
ಪ್ರಗತಿವಾಹಿನಿ ಸುದ್ದಿ: ಅಂಗನವಾಡಿಯಿಂದ ಮನೆಗೆ ತೆರಳುತ್ತಿದ್ದ ಗರ್ಬಿಣಿ ಮೇಲೆ ಬೃಹತ್ ಮರ ಬಿದ್ದು ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ನಡೆದಿದೆ.
ಅಂಗನವಾಡಿ ಮುಗಿಸಿ ಮಕ್ಕಳೊಂದಿಗೆ ಮನೆಯತ್ತ ತೆರಳುತ್ತಿದ್ದ ವೇಳೆ ಕಿರವತ್ತಿಯ ಡೊಮಗೇರಿಯಲ್ಲಿ ಈ ದುರಂತ ಸಂಭವಿಸಿದೆ. 5ತಿಂಗಳ ಗರ್ಭಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವು ಮಕ್ಕಳು ಗಾಯಗೊಂಡಿದ್ದಾರೆ.
ಸಾವಿತ್ರಿ ಬಾಬು ಖರಾತ್(28) ಮೃತಪಟ್ಟಿರುವ 5 ತಿಂಗಳ ಗರ್ಭಿಣಿ. ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಶಾಂಭವಿ ಬಾಬು ಖರಾತ್ (4) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕೆತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ. ಘಟನೆಯಲ್ಲಿ ಸಾನ್ವಿ ಬಾಬು ಕೊಕರೆ (5), ವಿನಯ್ ಲಕ್ಕು ಖರಾತ್ (5), ಅನುಶ್ರೀ ಮಾಂಬು ಕೊಕರೆ (5) ಅಪಾಯದಿಂದ ಪಾರಾಗಿದ್ದಾರೆ.

ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸುದ್ದಿ ತಿಳಿದ ತಕ್ಷಣ ಶಾಸಕ ಶಿವರಾಮ ಹೆಬ್ಬಾರ್ ಯಲ್ಲಾಪುರ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು. ದುಃಖಿತರಾದ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬಿದರು.