ಪ್ರಗತಿವಾಹಿನಿ ಸುದ್ದಿ; ತುಮಕೂರು: ಅಪರೂಪದ ಮದುವೆ ಎಂದೆ ಸುದ್ದಿಯಾಗಿದ್ದ 25 ವರ್ಷದ ಯುವತಿ ಹಾಗೂ 45 ವರ್ಷದ ವ್ಯಕ್ತಿಯ ವಿವಾಹ ಜೀವನ ಕೇವಲ 6 ತಿಂಗಳಲ್ಲಿ ಸಾವಿನಲ್ಲಿ ಕೊನೆಯಾಗಿದೆ.
25 ವರ್ಷದ ಮೇಘನಾಳನ್ನು ವಿವಾಹವಾಗಿದ್ದ 45 ವರ್ಷದ ಶಂಕ್ರಣ್ಣ ಇದೀಗ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಅಕ್ಕಿಮರಿ ಪಾಳ್ಯದಲ್ಲಿ ಹೊಲದಲ್ಲಿ ನೇಣಿಗೆ ಶರಣಾಗಿದ್ದಾರೆ. ನಾನು ನನ್ನ ಗಂಡ ಚನ್ನಾಗಿದ್ವಿ, ಆದರೆ ಅತ್ತೆ ತನ್ನೊಂದಿಗೆ ಪ್ರತಿದಿನ ಜಗಳ ಕಾಯುತ್ತಿದ್ದರು. ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಪತಿ ಶಂಕ್ರಣ್ಣ, ಈರಿ ಮಾತನಾಡದಂತೆ ಹಲವು ಬಾರಿ ತಾಯಿಗೆ ಬುದ್ಧಿ ಹೇಳಿದ್ದರು. ಆದರೂ ಪದೇ ಪದೇ ಜಗಳವಾಡುತ್ತಿದ್ದರು. ನನ್ನ ತಂದೆ-ತಾಯಿ ಜತೆಯೂ ಮಾತನಾಡಲು ಬಿಡುತ್ತಿರಲಿಲ್ಲ ಎಂದು ಶಂಕ್ರಣ್ಣ ಪತ್ನಿ ಮೇಘನಾ ಆರೋಪಿಸಿದ್ದಾರೆ.
ಈ ರೀತಿ ಜಗಳ ಮಾಡಿದರೆ ಇಬ್ಬರನ್ನು ಸಂಬಾಳಿಸಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು. ನಿನ್ನೆ ಮನೆಯಲ್ಲಿ ಕಟ್ಟಿದ್ದ ನಾಯಿಯನ್ನು ಹೊರಗೆ ಬಿಟ್ಟ ವಿಚಾರಕ್ಕೆ ಕ್ಯಾತೆ ತೆಗೆದ ಅತ್ತೆ ಬಾಯಿಗೆ ಬಂದಂತೆ ಮಾತನಾಡಿದ್ದರು. ತನ್ನ ಪತಿ ಬಂದಾಗಲೂ ಇದೇ ವಿಚಾರವಾಗಿ ಜಗಳವಾಡಿದ್ದರು. ತನ್ನ ವಿರುದ್ಧ ಅನಗತ್ಯ ಮಾತನಾಡದಂತೆ ಪತಿ, ತನ್ನ ತಾಯಿಗೆ ಹೇಳಿದ್ದರು. ನನ್ನ ಪರವಾಗಿ ಮಾತನಾಡಿದ್ದಕ್ಕೆ ನೀನು ಇರುವುದಕ್ಕಿಂತ ಹೋಗಿ ಸಾಯಿ ಎಂದು ಮಗನನ್ನು ತಾಯಿ ಬಯ್ದಿದ್ದರು. ಇದೇ ಕಾರಣಕ್ಕೆ ಬೇಜಾರಾಗಿ ರಾತ್ರಿ ಮನೆ ಬಿಟ್ಟು ಹೋಗಿದ್ದಾರೆ. ಎಷ್ಟು ಹೊತ್ತಾದರೂ ಬರಲಿಲ್ಲ. ಫೋನ್ ಮಾಡಿದರೆ ರಿಸಿವ್ ಮಾಡುತ್ತಿರಲಿಲ್ಲ. ಬೆಳಿಗ್ಗೆವರೆಗೂ ಕಾದರೂ ಪತ್ತೆಯಿರಲಿಲ. ಬೆಳಿಗ್ಗೆ ಸಾವನ್ನಪ್ಪಿರುವ ಸುದ್ದಿ ಬಂದಿದೆ ಎಂದು ಕಣ್ಣೀರಿಟ್ಟಿದ್ದಾರೆ.
ನಾವು ಗಂಡ-ಹೆಂಡತಿ ಚನ್ನಾಗಿಯೇ ಇದ್ದೆವು. ಇತ್ತೀಚೆಗಷ್ಟೇ ನನ್ನ ಹುಟ್ಟುಹಬ್ಬವನ್ನು ತುಂಬಾ ಗ್ರ್ಯಾಂಡ್ ಆಗಿ ಆಚರಿಸಿದ್ದೆವು. ಹಬ್ಬದ ಸಂದರ್ಭದಲ್ಲಿಯೂ ಚನ್ನಾಗಿ ಆಚರಸಿದ್ದೆವು. ನಾನು ಜಮೀನು ಅಂತಸ್ತು ನೋಡಿ ಬಂದಿಲ್ಲ, ಹಾಗಿದ್ದರೆ ಮದುವೆ ಮುಂಚೆಯೇ ಹೇಳುತ್ತಿದ್ದೆ. ನಾನು ಈಗ ನಾಲ್ಕು ತಿಂಗಳ ಗರ್ಭಿಣಿ ಎಂದು ಅಳಲು ತೋಡಿಕೊಂಡಿದ್ದಾರೆ.
ಆದರೆ ಶಂಕರಣ್ಣ ತಾಯಿ ರಂಗಮ್ಮ ತನ್ನ ಮಗನ ಸಾವಿಗೆ ಮೇಘನಾಳ ಕಿರುಕುಳವೇ ಕಾರಣ. ನನ್ನನ್ನು ಮನೆಯಿಂದ ಹೊರಗೆ ಹಾಕುವಂತೆ ಸೊಸೆ ಮಗನಿಗೆ ಹೇಳುತ್ತಿದ್ದಳು. ಮದುವೆಯಾದ ದಿನದಿಂದ ಜಗಳವಾಡುತ್ತಿದ್ದರು. ನನಗೆ ಅಡುಗೆ ಮಾಡಿಕೊಡುತ್ತಿರಲಿಲ್ಲ. ನಾನು ಬೇರೆ ಅಡುಗೆ ಮಾಡಿಕೊಂಡು ಇದ್ದೆ. ನಿನ್ನೆ ನಾನು ಎಮ್ಮೆ ಹೊಡೆದುಕೊಂಡು ಬರುವಾಗ ಸೊಸೆ ನಾಯಿಯನ್ನು ಬಿಟ್ಟಿದ್ದಳು. ಗಾಬರಿಯಾಗಿ ನಾನು ಬೀಳುತ್ತಿದ್ದೆ. ಸೊಸೆಗೆ ಬೈದಿದ್ದೆ. ಮಗ ಬಂದ ಮೇಲೆ ದೂರು ಹೇಳಿದ್ದೆ. ಇದೇ ವಿಚಾರವಾಗಿ ಮನೆಯಲ್ಲಿ ಜಗಳವಾಗಿದೆ. ಹೆಂಡತಿ ಮಾತು ಕೇಳಿ ಮಗ ನನಗೆ ಹೊಡೆಯಲು ಬಂದ. ಜಗಳವಾಡಿ ಮನೆಬಿಟ್ಟು ಹೋದವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಗನಿಗೆ ಹಲವು ಹೆಣ್ಣು ನೋಡಿದ್ದೆವು ಆದರೆ ಮದುವೆ ಆಗಿರಲಿಲ್ಲ. ರಾಜಣ್ಣ ಎಂಬಾತ ಈ ಹುಡುಗಿಯನ್ನು ತೋರಿಸಿದ್ದ. ಮೇಘನಾ ಹಾಗೂ ನನ್ನ ಮಗನ ಮದುವೆ ನಾನು ಒಪ್ಪಿರಲಿಲ್ಲ. ದೇವಸ್ಥಾನದ ಎದುರು ಮದುವೆಯಾಗಿದ್ದಾರೆ. ಮದುವೆಯಾದಾಗಿನಿಂದ ಜಗಳವಾಡುತ್ತಿದ್ದರು. ಸೊಸೆಗೆ ಹಣ, ಆಸ್ತಿ ಬೇಕಿತ್ತಂತೆ. ಜಮೀನು ಮಾರಿ ಬೆಂಗಳೂರಿಗೆ ಹೋಗಿ ನೆಲೆಸೋಣ ಎಂದು ಹೇಳುತ್ತಿದ್ದಳು. ನಾನು ಇದಕ್ಕೆ ಒಪ್ಪಿರಲಿಲ್ಲ ಎಂದು ಆರೋಪಿಸಿದ್ದಾರೆ.
ತನಗೆ ನಾಲ್ಕು ಜನ ಮಕ್ಕಳು. ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಈಗ ಮಗನೂ ಸಾವನ್ನಪ್ಪಿದ್ದಾನೆ. ಓರ್ವ ಮಗಳು ಮಾನಸಿಕ ಅಸ್ವಸ್ಥೆ. ಮಗನ ಜತೆ ಸರಿಯಾಗಿ ಸೊಸೆ ಸಂಸಾರ ಮಾಡುತ್ತಿರಲಿಲ್ಲ. ಆಕೆ ಬಟ್ಟೆಯನ್ನೂ ನಾನೆ ಒಗೆಯಬೇಕಿತ್ತು. ನನ್ನ ಮಗ ನನ್ನ ಬಿಟ್ಟು ಇರುತ್ತಿರಲಿಲ್ಲ. ನಿನ್ನೆಯೇ ನನ್ನ ಮೇಲೆ ಕೈ ಮಾಡಲು ಬಂದಿದ್ದ. ನನ್ನ ಮಗನ ಸಾವಿಗೆ ಸೊಸೆಯೇ ಕಾರಣ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದೇನೆ ಎಂದಿದ್ದಾರೆ. ಹುಲಿಯೂರು ದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಶಂಕ್ರಣ್ಣ ಆತ್ಮಹತ್ಯೆಗೆ ತಾಯಿಯೇ ಕಾರಣ. ತಾಯಿ-ಮಗನಿಗೆ ಹೊಂದಾಣಿಕೆ ಇರಲಿಲ್ಲ. ಒಂದೂವರೆ ತಿಂಗಳಿಂದ ಹೆಂಡತಿ-ತಾಯಿ ನಡುವೆ ಜಗಳವಾಗುತ್ತಿತ್ತು. ತಮ್ಮ ಮಗಳು ಗರ್ಭಿಣಿ. ವಿಜಯದಶಮಿ ದಿನ ಮಗಳು ಮೇಘನಾ-ಶಂಕ್ರಣ್ಣ ಮದುವೆಯಾಗಿದ್ದರು. ಈಗ ಶಂಕ್ರಣ್ಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಂಕ್ರಣ್ಣ ಸಾವಿಗೆ ತಾಯಿಯೇ ಕಾರಣ ಎಂದು ದೂರು ನೀಡಿದ್ದಾಗಿ ಮೇಘನಾ ತಂದೆ ತಿಳಿಸಿದ್ದಾರೆ.
ಅಪರೂಪದ ಮದುವೆ ಆತ್ಮಹತ್ಯೆಯಲ್ಲಿ ಅಂತ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ