Latest

ಶಿಕ್ಷಕರ ವರ್ಗಾವಣೆ: ಮತ್ತೊಂದು ಪತ್ರ ಬರೆದ ಹೊರಟ್ಟಿ

ಶಿಕ್ಷಕರ ವರ್ಗಾವಣೆ: ಮತ್ತೊಂದು ಪತ್ರ ಬರೆದ ಹೊರಟ್ಟಿ

 ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಶಿಕ್ಷಕರ ಕಡ್ಡಾಯ ವರ್ಗಾವಣೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಿ ವರ್ಗಾವಣೆ ಪ್ರಕ್ರಿಯೆ ಮುಂದುವರೆಸುವಂತೆ ಶಿಕ್ಷಣ ಖಾತೆ ಮಾಜಿ ಸಚಿವ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ. ಊಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ಪತ್ರ ಬರೆದಿದ್ದಾರೆ.

ಅವರ ಪತ್ರದ ಪೂರ್ಣ ಪಾಠ ಇಲ್ಲಿದೆ –

Related Articles

ರಾಜ್ಯದ ಶಿಕ್ಷಣ ಇಲಾಖೆಯಲ್ಲಿ ’ಎ’ ವಲಯದಲ್ಲಿ ೧೦ ವರ್ಷಗಳಿಗೂ ಹೆಚ್ಚಿನ ಅವಧಿಗೆ ಕಾರ್ಯನಿರ್ವಹಿಸಿದ ನೌಕರರನ್ನು ಕಡ್ಡಾಯ ವರ್ಗಾವಣೆ ಮಾಡಲು ನನ್ನ ಯಾವುದೇ ಆಕ್ಷೇಪಣೆಗಳು ಇರುವುದಿಲ್ಲ. ಎಲ್ಲರೂ ಎಲ್ಲಾ ವಲಯಗಳಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಆದರೆ ಈ ಕಾಯ್ದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿಕೊಂಡು ವರ್ಗಾವಣೆ ಆದೇಶಗಳನ್ನು ಜಾರಿಗೊಳಿಸಬೇಕಾಗಿ ನಾನು ತಮ್ಮನ್ನು ವಿನಂತಿಸುತ್ತೇನೆ.

ಪ್ರಾಥಮಿಕ ಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆಯಲ್ಲಿ ಸಮಸ್ಯೆಗಳು ಕಡಿಮೆ ಇವೆ. ಶಹರ ವಲಯಕ್ಕೆ ಹತ್ತಿಕೊಂಡಂತೆ ಇರುವ ಹಳ್ಳಿಗಳಲ್ಲಿ ಹೆಚ್ಚು ಪ್ರಾಥಮಿಕ ಶಾಲೆಗಳು ಇರುವುದರಿಂದ ಕಡ್ಡಾಯ ವರ್ಗಾವಣೆಗೊಂಡ ಹೆಚ್ಚು ಶಿಕ್ಷಕರು ಹತ್ತಿರದಲ್ಲೇ ಸ್ಥಳ ಪಡೆದಿರುವುದಿರಂದ ಸಮಸ್ಯೆಗಳು ಕಡಿಮೆ ಇವೆ. ಆದರೆ ಪ್ರೌಢಶಾಲಾ ಶಿಕ್ಷಕರಿಗೆ ನಗರಕ್ಕೆ ಹೊಂದಿಕೊಂಡಂತೆ ಹೆಚ್ಚಿನ ಶಾಲೆಗಳು ಇಲ್ಲದಿರುವ ಪ್ರಯುಕ್ತ ಶೇ.೯೦% ಸಮಸ್ಯೆಗಳು ಉದ್ಭವಿಸಿವೆ. ಇವರುಗಳನ್ನು ಸರಿಪಡಿಸುವುದು ಅವಶ್ಯವಾಗಿದೆ.

ಈಗಾಗಲೇ ಸೇವೆ ಸಲ್ಲಿಸಿದ್ದಾರೆ

ಪ್ರಸ್ತುತ ನಿಯಮಗಳ ಪ್ರಕಾರ ’ಎ’ ವಲಯದಲ್ಲಿನ ನೌಕರರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಿ ಶೇ.೨೦%ಕ್ಕೂ ಹೆಚ್ಚಿನ ಶಿಕ್ಷಕರ ಹುದ್ದೆಗಳು ಖಾಲಿ ಇರುವ ಸ್ಥಳಗಳಿಗೆ ವರ್ಗಾವಣೆ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ. ಇದರಿಂದ ನೌಕರರು ಸುಮಾರು ೨೫೦-೩೦೦ ಕಿ.ಮೀ ವರೆಗೆ ವರ್ಗಾವಣೆಯಾಗಿ ಹೋಗಬೇಕಾಗಿರುತ್ತದೆ.

ಪ್ರಸ್ತುತ ವರ್ಗಾವಣೆಗೊಂಡ ಶಿಕ್ಷಕರು ಈ ಕಾಯ್ದೆ ಬರುವ ಮೊದಲು ಹಳ್ಳಿಗಳಲ್ಲಿ (ಸಿ ವಲಯಗಳಲ್ಲಿ) ಈಗಾಗಲೇ ತಮ್ಮ ಗರಿಷ್ಠ ಸೇವೆ ಸಲ್ಲಿಸಿದ್ದಾರೆ. ಆದಾಗ್ಯೂ ಇವರಿಗೆ ಪುನ: ಸಿ-ವಲಯಕ್ಕೆ ಹೋಗುವ ಪ್ರಮೇಯ ಬಂದಿದೆ. ಆದರೂ ಕೂಡ ಇವರು ಹೋಗಲು ತಯಾರಿದ್ದಾರೆ. ಆದರೆ ಇದರಿಂದ ಶಿಕ್ಷಕರಿಗೆ ತೊಂದರೆಯಾಗುತ್ತಿದೆ. ಈ ರೀತಿ ನೀತಿಯಿಂದ ತೊಂದರೆಗೊಳಗಾಗಿ ವರ್ಗಾವಣೆಗೊಂಡ ಅನೇಕ ಉದಾಹರಣಗಳಿವೆ. ಇದರೊಂದಿಗೆ ವರ್ಗಾವಣೆಯಿಂದ ತೊಂದರೆಗೀಡಾದ ಶಿಕ್ಷಕರ ಪಟ್ಟಿಯನ್ನು ಪ್ರತ್ಯೇಕವಾಗಿ ಲಗತ್ತಿಸಲಾಗಿದೆ.

ಗೊಂದಲದ ಗೂಡಾಗಿದೆ

ಪ್ರಸ್ತುತ ವರ್ಗಾವಣೆ ಕಾಯ್ದೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಸದನದಲ್ಲಿ ಈ ಬಿಲ್ಲು ಬಂದಾಗ ಅಂದಿನ ವಿರೋಧಪಕ್ಷವರು ಸದನದಲ್ಲಿ ಧರಣಿ ಮಾಡಿದ್ದರಿಂದ ಯಾವ ಸದಸ್ಯರೂ ಇದರ ಬಗ್ಗೆ ಗಂಭೀರವಾಗಿ ಚರ್ಚಿಸದೇ ಬಿಲ್ಲು ಪಾಸಾಗಿರುತ್ತದೆ. ನಿಯಮ ಮಾಡುವಾಗ ಅಧಿಕಾರಿಗಳು ತಮಗೆ ತೋರಿದಂತೆ ಆದೇಶಗಳನ್ನು ತಿರುಚಿದ್ದರಿಂದ ಶಿಕ್ಷಕರ ವರ್ಗಾವಣೆ ಗೊಂದಲದ ಗೂಡಾಗಿದೆ. ಶಿಕ್ಷಕರು ಈ ಹಿಂದೆ ಸಿ ವಲಯದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಬೇಕಿತ್ತು.

ಆದರೂ ಈಗ ಕಡ್ಡಾಯ ವರ್ಗಾವಾಗುವ ಎಲ್ಲ ಪ್ರೌಢಶಾಲೆಯ ಶಿಕ್ಷಕರು ಬೇರೆ ಕಡೆಗೆ ಹೋಗಲು ಸಮ್ಮತಿಸಿರುವರು. ಆದರೆ ಇವರನ್ನು ತಾಲೂಕಿನಲ್ಲಿಯೇ ಅಥವಾ ಜಿಲ್ಲೆಯಲ್ಲಿಯೇ ಸಿ ವಲಯಕ್ಕೆ ವರ್ಗ ಮಾಡಬಹುದು. ನಾನು ದಿನಾಂಕ ೧೧-೦೯-೨೦೧೯ ರಂದು ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿ ಕೊಟ್ಟಿರುವೆ. ಅವರು ಸಹಮತ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ನಾನು ಹೇಳುವುದು ಇಷ್ಟೆ ಇದರಿಂದಾಗಿ ಶಿಕ್ಷಣದ ಮೇಲೆ ದುಷ್ಪರಿಣಾಮ ಬೀರಬಾರದೆಂಬುದು ನನ್ನ ವಿನಂತಿ.

ಅಧಿಕಾರಿಗಳಿಂದ ಗೊಂದಲ

ಅಲ್ಲದೇ ಜಿಲ್ಲಾ ಉಪನಿರ್ದೇಶಕರು ಹಾಗೂ ಕಛೇರಿ ಸಿಬ್ಬಂದಿಯವರು ಶಿಕ್ಷಕರಿಗೆ ಸರಿಯಾದ ಮಾಹಿತಿಯನ್ನು ಒದಗಿಸದೇ, ಖಾಲಿ ಹುದ್ದೆಗಳನ್ನು ಸರಿಯಾದ ಸಮಯದಲ್ಲಿ ಪ್ರಕಟಿಸದೇ ಗೊಂದಲ ಸೃಷ್ಟಿ ಮಾಡಿದ್ದಾರೆ. ಕೆಲವುಕಡೆ ಹೊರಗಡೆ ತೋರಿಸಿರುವುದು ಒಂದಾದರೆ ಒಳಗಡೆ ಬೇರೆ-ಬೇರೆ ಸ್ಥಳಗಳು ಇದ್ದುದರಿಂದ ಶಿಕ್ಷಕರು ಗಾಬರಿಯಾಗಿದ್ದಾರೆ. ಅಲ್ಲದೇ ಕೌನ್ಸಿಲಿಂಗ್ ನಡೆಯುವ ಸಮಯದಲ್ಲಿ ಶಿಕ್ಷಕರಿಗೆ ವಿಚಾರ ಮಾಡಲು ಕಾಲಾವಕಾಶ ನೀಡದೇ ತರಾತುರಿಯಲ್ಲಿ ಸ್ಥಳ ಆಯ್ಕೆಗೆ ಒತ್ತಡ ತಂದು ತಪ್ಪು ಸ್ಥಳಗಳ ಆಯ್ಕೆಗೆ ಪ್ರಚೋದಿಸಿ ಎಲ್ಲರನ್ನೂ ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ.

ಈ ರೀತಿ ಕಡ್ಡಾಯ ವರ್ಗಾವಣೆಗೆ ಒಳಗಾದ ನೌಕರರು ಸಾಮಾನ್ಯವಾಗಿ ತಮ್ಮ ೫೦ರ ನಂತರದ ಇಳಿ ವಯಸ್ಸಿನವರಿದ್ದು, ಅವರ ಮಕ್ಕಳು-ವಯೋವೃದ್ಧ ತಂದೆ-ತಾಯಿಯರನ್ನು ಕಟ್ಟಿಕೊಂಡು ದೂರದ ಊರುಗಳಿಗೆ ಹೋಗಿ ಕೆಲಸ ನಿರ್ವಹಿಸುವುದು ತೊಂದರೆಯಾಗುತ್ತದೆ. ದೂರದ ಊರುಗಳಲ್ಲಿ ಜೀವನ ಪ್ರಾರಂಭಿಸುವುದು ಸವಾಲಾಗುತ್ತದೆ. ಈ ವಯಸ್ಸಿಗಾಗಲೇ ಅನೇಕ ರೋಗ-ರುಜನಿಗಳು ಬಂದಿರುತ್ತವೆ. ಇದರಿಂದ ಶಿಕ್ಷಕರು ವಿಚಲಿತರಾಗುತ್ತಾರೆ.

ಕ್ಯಾಬಿನೇಟ್ ಸಭೆಯಲ್ಲಿ ಚರ್ಚಿಸಿ

ಇದು ಮುಂದುವರೆದಲ್ಲಿ ಶಿಕ್ಷಕರು ಮಾನಸಿಕ ಒತ್ತಡದಲ್ಲಿ ಸಿಲುಕುವುದಿರಂದ ನೈಜವಾಗಿ ನೀಡಬೇಕಾದ ಶಿಕ್ಷಣದ ಗುಣಮಟ್ಟವೂ ಕಡಿಮೆ ಆಗುತ್ತದೆ. ಆದ್ದರಿಂದ ಸಾಧ್ಯವಾದಷ್ಟು ನೌಕರರನ್ನು ಅವರ ಹತ್ತಿರದ ತಾಲ್ಲೂಕುಗಳಲ್ಲಿ, ಅಥವಾ ಜಿಲ್ಲೆಯಲ್ಲೇ ಹೊಂದಾಣಿಕೆ ಮಾಡಲು ಒತ್ತಾಯಿಸಿದೆ. ಶೇ. ೨೦%ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವ ಸ್ಥಳಗಳಿಗೆ ಹೊಸದಾಗಿ ನೇಮಕ ಹೊಂದುವ ಶಿಕ್ಷಕರನ್ನು ನಿಯುಕ್ತಿಗೊಳಿಸುವ ಮೂಲಕ ಕಾನೂನಿನ ಆಶಯವನ್ನು ಸರಿದೂಗಿಸಬಹುದಾಗಿದೆ.

ಕೂಡಲೇಕ್ಯಾಬಿನೇಟ್ ಸಭೆಯಲ್ಲಿ ಚರ್ಚಿಸಿ  ಪ್ರಸ್ತುತ ನಡೆಯುತ್ತಿರುವ ವರ್ಗಾವಣೆಯಲ್ಲಿ ಇಂತಹ ತೊಂದರೆಗಳನ್ನು ನಿವಾರಿಸುವಲ್ಲಿ ನಿಯಮಾವಳಿಗಳಿಗೆ ಪೂರಕ ತಿದ್ದುಪಡಿ ತರಬೇಕು. ಕ್ಯಾಬಿನೆಟ್ ಸಮಿತಿಗೆ ಮುಖ್ಯಮಂತ್ರಿಗಳೇ ಅಧ್ಯಕ್ಷರಾಗಿರುವುದರಿಂದ ತುರ್ತು ನಿರ್ಣಯಗಳನ್ನು ತೆಗೆದುಕೊಳ್ಳುವ ಅಧಿಕಾರವಿದೆ. ನಂತರ ಇದನ್ನು ಸಚಿವ ಸಂಪುಟದಲ್ಲಿ ಅನುಮೋದನೆ ಪಡೆಯಬಹುದು. ಇದಾದ ನಂತರ ತೊಂದರೆಗೀಡಾದ ನೌಕರರ ವರ್ಗಾವಣೆಗಳನ್ನು ಹತ್ತಿರದ ಸ್ಥಳಗಳಿಗೆ ಮರುನಿಯುಕ್ತಿಗೊಳಿಸಿ, ನಂತರ ವರ್ಗಾವಣೆ ಆದೇಶವನ್ನು ಜಾರಿಗೊಳಿಸಬೇಕೆಂದು ತಮ್ಮನ್ನು ಕೋರುತ್ತೇನೆ. ಇಲ್ಲದಿದ್ದರೆ ಇದರಿಂದ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತದೆ ಎಂದು ಭಾವಿಸಿದ್ದೇನೆ ಎಂದು ಹೊರಟ್ಟಿ ವಿವರಿಸಿದ್ದಾರೆ.

ಶಿಕ್ಷಕರ ವರ್ಗಾವಣೆ: ಬಸವರಾಜ ಹೊರಟ್ಟಿಯ 10 ಸಲಹೆಗಳು

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಹೊರಟ್ಟಿ ಆಗ್ರಹ

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button