ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೇಂದ್ರ ಸರ್ಕಾರ ಮಂಡಿಸಿರುವ ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಆಡಳಿತ ಮತ್ತು ವಿಪಕ್ಷಗಳ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ. ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಪಕ್ಷ ಸದಸ್ಯರು ಮಸೂದೆ ಮೂಲಕ ರೈತರ ಕೃಷಿ ಭೂಮಿಯನ್ನು ಕಾರ್ಪೊರೇಟ್ ಸ್ವಾಧೀನಕ್ಕೆ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಇತ್ತೀಚೆಗೆ ಲೋಕಸಭೆಯಲ್ಲಿ ಅಂಗೀಕಾರವಾದ ಕೃಷಿ ಮಸೂದೆಗಳನ್ನು ಮಂಡಿಸಿದರು. ರೈತರು ಮತ್ತು ಬೆಳೆಗಳ ವ್ಯಾಪಾರ, ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, 2020 ಮತ್ತು ರೈತರ ಸಬಲೀಕರಣ ಮತ್ತು ಸಂರಕ್ಷಣೆ ಕುರಿತ ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಮಸೂದೆ 2020 ಮಸೂದೆಯನ್ನು ಮಂಡಿಸಿದರು.
ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಜ್ವಾ, ಈ ಮಸೂದೆಗಳಿಂದ ಅದಾನಿ ಮತ್ತು ಅಂಬಾನಿಯಂತಹ ಕಾರ್ಪೊರೇಟ್ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಲಾಭ ಮಾಡಿಕೊಡಲು ಮುಂದಾಗಿದೆ ಎಂದು ಕಿಡಿಕಾರಿದರು. ಬಜ್ಜಾ ಹೇಳಿಕೆಗೆ ಟಿಎಂಸಿ, ಡಿಎಂಕೆ ಸದಸ್ಯರು ಧ್ವನಿಗೂಡಿಸುತ್ತಿದ್ದಂತೆಯೇ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಲು ಆದೇಶ ನೀಡಿದರು.
ಉಪ ಸಭಾಪತಿ ನಡೆ ಖಂಡಿಸಿ ಟಿಎಂಸಿ ಸಂಸದ ಡೆರೆಕ್ ಒ ಬ್ರಿಯೆನ್, ಸದನದ ಬಾವಿಗಳಿದು ಉಪ ಸಭಾಪತಿ ಎದುರಲ್ಲೇ ರೂಲ್ ಬುಕ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಧ್ಯ ಪ್ರವೇಶಿಸಿದ ಭದ್ರತಾ ಸಿಬ್ಬಂದಿ, ಡೆರೆಕ್ ಅವರನ್ನು ತಡೆದರು.
ಕೃಷಿ ಮಸೂದೆ ಕುರಿತು ಸೂಕ್ತ ಚರ್ಚೆಗೂ ಅವಕಾಶ ಕೊಡದೇ, ಆತುರದಲ್ಲಿ ಧ್ವನಿ ಮತಕ್ಕೆ ಅವಕಾಶ ಕಲ್ಪಿಸಿದ ಸ್ಪೀಕರ್ ನಡೆಯನ್ನು ವಿಪಕ್ಷಗಳು ತೀವ್ರವಾಗಿ ಖಂಡಿಸಿದ್ದು, ದೇಶದ ರೈತರ ಪ್ರತಿಭಟನೆಯನ್ನೂ ಲೆಕ್ಕಿಸದೇ ಕೇಂದ್ರ ಸರ್ಕಾರ ಮಸೂದೆ ಜಾರಿಗೆ ತರುತ್ತಿರುವುದು ದುರದೃಷ್ಟಕರ ಎಂದು ಕಿಡಿಕಾರಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ