ಪ್ರಗತಿವಾಹಿನಿ ಸುದ್ದಿ; ನ್ಯೂಯಾರ್ಕ್: ವಿಶ್ವಾದ್ಯಂತ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಇದೀಗ ಹಾಲಿವುಡ್ ದಂಪತಿಗಳಿಗೂ ತಗುಲಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ನಟ ಟಾಮ್ ಹ್ಯಾಂಕ್ಸ್ ಹಾಗೂ ಅವರ ಪತ್ನಿ ರೀಟಾ ವಿಲ್ಸನ್ ಅವರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.
ಟಾಮ್ ಇತ್ತೀಚೆಗೆ ಹೆಂಡತಿ ಜೊತೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಈ ವೇಳೆ ಇಬ್ಬರಿಗೂ ಸುಸ್ತಾದಂತೆ ಭಾಸವಾಗಿತ್ತು. ನೆಗಡಿ ಜ್ವರ ಕೂಡ ಕಾಣಿಸಿಕೊಂಡಿತ್ತು. ಜ್ವರಕ್ಕೆ ಚಿಕಿತ್ಸೆ ಪಡೆಯಲು ಇಬ್ಬರೂ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ವೈದ್ಯರು ರಕ್ತ ಪರೀಕ್ಷೆ ನಡೆಸಿದಾಗ ಕೊರೋನಾ ವೈರಸ್ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಆಸ್ಪತ್ರೆಯಲ್ಲಿ ಇವರಿಗೆ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ವಿಶ್ವಾದ್ಯಂತ 1,26,293 ಜನರಲ್ಲಿ ಕೊರೊನಾ ಹರಡಿದೆ. ವಿಶ್ವಾದ್ಯಂತ ಸೋಂಕು ಆವರಿಸುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‍ಓ) ಇದನ್ನು ವಿಶ್ವ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದೆ.
ಕೊರೊನಾಗೆ ಈವರೆಗೆ 4,633 ಜನ ಸಾವನ್ನಪ್ಪಿದ್ದಾರೆ. ಭಾರತದಲ್ಲಿ ನಿನ್ನೆ 61 ಜನರಿಗೆ ಸೋಂಕಿರುವುದು ಪತ್ತೆಯಾಗಿತ್ತು. ಇಂದು 67ಕ್ಕೆ ಹೆಚ್ಚಳವಾಗಿದೆ. ಇನ್ನು ರಾಜ್ಯದಲ್ಲಿ ನಾಲ್ವರಿಗೆ ಕೊರೊನಾ ತಗುಲಿದ್ದು, ಎಲ್ಲರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ