
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಸರ್ಕಾರ ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆ ಮಾಡಿದ್ದು, ನಾಲ್ವರು ಐಎಎಸ್, ಐಪಿಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳ ವರ್ಗಾವಣೆ ಹಾಗೂ ಸೇವಾವಧಿ ವಿಸ್ತರಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದೆ.
ಈ ವರ್ಗಾವಣೆಯಲ್ಲಿ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಅವರಿಗೆ ಯಾವುದೇ ಹೊಸ ಹುದ್ದೆ ನೀಡದೇ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಸದ್ಯ ಅವರಿಗೆ ಸ್ಥಳ ನಿಯೋಜನೆ ಮಾಡಲಾಗಿಲ್ಲ.
ಚನ್ನಣ್ಣನವರ್ ಅವರ ಸ್ಥಾನಕ್ಕೆ ಹಿರಿಯ ಐಎಎಸ್ ಅಧಿಕಾರಿ ಗಂಗೂಬಾಯಿ ರಮೇಶ್ ಮಾನಕರ್ ಅವರನ್ನು ನೇಮಿಸಲಾಗಿದೆ. ಈ ಹಿಂದೆ ಕೆಎಸ್‌ಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದ ಅವರು ಇನ್ನು ಮುಂದೆ ಕಾರ್ಮಿಕರ ಕಲ್ಯಾಣ ಮಂಡಳಿಯ ಕಾರ್ಯದರ್ಶಿಯಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.
ಇನ್ನು ರಾಜ್ಯ ಗುಪ್ತಚರ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಐಪಿಎಸ್ ಅಧಿಕಾರಿ ನಿಶಾ ಜೇಮ್ಸ್ ಅವರನ್ನು ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.
ಕೆಎಸ್‌ಡಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಐಎಫ್‌ಎಸ್ ಅಧಿಕಾರಿ ಪ್ರಶಾಂತ್ ಪಿ.ಕೆ.ಎಂ. ಅವರನ್ನು ಬೆಂಗಳೂರಿನ ಪ್ರಧಾನ ಕಚೇರಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ (ಡಿಸಿಎಫ್) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಇದೇ ವೇಳೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿರುವ ಡಾ. ಬಿ.ಎಲ್. ಸುಜಾತಾ ರಾಥೋಡ್ ಅವರ ಗುತ್ತಿಗೆ ಆಧಾರಿತ ಸೇವಾವಧಿಯನ್ನು ಸರ್ಕಾರ ಮತ್ತೊಂದು ತಿಂಗಳ ಕಾಲ ವಿಸ್ತರಿಸಿದೆ. ಅಕ್ಟೋಬರ್ 1ರಿಂದ ಸೇವಾವಧಿ ವಿಸ್ತರಣೆ ಜಾರಿಗೆ ಬರಲಿದ್ದು, ನೇಮಕಾತಿಯ ನಿಯಮ ಮತ್ತು ಷರತ್ತುಗಳನ್ನು ಪ್ರತ್ಯೇಕ ಆದೇಶದಲ್ಲಿ ತಿಳಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



