
ಮಂಗಳವಾರ ಸಚಿವ ಸಂಪುಟ ರಚನೆ, ಪ್ರಮಾಣವಚನ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು-
ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಮಂಗಳವಾರದ ಮುಹೂರ್ತ ಫಿಕ್ಸ್ ಆಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟೇರಿಯಿಂದಲೇ ಅಧಿಕೃತವಾಗಿ ಮಾಧ್ಯಮ ಪ್ರಕಟಣೆ ಹೊರಬಿದ್ದಿದೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಂದೇ ಸಂಜೆ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ.
ಇದನ್ನೂ ಓದಿ – ಯೋಜನೆಗಳು ರದ್ದು: ಯಡಿಯೂರಪ್ಪ ಸ್ಪಷ್ಟನೆ
ಶನಿವಾರ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚಿಸಿದ ನಂತರ ಮಂಗಳವಾರ ನೂತನ ಸಚಿವಸಂಪುಟ ರಚನೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಆದರೆ ಸಚಿವ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ ಸಿಗಲಿದೆ ಎನ್ನುವುದು ಇನ್ನೂ ಅಂತಿಮವಾಗಿಲ್ಲ.
ಯಡಿಯೂರಪ್ಪ ತೆಗೆದುಕೊಂಡು ಹೋಗಿದ್ದ ಸಚಿವರ ಸಂಭಾವ್ಯ ಪಟ್ಟಿಗೆ ಅಮಿತ್ ಶಾ ಇನ್ನೂ ಒಪ್ಪಿಗೆ ನೀಡಿಲ್ಲ. ಬಹುಶಃ ಸೋಮವಾರ ಸಂಜೆಯ ಹೊತ್ತಿಗೆ ಅವರು ಅಗತ್ಯ ಬದಲಾವಣೆಯೊಂದಿಗೆ ಅಂತಿಮ ಪಟ್ಟಿಯನ್ನು ರವಾನಿಸಬಹುದು.
18 ಸಚಿವರು?
ಈಗ ಬಂದಿರುವ ಮಾಹಿತಿ ಪ್ರಕಾರ ಮಂಗಳವಾರ 18 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ ಜಾತಿ ಮತ್ತು ಜಿಲ್ಲೆ ಆಧಾರದ ಮೇಲೆ ಪ್ರಾತಿನಿಧ್ಯ ನೀಡಲಾಗುತ್ತದೆ. ಜೊತೆಗೆ ಮಹಿಳಾ ಕೋಟಾ, ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ, ಬೆಂಗಳೂರು ಕೋಟಾ, ಪಕ್ಷ ನಿಷ್ಠೆ ಎಲ್ಲವನ್ನೂ ಪರಿಗಣಿಸಿ ಸಚಿವಸ್ಥಾನ ನೀಡಲಾಗುತ್ತಿದೆ.
ಅಮಿತ್ ಶಾ ಹಿರಿಯರಿಗಿಂತ ಕ್ರಿಯಾಶೀಲರಾಗಿರುವ ಯುವ ಶಾಸಕರಿಗೆ ಮೊದಲ ಆಧ್ಯತೆ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಂಘಪರಿವಾರದಿಂದ ಬಂದಿರುವವರನ್ನೂ ಪ್ರಥಮ ಆಧ್ಯತೆ ಮೇಲೆ ಪರಿಗಣಿಸಲಾಗುತ್ತದೆ ಎನ್ನಲಾಗಿದೆ.
ರಾಜ್ಯಾಧ್ಯಕ್ಷ ಸ್ಥಾನ ಯಾರಿಗೆ?
ಸಿ.ಟಿ.ರವಿ ಅಥವಾ ಬಸವರಾಜ ಬೊಮ್ಮಾಯಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎನ್ನುವ ಸುದ್ದಿ ಇದೆ.
ಬೆಂಗಳೂರಿನ ಆರ್. ಅಶೋಕ, ಅರವಿಂದ ಲಿಂಬಾವಳಿ, ಸುರೇಶ ಕುಮಾರ ಮತ್ತು ಅಶ್ವತ್ಥನಾರಾಯಣ ಸಂಭಾವ್ಯರ ಪಟ್ಟಿಯಲ್ಲಿದ್ದಾರೆ. ಮೈಸೂರಿನ ರಾಮದಾಸ ಬ್ರಾಹ್ಮಣರ ಕೋಟಾದಲ್ಲೂ ಪರಿಗಣಿಸಲ್ಪಡಬಹುದು.
ಇದನ್ನೂ ಓದಿ – ಯಡಿಯೂರಪ್ಪ ಸಂಪುಟದಲ್ಲಿ ಯಾರ್ಯಾರಿಗೆ ಸ್ಥಾನ?
ಹಿರಿಯರ ಪಟ್ಟಿಯಲ್ಲಿ ಕೆ.ಎಸ್.ಈಶ್ವರಪ್ಪ, ಉಮೇಶ ಕತ್ತಿ, ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ, ಸಿಎಂ ಉದಾಸಿ, ಬೋಪಯ್ಯ, ಬಾಲಚಂದ್ರ ಜಾರಕಿಹೊಳಿ, ವಿ.ಸೋಮಣ್ಣ, ಜೆ.ಸಿ.ಮಧುಸ್ವಾಮಿ, ಬಿ.ಶ್ರೀರಾಮುಲು ಮೊದಲಾದವರಿದ್ದಾರೆ.
ರೇಣುಕಾಚಾರ್ಯ, ಶಿವನಗೌಡ ನಾಯಕ್, ಕೋಟ ಶ್ರೀನಿವಾಸ ಪೂಜಾರಿ ಹೆಸರುಗಳು ಸಹ ಯಡಿಯೂರಪ್ಪ ಸಲ್ಲಿಸಿರುವ ಪಟ್ಟಿಯಲ್ಲಿವೆ.
ಮಹಿಳಾ ಕೋಟಾದಲ್ಲಿ ಶಶಿಕಲಾ ಜೊಲ್ಲೆ ಅಥವಾ ಪೂರ್ಣಿಮಾ, ವಿಧಾನಪರಿಷತ್ ಸದಸ್ಯರನ್ನು ಪರಿಗಣಿಸುವುದಾದರೆ ತೇಜಸ್ವಿನಿ ಗೌಡ ಹೆಸರಿದೆ.
ಬೆಳಗಾವಿಯಿಂದ ಯಾರ್ಯಾರು?
ಜೈನ್ ಕೋಟಾದಲ್ಲಿಅಭಯ ಪಾಟೀಲ ಪರಿಗಣಿಸಲ್ಪಡಬಹುದು. ಅಭಯ ಪಾಟೀಲ ಕ್ರಿಯಾಶೀಲರೂ ಮತ್ತು ಸಂಘವಲಯದಿಂದ ಬದವರೂ ಆಗಿರುವುದರಿಂದ ಹೆಚ್ಚಿನ ಅವಕಾಶವಿದೆ. ಆದರೆ ಬೆಳಗಾವಿಯಿಂದ ಬಾಲಚಂದ್ರ ಜಾರಕಿಹೊಳಿ, ಉಮೇಶ ಕತ್ತಿ ಮತ್ತು ಶಶಿಕಲಾ ಜೊಲ್ಲೆ ಹೆಸರೂ ಇದೆ. ಜೊತೆಗೆ, ಅನರ್ಹ ಶಾಸಕರು 2ನೇ ಹಂತದಲ್ಲಿ ಸೇರುವಾಗ ರಮೇಶ ಕತ್ತಿಯವರನ್ನೂ ಸೇರಿಸಿಕೊಳ್ಳಬೇಕಾಗಿರುವುದರಿಂದ ಬೆಳಗಾವಿ ಕೋಟಾದಲ್ಲಿ ಕಷ್ಟವಾಗಬಹುದು.
ಹಾಲಾಡಿ ಶ್ರೀನಿವಾಸ ಶೆಟ್ಟಿ, ಕುಡಚಿ ಶಾಸಕ ಪಿ.ರಾಜೀವ, ಪ್ರೀತಂ ಗೌಡ, ಎಸ್.ಅಂಗಾರ, ವೀರಣ್ಣ ಚಿರಂತಿಮಠ, ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ ಬಂಗಾರಪ್ಪ ಅವರ ಹೆಸರು ಸಹ ಸಂಭಾವ್ಯರ ಪಟ್ಟಿಯಲ್ಲಿದೆ. ಜಾತಿ ಲೆಕ್ಕಾಚಾರ, ಜಿಲ್ಲಾ ಲೆಕ್ಕಾಚಾರ ನೋಡುವಾಗ ಕೆಲವು ಪ್ಲಸ್, ಮೈನಸ್ ಆಗಬಹುದು.
ಜೊತೆಗೆ, ಯಡಿಯೂರಪ್ಪ ಲೆಕ್ಕಾಚಾರವೇ ಒಂದಿದ್ದರೆ ಅಮಿತ್ ಶಾ ಲೆಕ್ಕಾಚರವೇ ಒಂದಿರಬಹುದು. ಪಕ್ಷ ಕಟ್ಟುವ ಹಿನ್ನೆಲೆಯಲ್ಲಿ, ಪಕ್ಷದ ಇಮೇಜ್ ಬೆಳೆಸುವ ಹಿನ್ನೆಲೆಯಲ್ಲಿ ಅಮಿತ್ ಶಾ ನೋಡಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ