ಪ್ರಗತಿವಾಹಿನಿ ಸುದ್ದಿ, ಕಾರವಾರ – ಜಿಲ್ಲೆಯಲ್ಲಿ ಸಾಂಪ್ರದಾಯಿಕ ಮರಳುಗಾರಿಕೆಗೆ ಪರವಾನಿಗೆ ಕೋರಿ ಬಂದಂತಹ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಪಾರಂಪರಿಕವಾಗಿ ಸಾಂಪ್ರದಾಯಿಕವಾಗಿ ಮರಳುಗಾರಿಕೆ ನಡೆಸುತ್ತಿರುವವರಿಗೆ ಮಾತ್ರ ಅನುಮತಿ ನೀಡಲು ತಿರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಅವರು ಹೇಳಿದರು.
ಗುರುವಾರ ಜಿಲ್ಲಾ ಮರಳು ಸಮಿತಿ ಹಾಗೂ ಕರಾವಳಿ ನಿಯಂತ್ರಣ ವಲಯ ಸಭೆಯಲ್ಲಿ ಅವರು ಮರಳುಗಾರಿಕೆಗೆ ಪರವಾನಿಗೆ ಕೋರಿ ಸ್ವೀಕರಿಸಲಾಗಿರುವ ಅರ್ಜಿಗಳ ಪರಿಶೀಲನೆ ನಡೆಸಿ ಮಾತನಾಡಿ, ಒಟ್ಟು ಸ್ವೀಕರಿಸಲಾಗಿರುವ ಅರ್ಜಿಗಳಲ್ಲಿ, ಸಾಂಪ್ರದಾಯಿಕ ಮರಳುಗಾರಿಕೆ ನಡೆಸುತ್ತಾ ಬಂದಿರುವ ಕಳೆದ ಸಾಲಿನಲ್ಲಿ ಪರವಾನಿಗೆ ಪಡೆದವರ ಅರ್ಜಿ, ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಈ ಹಿಂದೆ ಮರಳು ಗುತ್ತಿಗೆ ಪಡೆದಿದ್ದು ಕಳೆದ ಸಾಲಿನಲ್ಲಿ ಅನುಮತಿ ದೊರೆಯದೇ ಇರುವವರ ಅರ್ಜಿ, ದೋಣಿ ಹಾಗೂ ಬಂದರು ಜಾಗ ಇತ್ಯಾದಿಗಳ ದಾಖಲೆಗಳನ್ನು ಲಗತ್ತಿಸಿ ಪರವಾನಿಗೆಗೆ ಸಲ್ಲಿಸಲಾಗಿರುವವುಗಳನ್ನು ವಿಂಗಡಿಸಿ, ಇವುಗಳ ಪೈಕಿ ವಾಸಸ್ಥಳ ಪ್ರಮಾಣ ಪತ್ರ, ಹಿಂದಿನ ಪರವಾನಿಗೆ ಇತ್ಯಾದಿ ದಾಖಲೆಗಳನ್ನು ಪರಿಶೀಲಿಸಿ ಸಾಂಪ್ರದಾಯಿಕ ಮರಳುಗಾರಿಕೆ ಮಾನದಂಡವನ್ನು ಇಟ್ಟುಕೊಂಡು ಮರಳುಗಾರಿಕೆಗೆ ಅನುಮತಿ ನೀಡಲಾಗುವುದು ಮತ್ತು ಈ ಹಿಂದೆ ತಾತ್ಕಾಲಿಕ ಮರಳು ಪರವಾನಿಗೆ ಹೊಂದಿರುವ ೮೮ ತಾತ್ಕಾಲಿಕ ಮರಳು ಪರವಾನಿಗೆದಾರರು ಪ್ರಸ್ತುತ ಸಾಲಿನಲ್ಲಿ ನವೀಕರಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಸ್ಥಾನಿಕವಾಗಿ ಪರಿಶೀಲಸಿ ಮುಂದಿನ ಸಭೆಯಲ್ಲಿ ನಿರ್ಣಯಿಸಲಾಗುವುದೆಂದು ಎಂದು ಅವರು ಹೇಳಿದರು.
ಮರಳು ಸಾಗಾಟದ ಮೇಲೆ ನಿಗಾ ಇರಿಸಲು ಮರಳು ದಾಸ್ತಾನು ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾ ಹಾಗೂ ಎಲ್ಲಾ ಮರಳು ಸಾಗಾಣಿಕಾ ವಾಹನಗಳಿಗೆ ಮತ್ತು ಮರಳು ತೆಗೆಯಲು ಬಳಸುವ ದೋಣಿಗಳಿಗೆ ಜಿಪಿಎಸ್ ಅಳವಡಿಕೆ ಕಡ್ಡಾಯ ಮಾಡಲಾಗಿದೆ. ಕಳೆದ ವರ್ಷ ಕರೆಯಲಾಗಿದ್ದ ಜಿಪಿಎಸ್ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದು, ಜಿ.ಪಿ.ಎಸ್ ಸಾಧನಗಳ ವಾರ್ಷಿಕ ನಿರ್ವಹಣೆ ಮತ್ತು ಇತರೆ ಸೇವೆ ನೀಡಲು ಆಸಕ್ತ ಸಂಸ್ಥೆಯವರಿಂದ ಹೊಸದಾಗಿ ಟೆಂಡರ್ ಕರೆಯಬೇಕು ಎಂದರು.
ಕಾರವಾರ ತಾಲೂಕು ವ್ಯಾಪ್ತಿಯ ಕಾಳಿ ನದಿಯಲ್ಲಿ ಮರಳು ಪಟ್ಟಿಗಳನ್ನು ಗುರುತಿಸುವ ವಿಸಯಕ್ಕೆ ಸಂಭಂಧ ಪಟ್ಟಂತೆ ಕರಾವಳಿ ನಿಯಂತ್ರಣ ವಲಯ (ಸಿಆರ್‌ಜೆಡ್) ಅನ್ವಯ ತಿರ್ಮಾನಿಸಲಾಗುವುದೆಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ ರೋಶನ್ ಹಾಗೂ ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ