ಪ್ರಗತಿವಾಹಿನಿ ಸುದ್ದಿ, ನವದೆಹಲಿ – ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಸೋಮವಾರ ಬೆಳಗ್ಗೆ 6ರಿಂದ ಬುಧವಾರ ಬೆಳಗ್ಗೆ 6ರವರೆಗೆ ದೇಶಾದ್ಯಂತ ‘ಭಾರತ್ ಬಂದ್’ ಹೆಸರಿನಲ್ಲಿ ಮುಷ್ಕರಕ್ಕೆ ಕರೆ ನೀಡಿವೆ.
ಬ್ಯಾಂಕಿಂಗ್, ವಿಮೆ, ರಸ್ತೆ ಸಾರಿಗೆ, ವಿದ್ಯುಚ್ಛಕ್ತಿ, ಕಲ್ಲಿದ್ದಲು, ತೈಲ, ದೂರಸಂಪರ್ಕ, ಆದಾಯ ತೆರಿಗೆ ಸೇರಿ ವಿವಿಧ ವಲಯದ ಕಾರ್ಮಿಕರು ಈ ಮುಷ್ಕರಕ್ಕೆ ಬೆಂಬಲ ಘೋಷಣೆ ಮಾಡಿರುವುದರಿಂದ ಹಲವು ಸೇವೆಗಳಲ್ಲಿ ವ್ಯತ್ಯಯವಾಗುವ ನಿರೀಕ್ಷೆ ಇದೆ.
ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು, ಯಾವುದೇ ಸಂಸ್ಥೆಯನ್ನು ಖಾಸಗೀಕರಣ ಮಾಡಬಾರದು, ರಾಷ್ಟ್ರೀಯ ಆಸ್ತಿ ನಗದೀಕರಣ ಯೋಜನೆ ಕೈಬಿಡಬೇಕು, ಉದ್ಯೋಗ ಖಾತ್ರಿ ವೇತನ ಹೆಚ್ಚಿಸಬೇಕು, ಗುತ್ತಿಗೆ ನೌಕರರನ್ನು ಕಾಯಂಗೊಳಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳನ್ನು ಕಾರ್ಮಿಕ ಸಂಘಟನೆಗಳು ಮಂಡಿಸಿವೆ.
ಮಾರ್ಚ್ 28 ಮತ್ತು 29 ರಂದು ನಡೆಯುವ ಮುಷ್ಕರದಿಂದಾಗಿ ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(SBI) ತನ್ನ ಗ್ರಾಹಕರಿಗೆ ಈಗಾಗಲೇ ತಿಳಿಸಿದೆ.
ಮುಷ್ಕರದಿಂದ ಬ್ಯಾಂಕ್ ನಲ್ಲಿ ಕೆಲಸವು ಸೀಮಿತ ಪ್ರಮಾಣದಲ್ಲಿರಲಿದ್ದು, ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಬ್ಯಾಂಕಿಂಗ್ ವಲಯದ ಜೊತೆಗೆ ವಿಮಾ ವಲಯದ ಒಕ್ಕೂಟಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿದೆ.
ರೈಲ್ವೇ ಮತ್ತು ರಕ್ಷಣಾ ವಲಯಗಳ ಒಕ್ಕೂಟಗಳು ಹತ್ತಾರು ಸ್ಥಳಗಳಲ್ಲಿ ಮುಷ್ಕರ ಕೈಗೊಳ್ಳಲಿವೆ ಎಂದು ಟ್ರೇಡ್ ಯೂನಿಯನ್ ಗಳ ಹೇಳಿಕೆ ತಿಳಿಸಿದೆ.
ಬ್ಯಾಂಕ್ ಗಳ ಹೊರತಾಗಿ, ಕಲ್ಲಿದ್ದಲು, ಉಕ್ಕು, ತೈಲ, ಟೆಲಿಕಾಂ, ಅಂಚೆ, ಆದಾಯ ತೆರಿಗೆ, ತಾಮ್ರ, ಬ್ಯಾಂಕ್‌ಗಳು, ವಿಮೆ ಮುಂತಾದ ಕ್ಷೇತ್ರಗಳ ಒಕ್ಕೂಟಗಳು ಮುಷ್ಕರ ನೋಟಿಸ್ ಗಳನ್ನು ನೀಡಿವೆ.
ಮುಷ್ಕರದಿಂದಾಗಿ ಬ್ಯಾಂಕಿನ ಕಾರ್ಯನಿರ್ವಹಣೆ ಮೇಲೆ ಪರಿಣಾಮವಾಗುತ್ತದೆ. ಆದಾಗ್ಯೂ ಗ್ರಾಹಕರಿಗೆ ಹೆಚ್ಚಿನ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ತಿಳಿಸಿವೆ.
ದಿನದ ಇಪ್ಪತ್ನಾಲ್ಕೂ ತಾಸು ವಿದ್ಯುಚ್ಛಕ್ತಿ ಪೂರೈಕೆಯಾಗುವಂತೆ ಹಾಗೂ ರಾಷ್ಟ್ರೀಯ ಗ್ರಿಡ್‌ನಲ್ಲಿ ಸ್ಥಿರತೆ ಇರುವಂತೆ ನೋಡಕೊಳ್ಳಬೇಕು ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಭಾನುವಾರ ಎಲ್ಲ ರಾಜ್ಯ ವಿದ್ಯುತ್ ಕಂಪನಿಗಳಿಗೆ ಸೂಚನೆ ನೀಡಿದೆ.
https://pragati.taskdun.com/latest/bankholidynext-week/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ