ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಖ್ಯಾತ ಉದ್ಯಮಿ ಹಾಗೂ ಅವರ ಕುಟುಂಬ ಸದಸ್ಯರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಶಾಸಕ ವನಮಾ ವೆಂಕಟೇಶ್ವರ ರಾವ್ ಅವರ ಪುತ್ರ ವನಮಾ ರಾಘವೇಂದ್ರ ರಾವ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೊತೆಗುಡಂ ಜಿಲ್ಲೆಯ ಉದ್ಯಮಿ ರಾಮಕೃಷ್ಣ, ಅವರ ಪತ್ನಿ ಹಾಗೂ ಅವಳಿ ಪುತ್ರಿಯರು ಪಾಲೋಂಚಾದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೂ ಮುನ್ನ ಉದ್ಯಮಿ ಮಾಡಿದ್ದ ಸೆಲ್ಫಿ ವಿಡಿಯೋದಲ್ಲಿ ವನಮಾ ರಾಘವೇಂದ್ರ ರಾವ್ ತನ್ನ ಪತ್ನಿ ವಿರುದ್ಧ ಮಾನಹಾನಿಯಾಗುವಂತಹ ಅವಹೇಳನಕಾರಿ ಮಾತುಗಳನ್ನಾಡಿದ್ದು, ಅವಮಾನ ಸಹಿಸಲಾಗದೇ ಎಲ್ಲರೂ ಆತ್ಮಹತ್ಯೆಗೆ ನಿರ್ಧರಿಸಿದ್ದಾಗಿ ತಿಳಿಸಿದ್ದರು.
ಅಲ್ಲದೇ ತನ್ನ ಹಾಗೂ ತನ್ನ ಸಹೋದರಿ ನಡುವಿನ ಆಸ್ತಿ ವಿವಾದವನ್ನು ಕೂಡ ವನಮಾ ರಾಘವೇಂದ್ರ ರಾವ್ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಸಹೋದರಿಯೊಂದಿಗೆ ಅನ್ಯೋನ್ಯವಾಗಿ ವರ್ತಿಸಿ ನಮಗೆ ಅನ್ಯಾಯವಾಗುವಂತೆ ಮಾಡಿದ್ದಾನೆ ಎಂದು ವಿಡಿಯೋದಲ್ಲಿ ವಿವರಿಸಿದ್ದರು. ಬಳಿಕ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಆನ್ ಮಾಡಿ, ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ರಾಮಕೃಷ್ಣ ಕುಟುಂಬ ಆತ್ಮಹತ್ಯೆಗೆ ಶರಣಾಗಿತ್ತು.
ಘಟನೆಯಲ್ಲಿ ಉದ್ಯಮಿ ರಾಮಕೃಷ್ಣ, ಅವರ ಪತ್ನಿ ಹಾಗೂ ಓರ್ವ ಮಗಳು ಮೃತಪಟ್ಟಿದ್ದರೆ ಇನ್ನೋರ್ವ ಮಗಳು ಮಾತ್ರ ಬದುಕಿದ್ದಳು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆದಾಖಲಿಸಿ, ಅವಳಿಂದ ಪೊಲೀಸರು ಹೇಳಿಕೆ ಪಡೆದುಕೊಂಡಿದ್ದರು. ಘಟನೆ ಬೆನ್ನಲ್ಲೇ ಆರೋಪಿಗಳು ನಾಪತ್ತೆಯಾಗಿದ್ದರು. ವನಮಾ ರಾಘವೇಂದ್ರ ರಾವ್ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಆತನನ್ನು ಬಂಧಿಸಿದ್ದಾರೆ.
4 ಸಾವಿರ ಲಂಚ ಪಡೆದು 4 ವರ್ಷ ಜೈಲುಶಿಕ್ಷೆಗೆ ಗುರಿಯಾದ ಸಬ್ ರಿಜಿಸ್ಟ್ರಾರ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ