Kannada NewsKarnataka NewsLatest

ಕನ್ನಡ ಕೃತಿಗಳು ಇಂಗ್ಲಿಷ್ ಗೆ ಅನುವಾದವಾಗಲಿ: ಡಾ. ವೆಂಕಟೇಶ ಮೂರ್ತಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅಖಿಲ ಭಾರತ ಮಟ್ಟದ ಮಾನ್ಯತೆ ಸಿಗುವಂತಾಗಲು ಇಂಗ್ಲಿಷಿಗೆ ಕನ್ನಡ ಅನುವಾದವಾಗಬೇಕು. ಶ್ರೇಷ್ಠ ಕೃತಿಗಳು ಇಂಗ್ಲಿಷ್ ನಲ್ಲಿ ಇಲ್ಲ ಎನ್ನುವ ಕಾರಣಕ್ಕೆ ಮಂಕುತಿಮ್ಮನ ಕಗ್ಗಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗಲಿಲ್ಲ. ಮಹತ್ವದ ಕೃತಿಗಳನ್ನು ಇಂಗ್ಲಿಷ್ ಗೆ ಅನುವಾದಿಸುವ ಕೆಲಸವಾಗಬೇಕಿದೆ ಎಂದು ಹಿರಿಯ ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಹೇಳಿದರು.


ನಗರದ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಪ್ರತಿಷ್ಠಾನ ಸಭಾಭವನದಲ್ಲಿ ರವಿವಾರ   ಆಯೋಜಿಸಲಾಗಿದ್ದ, ಡಾ. ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ, ಕಥಾ ಕಾದಂಬರಿ ಪ್ರಶಸ್ತಿ ಪ್ರದಾನ, ವಿಚಾರ ಸಂಕೀರಣ ಮತ್ತು ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ರೀತಿ, ಆನಂದ ಕಂದರಿಗೂ ಆಗಿದೆ. ಇಂಗ್ಲಿಷ್  ಕನ್ನಡದ ಪ್ರತಿಷ್ಠೆ ಮೇಲೆತ್ತಲು ಮಹತ್ವದ ಸಾಧನವಾಗಿದೆ. ಕನ್ನಡ ಇಂಗ್ಲಿಷ್  ಮೇಲೆ ಸವಾರಿ ಮಾಡುವ ಪಲ್ಲಕ್ಕಿ ಆಗಬೇಕು. ಆಗ ಗಾಂಧೀಜಿ ಕನಸಿನ ಸ್ವದೇಶಿ ರಾಜ್ಯ ಸ್ಥಾಪನೆಯಾಗುತ್ತದೆ. ಆಧುನಿಕ ಭಾರತಕ್ಕೆ ಆನಂದಕಂದರ ಕೊಡುಗೆ ಏನು ಎನ್ನುವುದನ್ನು ಇಡೀ ಜಗತ್ತಿಗೆ ತಿಳಿಸಬೇಕಾಗಿದೆ. ಹೀಗಾಗಿ ಅವರ ರಚನೆಗಳನ್ನು ಸಮರ್ಥವಾಗಿ ಇಂಗ್ಲಿಷ್ ಗೆ ಅನುವಾದ ಮಾಡಬೇಕು.
ಇಳಿವಯಸ್ಸಿನಲ್ಲಿ ಉತ್ಸಾಹ ಇರುವುದಿಲ್ಲ. ಸಾಹಿತ್ಯದ ಮಾತೃಶಕ್ತಿಯಾದ ನೆನಪು ಅಥವಾ ಸ್ಮರಣೆ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಸೃಜನಶೀಲ ಶಕ್ತಿಯೂ ಕಡಿಮೆಯಾಗುತ್ತದೆ. ಕವಿಗೆ ಇಂದ್ರಿಯಗಳು ಚುರುಕಾದಾಗ ಕವಿತೆಗಳಲ್ಲಿ ತೇಜಸ್ಸು ಅರಳಲು ಸಾಧ್ಯ.
ಕನ್ನಡದ ಕ್ರಿಯಾಶಕ್ತಿ ನಾಶವಾಗಿಲ್ಲ ಹಾಗೂ ಆತ್ಮಶಕ್ತಿ ಇನ್ನೂ ಇದೆ ಎನ್ನುವುದನ್ನು ಯುವ ಬರಹಗಾರರು ನಿರೂಪಿಸುತ್ತಿದ್ದಾರೆ. ವ್ಯಾಸ, ವಾಲ್ಮೀಕಿ, ಕುಮಾರವ್ಯಾಸರ ಶಕ್ತಿ ಕಡಿಮೆಯಾಗಿದೆಯೇ ಎನ್ನುವಾಗ ತರುಣ, ತರುಣಿಯರನ್ನು ನೋಡಿದರೆ ಆಶಾಭಾವ ಮೂಡುತ್ತದೆ. ಹೀಗಾಗಿ, ಯುವಜನರನ್ನು ಪ್ರೋತ್ಸಾಹಿಸಬೇಕು.
ಗಾಳಿ ಬಂದಾಗ ತೂರಿಕೊಳ್ಳುವವರ ಸಂಖ್ಯೆ ಕನ್ನಡದಲ್ಲಿ ಬಹಳಷ್ಟಿದೆ. ಹೀಗಾಗಿ ನಿಜವಾದ ಗಟ್ಟಿ ಕಾಳುಗಳನ್ನು ಗುರುತಿಸುವ ಕೆಲಸವನ್ನು ಅಕಾಡೆಮಿಗಳು, ಟ್ರಸ್ಟ್‌ಗಳು, ಪ್ರತಿಷ್ಠಾನಗಳು ಗುರುತಿಸಬೇಕು ಎಂದು ಸಲಹೆ ನೀಡಿದರು.

ಡಾ. ಸಿ ನಾಗಣ್ಣ ಮಾತನಾಡಿ, ಆನಂದ ಕಂದರ ಕಾವ್ಯ ಸಮಾಜ, ನಾಡಿನ ಸಂಸ್ಕತಿಯ ಹಿರಿಮೆಗೆ ಸಾಕ್ಷಿ. ಕಾಲ ಕಾಲಕ್ಕೂ ಕನ್ನಡವನ್ನು ಹಿಮ್ಮೆಟಿಸುವ ಕೆಲಸವಾಗುತ್ತಿದೆ. ಯುವ ಬರಹಗಾರದಿಂದ ಕನ್ನಡಕ್ಕೆ ಮತ್ತೆ ತೇಜಸ್ಸು ಬಂದಿದೆ. ಶ್ರೇಷ್ಠ ಕೃತಿಗಳು ದೇಶ ವಿದೇಶದಲ್ಲಿ ಮಿಂಚಬೇಕಾದರೆ ಇಂಗ್ಲಿಷ್ ಗೆ ಅನುವಾದವಾಗಬೇಕಿದೆ ಎಂದರು.
ಈ ಸಂದರ್ಭದಲ್ಲಿ ಡಾ. ಸಿ.ಕೆ. ನಾವಲಗಿ, ವಿದ್ಯಾವತಿ ಭಂಜತ್ರಿ, ಪ್ರೋ.ಶಶಿಧರ, ಚೆನ್ನಪ್ಪ ಅಂಗಡಿ, ಪ್ರೋ ಮಲ್ಲಿಕಾರ್ಜುನ ಹಿರೇಮಠ, ಡಾ. ಬಾಳಾ ಸಾಹೇಬ ಲೋಕಾಪುರ, ಪ್ರೋ ರಾಘವೇಂದ್ರ, ಡಾ. ಸರಜೂಕಾಟ್ಕರ್, ಆಶಾ ಕಡಪಟ್ಟಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button