ಜೂನ್ ೨೧ ಅವಿಸ್ಮರಣೀಯ ದಿನ. ಅಂದು ಇಡೀ ಜಗತ್ತು ಯೋಗಮಯವಾಗುತ್ತದೆ. ವಿಶ್ವಸಂಸ್ಥೆಯು ೧೧.೧೨.೨೦೧೪ ರಂದು ನಡೆದ ಸಾಮಾನ್ಯ ಸಭೆಯಲ್ಲಿ ’ಅಂತರಾಷ್ಟ್ರಿಯ ಯೋಗ ದಿನ’ವನ್ನು ಜೂನ್ ೨೧ ರಂದು ಅಚರಿಸಬೇಕೆಂದು ತೀರ್ಮಾನಿಸಲಾಯಿತು.
ಅಂದಿನಿಂದ ಪ್ರತಿವರ್ಷ ಜೂನ್ ೨೧ ರಂದು ಜಾಗತಿಕ ಮಟ್ಟದಲ್ಲಿ ಅಂತರಾಷ್ಟ್ರಿಯ ಯೋಗದಿನವೆಂದು ಆಚರಿಸಲಾಗುತ್ತದೆ. ಜೂನ್ ೨೧ ’ಗ್ರೀಷ್ಮ ಸಂಕ್ರಾಂತಿ’ಯ ದಿನ, ಸೂರ್ಯ ಉತ್ತರದಿಕ್ಕಿನಿಂದ ಪೂರ್ವ ದಿಕ್ಕಿಗೆ ಚಲಿಸುವ ಸಮಯ. ಈ ಕಾರ್ಯಸಾಧನೆಯಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರೇರಣೆ ಬಹಳ ಮುಖ್ಯವಾದುದು. ೧೭೫ ರಾಷ್ಟ್ರಗಳು ಯೋಗ ದಿನಕ್ಕೆ ತಮ್ಮ ಸಹಮತಿಯನ್ನು ಸೂಚಿಸಿವೆ.
ಅಂತರಾಷ್ಟ್ರಿಯ ಯೋಗ ದಿನಾಚರಣೆಗಾಗಿ, ಈ ಬಾರಿ ೫ ನಗರಗಳು -ದೆಹಲಿ, ಅಹಮದಾಬಾದ್, ಸಿಮ್ಲಾ, ರಾಂಚಿ, ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರು ಆಯ್ಕೆಯಾಗಿವೆ. ಯೋಗ ದಿನಾಚರಣೆಗೆ ಕೇಂದ್ರ ಸರ್ಕಾರ, ಆಯುಷ್ ಮಂತ್ರಾಲಯ, ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಮತ್ತು ಅನೇಕ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಭಾರತ ತಪೋಭೂಮಿ, ಯೋಗಿಗಳ ತಾಣ, ಆಧ್ಯಾತ್ಮದಲ್ಲಿ ವಿಶ್ವದ ದಾರಿದೀಪವೆಂದು ಪ್ರಸಿದ್ಧವಾಗಿದೆ.
’ಯೋಗ’ ಎನ್ನುವ ಶಬ್ದದ ಉಗಮ ಸಂಸ್ಕೃತದ ಯುಜ್ನಿಂದ ಆಗಿದೆ. ಯುಜ್ ಎಂದರೆ ಜೋಡಿಸು, ಕೂಡಿಸು, ಸಂಬಂಧಿಸು. ಪತಂಜಲಿ ಮಹರ್ಷಿಗಳ ಪ್ರಕಾರ ’ಯೋಗಃಚಿತ್ತವೃತ್ತಿ ನಿರೋಧಃ’ ಯೋಗವೆಂದರೆ ಮನಸ್ಸಿನ ಚಂಚಲ ವೃತ್ತಿಗಳನ್ನು ನಿರೋಧಿಸುವುದು.
ವಸಿಷ್ಠ ಮಹರ್ಷಿಗಳು ಮನ: ಪ್ರಶಮನೋಪಾಯಃ ಯೋಗಃ ಇತಿ ಅಭಿಧೀಯತೆ ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗವೆಂದು ಹೇಳಿದ್ದಾರೆ. ಯೋಗಃ ಸಮತ್ವಂ ಉಚ್ಚತೇ’ ಯೋಗವೆಂದರೆ ಕಾರ್ಯವ್ಯವಹಾರದಲ್ಲಿ ಸಮಭಾವ, ಸಮಚಿತ್ತವಾಗಿರುವುದು. ಸ್ತುತಿ-ನಿಂದನೆ, ಮಾನ-ಅಪಮಾನ, ಸುಖ-ದುಃಖ, ನೋವು-ನಲಿವು ಇತರೆ ಪರಿಸ್ಥಿತಿಗಳಲ್ಲಿ ಸಮಭಾವವನ್ನು ಹೊಂದುವುದೇ ಯೋಗವೆಂದು ಭಗವದ್‌ಗೀತೆ ಹೇಳುತ್ತದೆ.
ಯೋಗವೆಂದರೆ ಕೆಲವರು ಪ್ರಾಣಾಯಾಮ ಅಥವಾ ಯೋಗಾಸನವೆಂದು ತಿಳಿದಿದ್ದಾರೆ. ಆದರೆ ಯೋಗವು ಆತ್ಮನ ಚಂಚಲ ಮನಸ್ಸನ್ನು ಏಕಾಗ್ರಗೊಳಿಸಬಲ್ಲ ಮನೋವ್ಯಾಯಾಮವಾಗಿದೆ. ಅದೇನೇ ಇರಲಿ ಯೋಗವೆಂದರೆ ಸರ್ವ ಮನೋವೃತ್ತಿಗಳ ಮೇಲೆ ಪ್ರಭುತ್ವವನ್ನು ಸ್ಥಾಪಿಸುವುದು.
ವರ್ತಮಾನ ಸಮಯದಲ್ಲಿ ಯೋಗದಲ್ಲಿ ಹಠಯೋಗ, ಸನ್ಯಾಸಯೋಗ, ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ, ರಾಜಯೋಗ, ಶುಭಯೋಗ, ಲಾಭಯೋಗ, ಯೋಗಾ-ಯೋಗ ಇತ್ಯಾದಿ ಅನೇಕ ಪ್ರಕಾರಗಳು ಇವೆ.
ಎಲ್ಲಾ ವಿಜ್ಞಾನಗಳಿಗಿಂತ ಭಿನ್ನವಾದ ಇನ್ನೊಂದು ವಿಜ್ಞಾನವಿದೆ. ಅದುವೇ ಯೋಗವಿಜ್ಞಾನ. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇದನ್ನು ಪ್ರಾಯೋಗಿಕವಾಗಿ ಕಲಿಸಲಾಗುತ್ತದೆ. ಈ ಸಂಸ್ಥೆಯ ಅಂಗಸಂಸ್ಥೆಯಾದ ’ರಾಜಯೋಗ ಶಿಕ್ಷಣ ಮತ್ತು ಸಂಶೋಧನೆ ಪ್ರತಿಷ್ಠಾನ’ವು ಯೋಗ-ವಿಜ್ಞಾನವನ್ನು ಪ್ರಚಾರ ಮತ್ತು ಪ್ರಸಾರ ಮಾಡುವ ಕಾರ್ಯದಲ್ಲಿ ನಿರತವಾಗಿದೆ.
ಇಲ್ಲಿ ಧರ್ಮ, ಜಾತಿ, ಮತ, ವಯಸ್ಸು. ವರ್ಣ ಭೇದವಿಲ್ಲದೆ ಸರ್ವರಿಗೂ ಯೋಗ ಶಿಕ್ಷಣವನ್ನು ಉಚಿತವಾಗಿ ಕಲಿಸಲಾಗುತ್ತದೆ. ಈ ಯೋಗವಿಜ್ಞಾನವು ಮನಸ್ಸು, ಬುದ್ಧಿ, ಸಂಸ್ಕಾರ, ಸ್ವಭಾವ, ವ್ಯವಹಾರ ಚಾರಿತ್ರ್ಯ ಇತ್ಯಾದಿಗಳಿಗೆ ಸಂಬಂಧಿಸಿದೆ. ಇಲ್ಲಿ ಆತ್ಮ ಮತ್ತು ಪರಮಾತ್ಮನ ನಡುವೆ ಸರ್ವಪ್ರಕಾರದ ಸಂಬಂಧವು ಹೇಗೆ ಜೋಡಿಸಬೇಕು ಎಂಬುದನ್ನು ತಿಳಿಸಲಾಗುತ್ತದೆ.
ಈ ಸಂಬಂಧಗಳಲ್ಲಿ ತಂದೆ, ಶಿಕ್ಷಕ, ಗುರುವಿನ ಸಂಬಂಧ ಅತಿ ಮುಖ್ಯ. ಆತ್ಮನಾಗಿ ಪರಮಾತ್ಮನ ಜೊತೆ ಮನನ, ಚಿಂತನೆ, ಮಿಲನ ಮಾಡಿದಾಗ ಯೋಗಿಯು ಮಗ್ನಾವಸ್ಥೆಯನ್ನು ತಲುಪುತ್ತಾನೆ. ಸ್ವಯಂ ಪರಮಾತ್ಮನೇ ಕಲಿಸುವ ರಾಜಯೋಗವು ಅತ್ಯಂತ ಸರಳ ಹಾಗೂ ಸಹಜ.
ಇದರಲ್ಲಿ ಮಾನವನ ಪ್ರವೃತ್ತಿಗಳ ಪರಿವರ್ತನೆ ಮತ್ತು ಶುದ್ಧೀಕರಣವಾಗಿ ಅವನ ಆಹಾರ-ವ್ಯವಹಾರಗಳು ಸುಧಾರಣೆಗೊಂಡು ಸಂಸ್ಕಾರಗಳು ಸತೋಪ್ರಧಾನವಾಗುತ್ತವೆ. ಹಾಗಾಗಿ ಸಾಮಾನ್ಯ ಮಾನವನು ದೇವ-ಮಾನವನಾಗುತ್ತಾನೆ. ಯೋಗವೆಂಬ ಈ ವಿಜ್ಞಾನವು ಮನುಷ್ಯನ ಉದ್ವೇಗಗಳನ್ನು ನಿಯಂತ್ರಿಸುತ್ತದೆ.
ಅವನ ವಿಚಾರಗಳನ್ನು ವ್ಯವಸ್ಥಿತ ಹಾಗೂ ಸರಳಿತಗೊಳಿಸುತ್ತದೆ. ಈ ವಿಜ್ಞಾನದಿಂದ ವ್ಯಕ್ತಿಯ ಮಾನಸಿಕ ಏಕಾಗ್ರತಾ ಶಕ್ತಿಯು ಹೆಚ್ಚುತ್ತದೆ. ಅಪಾರ ಶಾಂತಿಯ ಅನುಭವ ಆಗುತ್ತದೆ. ಪರಮಾತ್ಮನ ದಿವ್ಯಗುಣಗಳಾದ ಶಾಂತಿ, ಪವಿತ್ರತೆ, ಆನಂದ, ದಯಾ, ಸುಖ, ಪ್ರೇಮ ಇತರೆ ದಿವ್ಯಗುಣಗಳ ಅನುಭವ ಆಗುತ್ತದೆ.
ಅವನ ವರ್ತನೆಯಲ್ಲಿ ಪರಿವರ್ತನೆಯಾಗಿ ಮನಸ್ತಾಪ, ಈರ್ಷೆ-ದ್ವೇಷ, ಕ್ರೋಧ ಇತರೆ ವಿಕಾರಿಗುಣಗಳು ದೂರವಾಗುತ್ತವೆ. ಅವನ ಮನಸ್ಸಿನಲ್ಲ್ಲಿ ಉದ್ವೇಗಗಳ ಜ್ವಾಲಾಮುಖಿ ಸ್ಫೋಟಗೊಳ್ಳುವುದಿಲ್ಲ. ಮಾನಸಿಕ ಚಿಂತೆ ಇರುವುದಿಲ್ಲ. ಏಕರಸ ಸ್ಥಿತಿ ಅಥವಾ ಆನಂದದ ಸ್ಥಿತಿ ಅವನದಾಗಿರುತ್ತದೆ.
ಸಹಜ ರಾಜಯೋಗದಿಂದಾಗುವ ಆರೋಗ್ಯದ ಲಾಭಗಳು:
೧) ಯೋಗಾವಸ್ಥೆಯಲ್ಲಿ ಶ್ವಾಸೋಚ್ಛ್ವಾಸ ನಿಧಾನವಾಗಿ ನಡೆಯುವುದರಿಂದ ಯೋಗಿಯು ವಿಶ್ರಾಂತಿ ಹಾಗೂ ನೆಮ್ಮದಿಯ ಅನುಭವ ಪಡೆಯುವನು.
೨) ಯೋಗಾವಸ್ಥೆಯಲ್ಲಿ ಹೃದಯದಲ್ಲಿ ರಕ್ತ ಸಂಚಾರ ನಿಯಮಿತವಾಗಿ ನಿರ್ದಿಷ್ಟವಾಗಿ ಕಡಿಮೆಯಾಗುವುದರಿಂದ ಹೃದಯಕ್ಕೆ ಸಾಕಷ್ಟು ವಿಶ್ರಾಂತಿ ದೊರೆಯುತ್ತದೆ.
೩) ಯೋಗಾವಸ್ಥೆಯಲ್ಲಿ ಯೋಗಿಯ ಶರೀರದಲ್ಲಿ ಸಂಚರಿಸುವ ರಕ್ತದಲ್ಲಿ ಲ್ಯಾಕ್ಟಿಕ್ ಆಮ್ಲದ ಅಂಶವು ಶೀಘ್ರವಾಗಿ ಕೆಳಮಟ್ಟಕ್ಕೆ ಬರುವುದರಿಂದ ಸಂಪೂರ್ಣ ಶಾಂತಿಯ ಅನುಭವವಾಗುವುದಲ್ಲದೇ ಎಲ್ಲಾ ಪ್ರಕಾರದ ಉದ್ವೇಗ ಹಾಗೂ ನಿರುತ್ಸಾಹದಿಂದ ಮುಕ್ತಿ ಲಭಿಸಿ, ನರಮಂಡಲಕ್ಕೆ ಶಕ್ತಿಯು ದೊರೆಯುವುದಲ್ಲದೇ ಯಾವುದೇ ರೀತಿಯ ನರಗಳಿಗೆ ಸಂಬಂಧಿಸಿದ ರೋಗವು ನಿವಾರಣೆಯಾಗುತ್ತದೆ.
೪) ಯೋಗಾವಸ್ಥೆಯಲ್ಲಿ ಮಾನಸಿಕ ಉದ್ವೇಗ ದೂರವಾಗುವುದರಿಂದ ಮಾನವನ ತ್ವಚೆಯಲ್ಲಿ ಅಸಾಧಾರಣ ರೋಗ ನಿರೋಧಕಶಕ್ತಿಯು ಪ್ರಪುಲ್ಲಿತವಾಗುವುದರಿಂದ ಯೋಗಿಯು ಉಲ್ಲಾಸಭರಿತನಾಗುವನು.
೫) ಹೃದಯವಿಕಾರ, ರಕ್ತದೊತ್ತಡ. ಮಾನಸಿಕ ಅಶಾಂತಿ, ಅರೆಹುಚ್ಚು, ಕ್ರೋಧ, ಕಾಮ, ಮಾನಸಿಕ ಭಯದಿಂದ ಉಂಟಾದ ರೋಗಗಳೂ ಸಹ ಯೋಗದಿಂದ ಓಡಿ ಹೋಗುತ್ತವೆ.
೬) ಯೋಗ ವಿಜ್ಞಾನವು ಮನುಷ್ಯನ ಉದ್ವೇಗಗಳನ್ನು ನಿಯಂತ್ರಿಸಿ, ಅವನ ವಿಚಾರಗಳನ್ನು ವ್ಯವಸ್ಥಿತವಾಗಿಡುತ್ತದೆ.
೭) ಯೋಗದ ಫಲವಾಗಿ ನಾವು ಗಹನ ಶಾಂತಿಯ ಅನುಭವ ಮಾಡುತ್ತೇವೆ, ಆಗ ಕೊರ‍್ಟಿಕೋಸ್ಟಿರಾಯಿ ಗ್ರಂಥಿಯ ಅಂತಃಸ್ರಾವದ ಪ್ರಮಾಣ ಕಡಿಮೆಯಾಗಿ ಆರೋಗ್ಯಕ್ಕೆ ಅತ್ಯಂತ ಸಹಾಯಕಾರಿಯಾಗುತ್ತದೆ. ಅದು ನಮಗೆ ಪೆಪ್ಟಿಕ್ ಅಲ್ಸರ್, ರಕ್ತದೊತ್ತಡ. ಮಧುಮೇಹದಂತಹ ರೋಗಗಳಿಂದ ದೂರವಿಡುತ್ತದೆ. ಅಲ್ಲದೇ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ.
೮) ವೈಜ್ಞಾನಿಕವಾಗಿ ಹೇಳುವುದಾದರೆ ಯೋಗಿಯು ಏಕರಸ ಮತ್ತು ಅಂತರ್ಮುಖತೆ ಹಾಗೂ ಹರ್ಷಿತಮುಖತೆಯ ಸ್ಥಿತಿಯಲ್ಲಿ ಸದಾಕಾಲಕ್ಕೆ ಇರುವುದರಿಂದ ಅವನ ಮಾನಸಿಕ ಹಾಗೂ ಶಾರೀರಿಕ ಕ್ರಿಯೆಗಳಲ್ಲಿ ಅಸಾಧಾರಣ ಬದಲಾವಣೆಗಳಾಗಿ ನಿರೋಗಿ, ದೀರ್ಘಾಯುವಾಗಿ ತೃಪ್ತಿಮಯ ಜೀವನವನ್ನು ಪಡೆಯುವನು.
೯) ದುಃಖ, ರೋಗ, ಅಧೈರ್ಯ, ಆಸೆ, ಕಾಮ, ಕ್ರೋಧ, ಲೋಭ, ಮೋಹ, ಅಹಂಕಾರಗಳಾದ ಎಲ್ಲಾ ಮನೋರೋಗಗಳನ್ನು ಶಾಶ್ವತವಾಗಿ ನಿರ್ಮೂಲನೆ ಮಾಡಿ, ಶುದ್ಧ ಸಂಕಲ್ಪದಿಂದ ಸದಾ ಇರಲು ಅತಿ ಸುಲಭವಾದ ಏಕೈಕ ಮಾರ್ಗವೇ ಸಹಜ ರಾಜಯೋಗವಾಗಿದೆ.
೧೦) ಯೋಗದಿಂದ ಯೋಗಿಯು ಅತಿನಿದ್ದೆ, ಆಲಸ್ಯ, ಭಯ, ವ್ಯಕ್ತಿದ್ವೇಷ, ಜಾತಿ, ಮತ, ಲಿಂಗಭೇದ, ವಯೋಭೇದಗಳನ್ನು ನಿರ್ಮೂಲಮಾಡಿ ಪ್ರೇಮ, ದಯೆ, ಕರುಣೆ, ಪವಿತ್ರತೆಯಿಂದ ಕೂಡಿ ಕಮಲಪುಷ್ಪದಂತೆ ಅನಾಸಕ್ತನಾಗಿ ಇರಬಲ್ಲನು.
ವಿಶ್ವ ಆರೋಗ್ಯ ಸಂಸ್ಥೆಯು ’ಸಂಪೂರ್ಣ ಶಾರೀರಿಕ, ಮಾನಸಿಕ, ಸಾಮಾಜಿಕ, ಆರೋಗ್ಯವೇ ಆರೋಗ್ಯವೆಂದು ಸಾರಿದೆ. ಕೇವಲ ರೋಗಗಳಿಲ್ಲದಿರುವಿಕೆ ಪರಿಪೂರ್ಣ ಆರೋಗ್ಯವಲ್ಲ’ ಎಂದು ವ್ಯಾಖ್ಯಾನಿಸಿದೆ. ಯೋಗದಿಂದ ಆರೋಗ್ಯ ಭಾಗ್ಯ ಪಡೆಯುವುದು ಸಹಜವಾಗಿದೆ. ಬ್ರಹ್ಮಾಕುಮಾರಿ ಸಂಸ್ಥೆಯು ಜೂನ್ ತಿಂಗಳಲ್ಲಿ ಅಂತರಾಷ್ಟ್ರಿಯ ಮಟ್ಟದಲ್ಲಿ ಅನೇಕ ಕಾರ್ಯಯೋಜನೆಗಳನ್ನು ರೂಪಿಸಿದೆ.
ಜೂನ್ ೨೧ ರಂದು ದೇಶ ವಿದೇಶಗಳಲ್ಲಿರುವ ೮೫೦೦ ಶಾಖೆಗಳಲ್ಲಿ ಯೋಗ ಶಿಬಿರ, ವಿಚಾರಗೋಷ್ಠಿ, ಚರ್ಚೆ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
-ವಿಶ್ವಾಸ ಸೋಹೋನಿ
ಬ್ರಹ್ಮಾಕುಮಾರಿ ಮೀಡಿಯಾ ವಿಂಗ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ