Belagavi NewsBelgaum NewsKannada NewsKarnataka NewsNationalPoliticsTravel

*ಟ್ರ್ಯಾಕ್ ಮ್ಯಾನ್ ಸಮಯಪ್ರಜ್ಞೆ: ಉಳಿಯಿತು ನೂರಾರು ಪ್ರಯಾಣಿಕರ ಪ್ರಾಣ*

ಪ್ರಗತಿವಾಹಿನಿ ಸುದ್ದಿ: ರೈಲ್ವೆ ಟ್ರ್ಯಾಕ್ ಮ್ಯಾನ್ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರಿ ರೈಲು ದುರಂತ ತಪ್ಪಿದದ್ದು, ನೂರಾರು ಪ್ರಯಾಣಿಕರ ಪ್ರಾಣ ಉಳಿದಿದೆ. ಟ್ರ್ಯಾಕ್ ಮ್ಯಾನ್ ಮಹಾದೇವ ಅವರ ಕಾರ್ಯಕ್ಕೆ ಕೊಂಕಣ ರೈಲ್ವೆ ವಲಯದ ಅಧಿಕಾರಿಗಳು ಶ್ಲಾಘಿಸಿದ್ದಾರೆ.

ಕೊಂಕಣ ರೈಲ್ವೆಯ ಕುಮಟಾ-ಹೊನ್ನಾವರ ನಡುವೆ ಹಳಿಗಳ ಜೋಡಣೆಯ ವೆಲ್ಡಿಂಗ್ ಬಿಟ್ಟಿತ್ತು. ಇದನ್ನು ಬುಧವಾರ ನಸುಕಿನ 4.50ರ ಸಮಯದಲ್ಲಿ ಟ್ರ್ಯಾಕ್ ಮ್ಯಾನ್ ಮಹದೇವ ಅವರು ಗಮನಿಸಿದ್ದಾರೆ. ಕೂಡಲೇ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ತಿರುವನಂತಪುರ-ದಿಲ್ಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲನ್ನು ನಿಲ್ಲಿಸಲು ಕೂಡಲೇ ಕುಮಟಾ ನಿಲ್ದಾಣಕ್ಕೆ ಕರೆ ಮಾಡಿದ್ದಾರೆ. ಆದರೆ, ಅಷ್ಟರಲ್ಲಿ ರೈಲು ನಿಲ್ದಾಣದಿಂದ ಹೊರಟಿತ್ತು. ನಂತರ ಮಹಾದೇವ ರಾಜಧಾನಿ ರೈಲಿನ ಲೋಕೊ ಪೈಲಟ್ ಗೆ ಕರೆ ಮಾಡಿದರು. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ. 8 ನಿಮಿಷದಲ್ಲಿ ರೈಲು ವೆಲ್ಡಿಂಗ್ ಬಿಟ್ಟಿದ್ದ ಸ್ಥಳಕ್ಕೆ ಬರುವುದರಲ್ಲಿತ್ತು. ತಡ ಮಾಡದ ಮಹಾದೇವ, ಹಳಿ ಮೇಲೆ ಓಡಿ ಐದು ನಿಮಿಷದಲ್ಲಿ ಅರ್ಧ ಕಿ.ಮೀ. ಕ್ರಮಿಸಿ ರೈಲಿಗೆ ನಿಲ್ಲುವಂತೆ ಸೂಚನೆ ನೀಡಿದರು. ಇದರಿಂದ ಸಂಭಾವ್ಯ ಅಪಾಯ ತಪ್ಪಿತು. ಸಿಬ್ಬಂದಿ ಹಳಿ ಜೋಡಣೆ ಬಿಟ್ಟಿದ್ದ ಸ್ಥಳದಲ್ಲಿ ವೆಲ್ಡಿಂಗ್ ಮಾಡಿದ ನಂತರ ರೈಲು ಕಾರವಾರದ ಕಡೆಗೆ ಪ್ರಯಾಣ ಬೆಳೆಸಿತು.

ಮಹಾದೇವ ಅವರ ಸಮಯಪ್ರಜ್ಞೆಗೆ ರೈಲ್ವೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊಂಕಣ ರೈಲ್ವೆ ಸಿಎಂಡಿ ಸಂತೋಷ ಕುಮಾರ ಝಾ ಅವರು ಮಹಾದೇವ ನಾಯ್ಕ ಅವರಿಗೆ 15 ಸಾವಿರ ರೂ. ನಗದು ಬಹುಮಾನ ಘೋಷಿಸಿದ್ದಾರೆ. ಕೊಂಕಣ ರೈಲ್ವೆ ಸೀನಿಯರ್ ಎಂಜಿನಿಯರ್ ಬಿ.ಎಸ್.ನಾಡಗೆ ಮುರುಡೇಶ್ವರ ಸಮೀಪ ರೈಲ್ವೆ ಹಳಿ ಮೇಲೆಯೇ ಮಹಾದೇವ ನಾಯ್ಕ ಅವರನ್ನು ಸನ್ಮಾನಿಸಿ ಬಹುಮಾನ ನೀಡಿದ್ದಾರೆ. ಮಹಾದೇವ ಅವರ ಕಾರ್ಯವನ್ನು ಕೊಂಕಣ ರೈಲ್ವೆ ವಲಯ ಟ್ವೀಟ್ ಮಾಡಿ ಅಭಿನಂದಿಸಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button