Karnataka NewsPolitics

*ತುಂಗಭದ್ರಾ ಡ್ಯಾಂ ಗೇಟ್ ಕೊಚ್ಚಿ ಹೋದ ಪ್ರಕರಣ: ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಮೂರು ರಾಜ್ಯಗಳಿಗೆ ಸೇರಿರುವ ನೀರನ್ನು ಹೇಗಾದರೂ ಮಾಡಿ ಉಳಿಸಿಕೊಂಡು ತುಂಗಭದ್ರಾ ಅಣೆಕಟ್ಟಿನ ಗೇಟನ್ನು ದುರಸ್ತಿ ಮಾಡುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ತುಂಗಭದ್ರಾ ಜಲಾಶಯಕ್ಕೆ ತೆರಳುವ ಮುನ್ನ ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮದವರನ್ನು ಉದ್ದೇಶಿಸಿ ಭಾನುವಾರ ಮಾತನಾಡಿದ ಅವರು “ನೀರನ್ನು ಹೊರಗೆ ಬಿಡದ ಹೊರತು ಗೇಟ್ ದುರಸ್ತಿ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಆದ ಕಾರಣ ತಂತ್ರಜ್ಞರ ವರದಿಯ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.

“ಅಣೆಕಟ್ಟಿನ 1 ರಿಂದ 16 ನೇ ಗೇಟುಗಳನ್ನು ಸಿಡಬ್ಲ್ಯೂಸಿ ನಿರ್ವಹಣೆ ಮಾಡುತ್ತದೆ. 17 ರಿಂದ 32 ರವರೆಗಿನ ಜವಾಬ್ದಾರಿ ಕರ್ನಾಟಕ ಸರ್ಕಾರದ್ದಾಗಿದೆ. ಕೇಂದ್ರ ಜಲ ಆಯೋಗದವರು ಸಹ ಒಂದಷ್ಟು ತಂತ್ರಜ್ಞರನ್ನು ಕಳುಹಿಸಿದ್ದಾರೆ. ನಾವು ಸಹ ನುರಿತ ತಂತ್ರಜ್ಞರನ್ನು ಕಳುಹಿಸಿದ್ದೇವೆ. ನಾನು ಸಹ ಶನಿವಾರ ರಾತ್ರಿಯಿಂದಲೇ ಅಧಿಕಾರಿಗಳ ಜೊತೆ ದೂರವಾಣಿ ಸಂಪರ್ಕದಲ್ಲಿದ್ದು ಪ್ರತಿ ಕ್ಷಣದ ಮಾಹಿತಿ ಪಡೆಯುತ್ತಿದ್ದೇನೆ” ಎಂದು ಹೇಳಿದರು.

“ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಚೈನ್ ಲಿಂಕ್ ಮುರಿದ ಕಾರಣ ಈ ತೊಂದರೆ ಉಂಟಾಗಿದೆ. ಭಾರಿ ಪ್ರಮಾಣದಲ್ಲಿ ನೀರು ಹೊರ ಹೋಗುತ್ತಿದ್ದು, ಅಣೆಕಟ್ಟಿನ ಭದ್ರತೆಯ ದೃಷ್ಟಿಯಿಂದ ಎಲ್ಲಾ ಗೇಟ್ ಗಳನ್ನು ತೆರೆದು ನದಿಗೆ ನೀರು ಬಿಡಲಾಗುತ್ತಿದೆ. ಅಣೆಕಟ್ಟಿನ ಕೆಳಭಾಗದ ಹಾಗೂ ನದಿ ಪಾತ್ರದ ಎಲ್ಲಾ ಜನರಿಗೆ ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ” ಎಂದರು.

ಮುಂದಿನ ದಿನಗಳಲ್ಲಿ ನೀರಿನ ಅಭಾವ ಉಂಟಾಗುತ್ತದೆಯೇ ಎಂದು ಪ್ರಶ್ನಿಸಿದಾಗ “ಇದು ಅತ್ಯಂತ ಗಂಭೀರವಾದ ವಿಚಾರವಾಗಿದ್ದು. ಇದರಲ್ಲಿ ನಾನು ಯಾರ ಮಾತನ್ನು ಕೇಳುವುದಿಲ್ಲ. ಸ್ಥಳೀಯರು ಹಾಗೂ ರೈತರು ಒಂದಷ್ಟು ಅಭಿಪ್ರಾಯಗಳನ್ನು ಸೂಚಿಸುತ್ತಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಗೌರವಿಸಲಾಗುವುದು. ಆದರೆ ಅಂತಿಮವಾಗಿ ತಂತ್ರಜ್ಞರ ವರದಿ ಆಧರಿಸಿ ಕ್ರಮ ತೆಗೆದುಕೊಳ್ಳಲಾಗುವುದು. ನಮಗೆ ನಮ್ಮ ರೈತರ ಹಿತ ಮುಖ್ಯ” ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button