
ಪ್ರಗತಿವಾಹಿನಿ ಸುದ್ದಿ: ರಾಜ್ಯದ ಬೀದಿಬದಿ ವ್ಯಾಪಾರಿಗಳ ಮೇಲೆ ಸಿದ್ದರಾಮಯ್ಯ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ಕೊಡಿಸಿ, ವಸೂಲಿ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆರೋಪ ಮಾಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ತೆರಿಗೆ ಇಲಾಖೆ ನೋಟಿಸ್ ಕಳುಹಿಸಿರುವುದು ಸರಿಯಲ್ಲ. ಈ ರೀತಿ ತೆರಿಗೆ ಇಲಾಖೆ ಮೂಲಕ ಸಿಎಂ ಸಿದ್ದರಾಮಯ್ಯ ವಸೂಲಿಗೆ ಇಳಿದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಣ್ಣ ವ್ಯಾಪಾರಿಗಳು ಮಾಡುತ್ತಿರುವ ಹೋರಾಟಕ್ಕೆ ಬಿಜೆಪಿ ಸಂಪೂರ್ಣವಾಗಿ ಬೆಂಬಲ ನೀಡಲಿದೆ ಎಂದರು.
ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಇತರ ಸಚಿವರು ಕೇಂದ್ರ ಸರ್ಕಾರದ ಮೇಲೆ ಬೆಟ್ಟು ತೋರಿಸುತ್ತಿದ್ದಾರೆ. ಆದರೆ ಇದು ರಾಜ್ಯ ಸರ್ಕಾರದ ಕೆಲಸ. ಮುಖ್ಯವಾಗಿ ಜಿಎಸ್‌ಟಿ ವ್ಯವಸ್ಥೆಯಲ್ಲಿ 3 ಸ್ಲಾಬ್‌ಗಳಿದ್ದು ಹಾಲು ಮತ್ತಿತರ ಕೆಲ ವಸ್ತುಗಳು ಜಿಎಸ್‌ಟಿ ವ್ಯಾಪ್ತಿಗೆ ಬರುವುದಿಲ್ಲ. ಆದರೂ ಸಹ ವ್ಯಾಪಾರಿಗಳಿಗೆ ನೋಟಿಸ್ ಕೊಟ್ಟಿದ್ದಾರೆ ಎಂದರು
ಎಲ್ಲರಿಗೂ ವಾಣಿಜ್ಯ ತೆರಿಗೆ ಇಲಾಖೆಯು ಶೇ.18 ರಷ್ಟು ತೆರಿಗೆ ಪಾವತಿಗೆ ನೋಟಿಸ್ ಕೊಡುತ್ತಿದೆ. ಖಜಾನೆ ಖಾಲಿ ಆಗಿದೆ ಹಾಗಾಗಿ ಯಾವುದರ ಬಗ್ಗೆಯೂ ಗಮನಕೊಡದೇ ವ್ಯಾಪಾರಿಗಳಿಗೆ ಸಮಸ್ಯೆ ಮಾಡುತ್ತಿದ್ದಾರೆ. ಇದರಿಂದ ವ್ಯಾಪಾರಿಗಳು ಆತಂಕಗೊಂಡಿದ್ದಾರೆ. ರಾಜ್ಯ ಸರ್ಕಾರ ತಕ್ಷಣವೇ ಈ ನಿರ್ಧಾರವನ್ನ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದರು.