
ಪ್ರಗತಿವಾಹಿನಿ ಸುದ್ದಿ: ದೀಪಾವಳಿ ಪಟಾಕಿ ಕಿಡಿ ಸಿಡಿದಿದ್ದಕ್ಕೆ ಶುರುವಾದ ಜಗಳ ಮಚ್ಚು-ಲಾಂಗ್ನಿಂದ ಬಡಾವಣೆಯ ನಿವಾಸಿಗಳಿಗೆ ಪ್ರಾಣ ಬೆದರಿಕೆ ಹಾಕುವಷ್ಟರ ಮಟ್ಟಿಗೆ ಉಲ್ಬಣಗೊಂಡಿರುವ ಘಟನೆ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದಿದೆ.
ಆರೋಪಿಗಳು ಏರಿಯಾದಲ್ಲಿ ಹವಾ ಮೆಂಟೇನ್’ ಮಾಡಲು ದಾಂಧಲೆ ಮಾಡಿದ್ದಾರೆ. ಇದರಿಂದ ಬೆಚ್ಚಿಬಿದ್ದ ಸ್ಥಳೀಯರು, ಮೂವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ರಾತ್ರಿ 10 ಗಂಟೆ ಸುಮಾರಿಗೆ ನಡೆದ ಈ ಘಟನೆಯಲ್ಲಿ, ಬೈಕ್ನಲ್ಲಿ ತೆರಳುತ್ತಿದ್ದ ಅಮೀನ್ ಷರೀಫ್ಗೆ ಪಟಾಕಿಯ ಕಿಡಿ ತಾಗಿದ್ದು, ಸ್ಥಳೀಯರೊಂದಿಗೆ ಚಕಮಕಿ ಉಂಟಾಗಿದೆ. ಆಗ ಷರೀಫ್ ತನ್ನ ಸಹಚರರಾದ ಸೈಯದ್ ಅರ್ಬಾಸ್ ಮತ್ತು ಶೀದ್ ಖಾದರ್ ಸೇರಿ, ಮಚ್ಚು-ಲಾಂಗು ಹಿಡಿದು ವಾಪಸ್ ಬಂದು ಏರಿಯಾದಲ್ಲಿ ಅಟ್ಟಹಾಸ ಮೆರೆದಿದ್ದಾರೆ.
ಪುಂಡರು ಮಾರಕಾಸ್ತ್ರಗಳೊಂದಿಗೆ ಬಡಾವಣೆಯ ಜನರನ್ನು ಬೆದರಿಸುವ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾಸಲ್ಲಿ ಸೆರೆಯಾಗಿದೆ. ಸ್ಥಳೀಯ ಯುವಕರು ಧೈರ್ಯ ತೋರಿಸಿ ಮೂವರು ಆರೋಪಿಗಳನ್ನು ಹಿಡಿದು ಹೆಣ್ಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಿರಣ್ ಎಂಬುವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಗಳ ವಿರುದ್ಧ ಆರ್ಮ್ಸ್ ಆ್ಯಕ್ಟ್ ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.