CrimeKannada NewsKarnataka NewsLatest

*ನಾಲೆಯಲ್ಲಿ ಈಜಲು ಹೋಗಿ ದುರಂತ*:*ಇಬ್ಬರು ಬಿ.ಇ ವಿದ್ಯಾರ್ಥಿಗಳ ಪೈಕಿ ಓರ್ವನ ಮೃತದೇಹ ಪತ್ತೆ*

ಪ್ರಗತಿವಾಹಿನಿ ಸುದ್ದಿ: ಈಜಲು ತೆರಳಿದ್ದ ಮೈಸೂರಿನ ಖಾಸಗಿ ಕಾಲೇಜಿನ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ವರುಣ ನಾಲೆಯಲ್ಲಿ ನೀರುಪಾಲಾಗಿದ್ದಾರೆ. ಈ ಪೈಕಿ ಓರ್ವ ವಿದ್ಯಾರ್ಥಿಯ ಮೃತದೇಹ ಪತ್ತೆಯಾಗಿದ್ದು, ಮತ್ತೊಬ್ಬನಿಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆ.ಆರ್. ಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಗೊಳ ಪಂಪ್‌ಲೈನ್ ರಸ್ತೆಯ ವರುಣ ನಾಲೆಯಲ್ಲಿ ಈ ದುರಂತ ಸಂಭವಿಸಿದೆ. ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಇ ವ್ಯಾಸಂಗ ಮಾಡುತ್ತಿದ್ದ ಪಾರ್ಥಸಾರಥಿ ಮತ್ತು ಅರ್ಜುನ್ ನಾಪತ್ತೆಯಾದ ವಿದ್ಯಾರ್ಥಿಗಳು.

ಶುಕ್ರವಾರ ಸ್ನೇಹಿತರೊಂದಿಗೆ ಇಬ್ಬರೂ ವರುಣ ನಾಲೆಗೆ ಈಜಲು ತೆರಳಿದ್ದರು. ಈ ವೇಳೆ ನಾಲೆಯಲ್ಲಿ ನೀರು ರಭಸವಾಗಿ ಹರಿಯುತ್ತಿದ್ದರೂ ಅದನ್ನು ಲೆಕ್ಕಿಸದೆ ನೀರಿಗೆ ಇಳಿದಿದ್ದಾರೆ. ಆದರೆ, ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರೂ ನಾಪತ್ತೆಯಾಗಿದ್ದಾರೆ.

ಘಟನೆ ಕಂಡ ಸ್ನೇಹಿತರು ತಕ್ಷಣ ಸ್ಥಳೀಯರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ತುರ್ತು ರಕ್ಷಣಾ ತಂಡ ಶೋಧ ಕಾರ್ಯ ಆರಂಭಿಸಿದೆ. ಇಂದು ಅರ್ಜುನ್ ಮೃತದೇಹವನ್ನು ನಾಲೆಯಿಂದ ಹೊರತೆಗೆಯಲಾಗಿದೆ.

ಇನ್ನೊಬ್ಬ ವಿದ್ಯಾರ್ಥಿ ಪಾರ್ಥಸಾರಥಿಗಾಗಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕೆ.ಆರ್. ಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button