*ಟ್ರೈಜಿಮಿನಲ್ ನ್ಯೂರಾಲ್ಜಿಯಾದಿಂದ ಬಳಲುತ್ತಿದ್ದ ವ್ಯಕ್ತಿಗೆ ಶಸ್ತ್ರಚಿಕಿತ್ಸೆ ಇಲ್ಲದೆಯೇ ಕಾಯಿಲೆ ವಾಸಿ ಮಾಡಿದ KLE ವೈದ್ಯರು*
ಏನಿದು ಟ್ರೈಜಿಮಿನಲ್ ನ್ಯೂರಾಲ್ಜಿಯಾ ಕಾಯಿಲೆ?
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ತೀವ್ರ ಮುಖದ ನೋವಿನಿಂದ ಬಳಲುತ್ತಿದ್ದ 60 ವರ್ಷದ ವ್ಯಕ್ತಿಯೋರ್ವ ಮುಖದ ಸಂವೇದನೆಯನ್ನು ಕಳೆದುಕೊಂಡು ಜೀವನದ ಪರಿಸ್ಥಿತಿಯಿಂದ ಬೇಸತ್ತು ಹೋಗಿದ್ದನು. ಅಸಹನೀಯವಾದ ನೋವಿನಿಂದ ಎಲ್ಲಿಯೂ ಪರಿಹಾರ ಸಿಗದಿದ್ದಾಗ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರಕ್ಕೆ ಚಿಕಿತ್ಸೆಗಾಗಿ ಆಗಮಿಸಿದಾಗ, ತಪಾಸಿಸಿದಾಗ ಅವರಲ್ಲಿ ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂದು ಕರೆಯಲ್ಪಡುತ್ತಿದ್ದ ರೋಗದಿಂದ ಬಳಲುತ್ತಿರುವದು ಕಂಡು ಬಂದಿತು. ತಡಮಾಡದ ವೈದ್ಯರು ಅವರಿಗೆ ಅತ್ಯಾಧುನಿಕವಾದ ಪರ್ಕ್ಯುಟೇನಿಯಸ್ ರೇಡಿಯೊ ಫ್ರೀಕ್ವೆನ್ಸಿ ಅಬ್ಲೇಶನ್ ಚಿಕಿತ್ಸಾ ಪ್ರಕ್ರಿಯೆಯ ಮೂಲಕ ದೀರ್ಘಕಾಲಿನ ನೋವು ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಶಸ್ತ್ರಚಿಕಿತ್ಸೆಯನ್ನು ತಪ್ಪಿಸಿದ್ದಾರೆ.
ವೈದ್ಯಕೀಯವಾಗಿ ಟ್ರೈಜಿಮಿನಲ್ ನ್ಯೂರಾಲ್ಜಿಯಾವನ್ನು ಸಾಮಾನ್ಯವಾಗಿ “ಆತ್ಮಹತ್ಯೆ ಕಾಯಿಲೆ” ಎಂದು ಕರೆಯಲಾಗುತ್ತದೆ, ಅದು ಉಂಟುಮಾಡುವ ನೋವಿನ ತೀವ್ರತೆಯಿಂದಾಗಿ, ಮುಖದ ಸಂವೇದನೆ ಮತ್ತು ಕಾರ್ಯಗಳಿಗೆ ಕಾರಣವಾದ ಟ್ರೈಜಿಮಿನಲ್ ನರದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯ ಜೀವನದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಈ ಯಶಸ್ವಿ ಚಿಕಿತ್ಸೆಯು ರೋಗಿಯನ್ನು ಶಸ್ತ್ರಚಿಕಿತ್ಸೆಯಿಂದ ರಕ್ಷಿಸುವುದಲ್ಲದೆ, ಚೇತರಿಕೆಯ ಸಮಯವನ್ನು ಗಮನಾರ್ಹವಾಗಿ ಕಡಿಮೆ ಮಾಡುವದಲ್ಲದೇ ದೈನಂದಿನ ಚಟುವಟಿಕೆಗಳನ್ನು ನೋವು-ಮುಕ್ತವಾಗಿ ಪುನರಾರಂಭಿಸಲು ಅನುವು ಮಾಡಿಕೊಡುತ್ತದೆ.
“ಪರ್ಕ್ಯುಟೇನಿಯಸ್ ರೇಡಿಯೊ ಫ್ರೀಕ್ವೆನ್ಸಿ ಅಬ್ಲೇಶನ್ ಪ್ರಕ್ರಿಯೆಯು ಟ್ರೈಜಿಮಿನಲ್ ನ್ಯೂರಾಲ್ಜಿಯಾದಂತಹ ದೀರ್ಘಕಾಲದ ನೋವಿನ ತೊಂದರೆಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುವಲ್ಲಿ ಸಹಕರಿಸುತ್ತದೆ. ಈ ತಂತ್ರಜ್ಞಾನವು ನೋವುಭರಿತ ದುಃಖವನ್ನು ನಿವಾರಿಸುವುದಲ್ಲದೆ, ರೋಗಿಗಳಿಗೆ ಶೀಘ್ರವಾಗಿ ಚೇತರಿಸಿಕೊಂಡು ಒಳ್ಳೆಯ ಗುಣಮಟ್ಟದ ಜೀವನ ಶೈಲಿಯನ್ನು ಕಲ್ಪಿಸುತ್ತದೆ. ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯು ಸುಧಾರಿತ ನೋವು ನಿರ್ವಹಣಾ ತಂತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ವಿವಿಧ ದೀರ್ಘಕಾಲದ ನೋವಿನ ತೊಂದರೆಯನ್ನು ನಿವಾರಿಸಲು ಹಲವಾರು ಕಾರ್ಯವಿಧಾನಗಳನ್ನು ಬಳಸುತ್ತದೆ. ಬೆನ್ನು, ಕ್ಯಾನ್ಸರ್, ಕುತ್ತಿಗೆ, ಮೊಣಕಾಲು, ಪೋಸ್ಟ್ ಹರ್ಪಿಟಿಕ್ ನರಶೂಲೆ, ಭುಜದ ನೋವು ಸೇರಿದಂತೆ ವಿವಿಧ ರೀತಿಯ ದೀರ್ಘಕಾಲಿನ ನೋವಿನಿಂದ ಬಳಲುತ್ತಿರುವವರಿಗೆ ಸಮಗ್ರ ಆರೈಕೆಯ ಬಹುಶಿಸ್ತೀಯ ವಿಧಾನವನ್ನು ಅನುಸರಿಸಲಾಗುತ್ತದೆ.
ಪೆರ್ಕ್ಯುಟೇನಿಯಸ್ ರೇಡಿಯೊ ಫ್ರೀಕ್ವೆನ್ಸಿ ಅಬ್ಲೇಶನ್ ವಿಧಾನವು ನೋವಿಗೆ ಕಾರಣವಾದ ನರ ಸಂಕೇತಗಳನ್ನು ಗುರಿಯಾಗಿಸಿ, ವಿದ್ಯುತ್ ಪ್ರವಾಹಗಳ ಬಳಕೆಯಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ ಎಂದು ಆಸ್ಪತ್ರೆಯ ಅರವಳಿಕೆ ಹಾಗೂ ಪೇನ್ ಕ್ಲಿನಿಕ್ ತಜ್ಞವೈದ್ಯರಾದ ಡಾ. ರವಿ ಕೆರೂರ್ ಅವರು ಹೇಳುತ್ತಾರೆ.
ಯಶಸ್ವಿ ಚಿಕಿತ್ಸಾ ಪ್ರಕ್ರಿಯೆ ನೆರವೇರಿಸಿದ ತಜ್ಞವೈದ್ಯರಾದ ಡಾ. ರವಿ ಕೆರೂರ ಹಾಗೂ ಅವರ ತಂಡವನ್ನು ಕೆಎಲ್‌ಇ ಸಂಸ್ಥೆಯ ಕರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ, ಆಡಳಿತ ಮಂಡಳಿಯ ಸದಸ್ಯರು ಹಾಗೂ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ, ಅರವಳಿಕೆ ವಿಭಾಗದ ಮುಖ್ಯಸ್ಥರಾದ ಡಾ ರಾಜೇಶ ಮಾನೆಅವರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ