ಖಾಸಗಿ ವಿಡಿಯೋ ಹರಿಬಿಡುವ ಬೆದರಿಕೆ, ವಿಷ ಸೇವಿಸಿ ಕುಟುಂಬ ಆತ್ಮಹತ್ಯೆಗೆ ಯತ್ನ: ಓರ್ವ ಸಾವು
ಪ್ರಗತಿವಾಹಿನಿ ಸುದ್ದಿ: ಮೊಮ್ಮಗಳ ಖಾಸಗಿ ವೀಡಿಯೋ ಹರಿ ಬಿಡುತ್ತೇನೆಂಬ ಯುವಕನ ಬ್ಲಾಕ್ ಮೇಲ್‌ಗೆ ಹೆದರಿದ ಕುಟುಂಬವೊಂದು ವಿಷ ಸೇವಿಸಿದ್ದು, ಈ ವೇಳೆ ಓರ್ವ ಮೃತಪಟ್ಟ ಧಾರುಣ ಘಟನೆ ನಡೆದಿದೆ.
ಇನ್ನು ಅಪ್ರಾಪ್ತೆ ಜೊತೆ ಸಲುಗೆ ಬೆಳೆಸಿ ಆಕೆಯ ಖಾಸಗಿ ಕ್ಷಣ ಸೆರೆ ಹಿಡಿದ ಯುವಕನ ಕಾಮಚೇಷ್ಟೆಗೆ ಇಡೀ ಕುಟುಂಬವೇ ಈಗ ಕಣ್ಣೀರಲ್ಲಿ ಮುಳುಗಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಚಂದಗಾಲು ಗ್ರಾಮದ ಮಹಾದೇವ ನಾಯಕ ಮೃತಪಟ್ಟರೆ, ಇವರ ಪತ್ನಿ, ಮಗಳು, ಮೊಮ್ಮಗಳು ಸಿಮ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಮಹದೇವ ನಾಯಕರ ಮೊಮ್ಮಗಳು ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದು, ಚೀರನಹಳ್ಳಿ ಗ್ರಾಮದ ಲೋಕೇಶ್ ಜೊತೆ ಸ್ನೇಹವಿತ್ತು. ಸ್ನೇಹವನ್ನೇ ಬಂಡವಾಳ ಮಾಡಿಕೊಂಡು ಸಲುಗೆ ಬೆಳೆಸಿಕೊಂಡ ಯುವಕ ಅಪ್ರಾಪ್ತೆಯನ್ನು ಚುಂಚನಕಟ್ಟೆಗೆ ಕರೆದೊಯ್ದು ಖಾಸಗಿ ವೀಡಿಯೋ ಸೆರೆ ಹಿಡಿದಿದ್ದ. ಬಳಿಕ, ತಾನು ಹೇಳಿದ್ದನ್ನು ಕೇಳದಿದ್ದರೆ ವೀಡಿಯೋ ಹರಿ ಬಿಡುವುದಾಗಿ ಹುಡುಗಿ ಮನೆಗೇ ಬಂದು ಹೆದರಿಸಿದ್ದ.
ಯುವಕನ ಅಟಾಟೋಪಕ್ಕೆ ಬೇಸತ್ತ ಮಹಾದೇವ ನಾಯಕ ಕುಟುಂಬ ಕೆ.ಆರ್.ನಗರ ಪೊಲೀಸರಿಗೆ ದೂರು ಕೊಟ್ಟರೂ ಯಾವುದೇ ಕ್ರಮ ವಹಿಸದ ಆರೋಪ ಕೇಳಿಬಂದಿದೆ. ಪೊಲೀಸರು ಯಾವುದೇ ಕ್ರಮ ವಹಿಸದಿದ್ದದು, ವೀಡಿಯೋ ಹರಿಬಿಡುವ ಆತಂಕ ಎದುರಾಗಿ ಮಾನಕ್ಕೆ ಹೆದರಿದ ಕುಟುಂಬ ಶುಕ್ರವಾರ ಮಧ್ಯಾಹ್ನವೇ ಮಲೆ ಮಹದೇಶ್ವರ ಬೆಟ್ಟದತ್ತ ಬಂದಿದ್ದಾರೆ.
ಮಾದಪ್ಪನ ಬೆಟ್ಟದ ತಪ್ಪಲಾದ ತಾಳುಬೆಟ್ಟದಲ್ಲಿ ಕಾಡಿನಹಾದಿಯಲ್ಲಿ ನಾಲ್ವರು ಕ್ರಿಮಿನಾಶಕ ಸೇವಿಸಿ, ಈ ವೇಳೆ ಮಹಾದೇವ ನಾಯಕ ಮೃತಪಟ್ಟಿದ್ದು, ಇನ್ನು ಮೂವರ ಸ್ಥಿತಿ ಚಿಂತಾಜನಕವಾಗಿ ಸಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ