ವಿಧಾನಸೌಧಕ್ಕೆ ಪೊಲೀಸ್ ಸರ್ಪಗಾವಲು
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ರಾಜ್ಯರಾಜಕೀಯ ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುತ್ತಿದ್ದು, ವಿಧಾನಸೌಧಕ್ಕೆ ಭದ್ರತೆ ಬಿಗಿಗೊಳಿಸಲಾಗುತ್ತಿದೆ.
ಶುಕ್ರವಾರ ತೀರ್ಮಾನಿಸಿದಂತೆ ಇಂದು ವಿಶ್ವಾಸಮತ ಯಾಚನೆ ನಡೆಯಬೇಕಿದ್ದು, ಆ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಿರುವ ಸಾಧ್ಯತೆ ಇದೆ.
ಇಂದೇ ವಿಶ್ವಾಸಮತ ಯಾಚನೆ ಮಾಡುವಂತೆ ಸ್ಪೀಕರ್ ಇಂದು ಬೆಳಗ್ಗೆ ಕೂಡ ಸೂಚನೆ ನೀಡಿದ್ದಾರೆ. ಆದರೆ ಮೈತ್ರಿ ಪಕ್ಷಗಳು ಮಾತ್ರ ಸುಪ್ರಿಂ ಕೋರ್ಟ್ ತೀರ್ಪಿನ ನೆಪದಲ್ಲಿ ಇನ್ನು 2 ದಿನ ಮುಂದೂಡುವಂತೆ ಒತ್ತಡ ಹೇರುತ್ತಿದ್ದಾರೆ.
ಸದನದಲ್ಲಿ ಮಾತನಾಡಿದ ಸಂದರ್ಭದಲ್ಲಿ ಕಾಂಗ್ರೆಸ್ ನ ಕೃಷ್ಣಾ ಭೈರೇಗೌಡ ಸಹ ವಿಶ್ವಾಸಮತ ಯಾಚನೆ ಮುಂದೂಡುವಂತೆ ಕೋರಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 2 ಬಾರಿ ಸ್ಪೀಕರ್ ರಮೇಶ ಕುಮಾರ ಅವರನ್ನು ಭೇಟಿ ಮಾಡಿ ಇನ್ನೆರಡು ದಿನ ಅವಕಾಶ ನೀಡುವಂತೆ ವಿನಂತಿಸಿದರು.
ಆದರೆ ಸ್ಪೀಕರ್ ಮಾತ್ರ ಪದೇ ಪದೆ ಇಂದೇ ವಿಶ್ವಾಸಮತ ಯಾಚಿಸುವಂತೆ ಸೂಚಿಸುತ್ತಿದ್ದಾರೆ. ನನ್ನನ್ನು ಕಳಂಕಿತರನ್ನಾಗಿ ಮಾಡಬೇಡಿ. ಇಡೀ ದೇಶ, ಸುಪ್ರಿಂ ಕೋರ್ಟ್, ರಾಜ್ಯಪಾಲರು ಸದನವನ್ನು ನೋಡುತ್ತಿದ್ದಾರೆ. ಹಾಗಾಗಿ ವಚನಭ್ರಷ್ಠನಾಗಲು ನಾನು ಸಿದ್ದನಿಲ್ಲ ಎಂದು ರಮೇಶ್ ಕುಮಾರ ಸ್ಪಷ್ಟಪಡಿಸಿದ್ದಾರೆ.
ಹಾಗಾಗಿ, ಇಂದೇ ವಿಶ್ವಾಸಮತ ಯಾಚನೆ ಮಾಡಿದರೆ ಸೋಲು ಖಚಿತ ಎಂದು ಮೈತ್ರಿ ಪಕ್ಷಗಳು ಅರಿತಿರುವುದರಿಂದ ಗದ್ದಲ ಉಂಟಾಗಬಹುದೆನ್ನುವ ನಿರೀಕ್ಷೆಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಿರುವ ಸಾಧ್ಯತೆ ಇದೆ.
ಡಿಜಿಪಿ ನೀಲಮಣಿ ರಾಜು, ಪೊಲೀಸ್ ಆಯುಕ್ತ ಅಲೋಕ್ ಕುಮಾರ ಸಹ ವಿಧಾನಸೌಧಕ್ಕೆ ಆಗಮಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ