆಳೆಸಬೇಕು ಎಂದರು.
ಕಬ್ಬಿನ ಬೆಳೆಗೆ ಹೆಚ್ಚು ನೀರು ಬೇಕಾಗುತ್ತದೆ. ಅದಕ್ಕಾಗಿ ಶುಗರ ಬೀಟ್ ಅನ್ನುವಂತಹ ಬೆಳೆಯನ್ನು ಬೆಳೆಯಲು ಪ್ರಯತ್ನ ಮಾಡಬೇಕು. ಶುಗರ ಬೀಟ್ ನಾಲ್ಕು ತಿಂಗಳಲ್ಲಿ ಬೆಳೆಯಬಹುದು. ಕಬ್ಬಿಗೆ ಹೊಲಿಸಿದರೆ ವರ್ಷಕ್ಕೆ ಎರಡು ಬಾರಿ ಶುಗರ ಬೀಟ್ ಬೆಳಯಬಹುದು ಎಂದು ಡಾ.ಅಶೋಕ ದಳವಾಯಿ ಅವರು ವಿವರಿಸಿದರು.
ಶುಗರ ಬೀಟ್ ಬೆಳೆಗೆ ಕಡಿಮೆ ಪ್ರಮಾಣದ ನೀರು ಬೇಕಾಗುತ್ತದೆ. ಕಬ್ಬಿಗೆ ಹೋಲಿಸಿದರೆ ಶೇ.೩೦ ರಿಂದ ೪೦ ರಷ್ಟು ಕಡಿಮೆ ನೀರು ಬೇಕಾಗುತ್ತದೆ. ಹೆಚ್ಚಾಗಿ ಕಬ್ಬು ಬೆಳೆಯುವ ಪ್ರದೇಶಗಳಲ್ಲಿ ಶುಗರ ಬೀಟ್ ಬೆಳೆಯಬಹುದು ಎಂಬುದನ್ನು ನೋಡಬೇಕು. ಮುಖ್ಯವಾಗಿ ಶುಗರ ಬೀಟ್ ಬೆಳೆದ ನಂತರ ಅದನ್ನು ಕಾರ್ಖಾನೆಗೆ ಕಳಸಬೇಕು. ಶುಗರ ಬೀಟ್ ಬೆಳೆಯುವ ನಿಟ್ಟಿನಲ್ಲಿ ಪ್ರಯೋಗಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಐರೋಪ್ಯ ರಾಷ್ಟ್ರಗಳಲ್ಲಿ ಈ ಶುಗರ ಬೀಟ್ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಪ್ರಾಯೋಗಿಕವಾಗಿ ಪಂಜಾಬ್ ರಾಜ್ಯದಲ್ಲಿ ಈಗಾಗಲೇ ೮ ಸಾವಿರ ಎಕರೆಯಲ್ಲಿ ಈ ಬೆಳೆ ಬೆಳೆಯಲಾಗುತ್ತಿದೆ. ಅದನ್ನು ಹೊರತು ಪಡಿಸಿ ದೇಶದ ಬೇರೆ ಬೇರೆ ಕಡೆಗಳಲ್ಲಿ ಶುಗರ ಬೀಟ್ ಬೆಳಯಲಾಗುತ್ತಿದೆ. ಆದರೆ ಹಮಾನಕ್ಕೆ ತಕ್ಕಂತೆ ಈ ಬೆಳೆಯನ್ನು ಬೆಳೆಯಬೇಕು. ಇಲ್ಲವಾದರೆ ರೋಗಗಳು ಹರಡುವ ಸಾಧ್ಯತೆಗಳಿವೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಶುಗರ ಬೀಟ್ ಬೆಳೆಯಲು ತರಬೇತಿ ನೀಡಲಾಗುವುದು ಎಂದು ಭಾರತದ ರಾಷ್ಟ್ರೀಯ ಮಳೆಯಾಶ್ರಿತ ಬೇಸಾಯ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿರುವ ಡಾ.ಅಶೋಕ ದಳವಾಯಿ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬೆಳಗಾವಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ. ಆರ್.ಬಿ.ಕಂಡಗಾವೆ, ಮೋಹನ ಬಾಜಿಕರ ಅವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ