ಪ್ರಗತಿವಾಹಿನಿ ಸುದ್ದಿ: ಐಶಾರಾಮಿ ಕಾರ್ ಮತ್ತು ಟ್ರಕ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಜನರು ಸಾವನ್ನಪ್ಪಿದ್ದು ಮೂವರು ಗಂಭೀರಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಸೋನಭದ್ರದ ರವಿತಾಲಿ ಗ್ರಾಮದಲ್ಲಿ ನಡೆದಿದೆ.
ಸರಕುಗಳನ್ನು ತುಂಬಿಕೊಂಡು ಸಾಗುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಎದುರಿನ ಲೈನ್ ಗೆ ಪಲ್ಟಿಯಾಗಿ ಛತ್ತೀಸ್‌ಗಢದಿಂದ ರಾಬರ್ಟ್ಸ್ಗಂಜ್ ಕಡೆಗೆ ಹೋಗುತ್ತಿದ್ದ ಎರಡು ಕಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ನಾಲ್ವರು, ಟ್ರಕ್ ಚಾಲಕ ಹಾಗೂ ಮತ್ತೊಂದು ವಾಹನದ ಚಾಲಕ ಸೇರಿದಂತೆ ಒಟ್ಟು ಆರು ಜನ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತರನ್ನು ಛತ್ತೀಸ್‌ಗಢದ ರಾಮಾನುಜ್‌ಗಂಜ್‌ನ ನಿವಾಸಿ ಸನಾವುಲ್ಲಾ ಖಲೀಫಾ (40) ಮತ್ತು ಅಂಬಿಕಾಪುರದ ವೈದ್ಯಕೀಯ ಕಾಲೇಜಿನ ರವಿ ಮಿಶ್ರಾ (45), ಟ್ರಕ್ ಚಾಲಕ ಉಮಾಶಂಕರ್ ಪಟೇಲ್ ಎಂದು ಗುರುತಿಸಲಾಗಿದ್ದು, ಇನ್ನೂ ಉಳಿದ ಮೂವರ ಗುರುತು ಪತ್ತೆಯಾಗಬೇಕಿದೆ.
ಗಾಯಗೊಂಡವರಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷ ಸೇರಿದ್ದು ಅವರನ್ನು ಸ್ಥಳೀಯ ಪೊಲೀಸರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಟ್ರಕ್ ಎದುರಿನ ಲೇನ್‌ಗೆ ತಿರುಗಲು ನಿಖರವಾದ ಕಾರಣವನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ