Belagavi NewsBelgaum NewsKannada NewsKarnataka NewsNationalPolitics

*ಗ್ಯಾರಂಟಿಯಿಂದ ಖಜಾನೆ ಖಾಲಿ: ವಿಜಯೇಂದ್ರ ವಾಗ್ದಾಳಿ*

ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲ  

ಪ್ರಗತಿವಾಹಿನಿ ಸುದ್ದಿ: ಕರ್ನಾಟಕದ ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಬಿ.ವೈ. ವಿಜಯೇಂದ್ರ ಆರೋಪಿಸಿದರು. 

ತಾಲೂಕಿನ ಯಕ್ಸಂಬಾ ಪಟ್ಟಣದ ಶ್ರೀ ಬಿರೇಶ್ವರ ಭವನದಲ್ಲಿ ನಡೆದ ವಿಬಿಜಿ ರಾಮಜಿ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಖಜಾನೆ ಖಾಲಿಯಾಗಿದೆ. ಆದಾಯ ಹೆಚ್ಚಿಸಲು ಮದ್ಯದಂಗಡಿಗಳಿಗೆ ಪರವಾನಗಿ ನೀಡಲಾಗುತ್ತಿದೆ. ಸಿದ್ದರಾಮಯ್ಯ ಸರ್ಕಾರ ಮಹಿಳೆಯರ ಬಗ್ಗೆ ಕಾಳಜಿ ವಹಿಸುವುದಿಲ್ಲ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅನೇಕ ಭರವಸೆಗಳನ್ನು ನೀಡಿದರೂ ಅವು ಈಡೇರಿಲ್ಲ. ಆಡಳಿತಾರೂಢ ಶಾಸಕರೇ ಸರ್ಕಾರದ ವಿರುದ್ಧ ಮಾತನಾಡುತ್ತಿರುವುದು ರಾಜ್ಯದ ರಾಜಕೀಯ ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ ಎಂದರು. ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ಹೊಸ ಯೋಜನೆಯನ್ನೂ ತರಲಿಲ್ಲ ಎಂದು ಹೇಳಿದರು.

Home add -Advt

2.84 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆ ಹುಸಿಯಾಗಿದೆ. ನೇಮಕಾತಿ ಕೊರತೆಯಿಂದಾಗಿ ಹುಬ್ಬಳ್ಳಿನಲ್ಲಿ ಸಾವಿರಾರು ಯುವಕರು ಪ್ರತಿಭಟನೆ ನಡೆಸಿದರು. 

ಅವರ ಮೇಲೆ ಲಾಠಿಚಾರ್ಜ್ ನಡೆಸಲಾಗಿದೆ ಎಂದು ದೂರಿದರು. ರೈತರು, ಮಹಿಳೆಯರು, ಬಡವರು ಮತ್ತು ಯುವಕರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡಿ ತನ್ನ ವೈಫಲ್ಯವನ್ನು ಮರೆಮಾಚಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ವಿಬಿ ರಾಮ್‌ಜಿ ಯೋಜನೆಯ ಮೂಲಕ 100 ದಿನಗಳ ಉದ್ಯೋಗವನ್ನು 125 ದಿನಗಳಿಗೆ ಹೆಚ್ಚಿಸಲಾಗಿದೆ. ಪಂಚಾಯತ್ ಹಕ್ಕುಗಳು ಉಳಿಯುತ್ತವೆ. ಕಾಂಗ್ರೆಸ್ ತಪ್ಪು ಮಾಹಿತಿ ಹರಡುತ್ತಿದೆ ಎಂದು ಹೇಳಿದರು. 

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಉತ್ತಮ ಬದಲಾವಣೆ ತಂದಿದೆ ಎಂದು ಶ್ಲಾಘಿಸಿದರು. ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಪ್ರವಾಹ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಿದ್ದರು. 

ಮನೆಗಳಿಗೆ ಒಂದೂವರೆ ಲಕ್ಷದ ಬದಲು ಐದು ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಚಿಕ್ಕೋಡಿ ವಿಭಾಗದ ಅಭಿವೃದ್ಧಿಗೆ ಅವರು ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು.

ರಾಯಬಾಗ ಶಾಸಕ ದುರ್ಯೋಧನ ಐಜೊಳೆ ಮಾತನಾಡಿ ರಾಮ ಹೆಸರಿನಲ್ಲಿ ಈ ಯೋಜನೆ ಬಂದಿರುವುದರಿಂದ ಕಾಂಗ್ರೆಸ್ ನಡುಕ ಹುಟ್ಟಿದೆ. ವಿಕಸಿತ ಭಾರತಕ್ಕೆ ವಿಬಿಜಿ ರಾಮಜಿ ಅನುಕೂಲವಾಗಿದೆ. ಕಾಂಗ್ರೆಸ್ ಲೂಟಿ ಹೊಡೆಯುವ ಅಭ್ಯಾಸ ರೂಡಿ ಆಗಿ ಬಿಟ್ಟಿದೆ. ಗ್ಯಾರಂಟಿ ಹೆಸರಿನ ಮೇಲೆ ಭ್ರಷ್ಟಾಚಾರ ನಡೆದಿದೆ.ಬಿಜೆಪಿ ಒಳ್ಳೆಯ ಯೋಜನೆ ಜಾರಿ ಮಾಡಿದೆ ಆದರೆ ಅದನ್ನು ಅಪಪ್ರಚಾರ ಮಾಡಿ ಜನರಿಗೆ ಸುಳ್ಳ ಹೇಳುವುದನ್ನು ಕಾಂಗ್ರೆಸ್ ಸಂಪ್ರದಾಯ ಮುಂದುವರೆಸಿಕೊಂಡು ಹೋಗುತ್ತದೆ ಎಂದರು.

ದೇಶದಲ್ಲಿ ಹೊಸ ಉತ್ತಮ ಕಾನೂನು ಜಾರಿಗೆ ಬರುತ್ತಿರುವಾಗ, ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ. ಸಂಸತ್ತಿನಲ್ಲಿ ಚರ್ಚಿಸದೆ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಇದಕ್ಕಾಗಿ ಬಿಜೆಪಿ ಕಾರ್ಯಕರ್ತರು ಎಲ್ಲೆಡೆ ಈ ಯೋಜನೆಯ ಪ್ರಯೋಜನಗಳನ್ನು ಅರ್ಥಮಾಡಿಕೊಳ್ಳಬೇಕು. ಈ ಕಾನೂನು ಬಡವರ ವಿರುದ್ಧವಾಗಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಈ ಯೋಜನೆ ಕಾಂಗ್ರೆಸ್ ಗಿಂತ ಹೆಚ್ಚಿನ ಉದ್ಯೋಗವನ್ನು ಒದಗಿಸುತ್ತದೆ” ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ವೇದಿಕೆ ಮೇಲೆ ಶಾಸಕರಾದ ನಿಖಿಲ ಕತ್ತಿ. ಮಾಜಿ ಶಾಸಕರಾದ ವಿವೇಕರಾವ ಪಾಟೀಲ. ಶ್ರೀಮಂತ ಪಾಟೀಲ. ಮಹೇಶ ಕುಮಟೊಳ್ಳಿ. ಪಿ.ರಾಜೀವ. ಬಾಳಾಸಾಹೇಬ ವಡ್ಡರ.

ಮಹಾಂತೇಶ ಕವಟಗಿಮಠ. ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ. ಅಮೃತ ಕುಲಕರ್ಣಿ. ದೀಪಕ ಪಾಟೀಲ. ಮಹೇಶ ಭಾತೆ. ರಮೇಶ ಕಾಳನ್ನವರ. ದುಂಡಪ್ಪ ಬೆಂಡವಾಡೆ ಮುಂತಾದವರು ಇದ್ದರು.

ಬೆಳಗಾವಿ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸ್ವಾಗತಿಸಿದರು.ಶಾಸಕಿ ಶಶಿಕಲಾ ಜೊಲ್ಲೆ ವಂದಿಸಿದರು.

Related Articles

Back to top button