Kannada NewsKarnataka NewsLatest

ಅರಿಶಿನ ಲಾರಿ ದರೋಡೆ: 1.3 ಕೋಟಿ ಮೌಲ್ಯದ ವಸ್ತು ವಶ, 7 ಜನರ ಬಂಧನ

ಪ್ರಗತಿವಾಹಿನಿ ಸುದ್ದಿ,  ಕಬ್ಬೂರ – ಅರಿಶಿನ ಲಾರಿ ಕಳ್ಳತನ ಹಾಗೂ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿ ಅವರಿಂದ 1.3 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಈ ಕುರಿತು ಮಾಹಿತಿ ನೀಡಿದ್ದಾರೆ.  ಅಥಣಿ ತಾಲೂಕಿನ ಸಂಬರಗಿ ಗ್ರಾಮದ ಗಣೇಶ ಕಲ್ಲಪ್ಪ ಕೋಳಿ, ದಾದಾಸಾಹೇಬ ಶಂಕರ ಟೋಣ್ಣೆ, ಜನಾರ್ಧನ ಫೆಂಡ, ಗುರುನಾಥ ಹಾಲಳ್ಳಿ, ಶಿವಾನಂದ ಪನದಿ, ಕಲೀಮ್ ಮಾಲದಾರ, ಪಾಂಡುರಂಗ ಹಳ್ಳೂರ ಎನ್ನುವವರನ್ನು ಬಂಧಿಸಲಾಗಿದೆ.
ಜೂ. 7ರಂದು ತಮಿಳುನಾಡಿನ ಎಂ. ಚಿನ್ನಸ್ವಾಮಿ ಎಂಬವರು ಅರಿಶಿನ ತುಂಬಿಕೊಂಡು ಕಬ್ಬೂರ ಗ್ರಾಮದಿಂದ ಚಿಕ್ಕೋಡಿಗೆ ಬರುವಾಗ ಕಬ್ಬೂರದಿಂದ ಎರಡು ಕಿ.ಮೀ. ದೂರದಲ್ಲಿ ದರೋಡೆಕೋರರು ಅಡ್ಡಗಟ್ಟಿದ್ದರು.‌ ಚಾಲಕ ಹಾಗೂ ಕ್ಲೀನರ್ ನನ್ನು ಅಪಹರಿಸಿಕೊಂಡು  ಕೈ-ಕಾಲು‌ ಕಟ್ಟಿ ಒಗೆದು ಬಂದಿದ್ದರು. ನಂತರ ಲಾರಿಯನ್ನು ಅಪಹರಿಸಿ ಲಾರಿ, 13 ಲಕ್ಷ ರೂ.‌ ಮೌಲ್ಯದ ಅರಿಶಿನವನ್ನು ದರೋಡೆ ಮಾಡಿದ್ದರು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂರು ತಂಡಗಳನ್ನು ರಚನೆ ಮಾಡಿದ್ದರು. ದರೋಡೆಕೋರರನ್ನು ಬಂಧಿಸಿ ಎರಡು ಲಾರಿ, ಟ್ರ್ಯಾಕ್ಟರ್, ಎರಡು ಕಾರು, ದ್ವಿಚಕ್ರ ವಾಹನ ಸೇರಿದಂತೆ 1.3 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲ ಬಂಧಿತರನ್ನು ನ್ಯಾಯಂಗ ವಶಕ್ಕೆ ಒಪ್ಪಿಸಲಾಗಿದೆ.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಡಿಎಸ್ ಪಿ ಮನೋಜ ನಾಯಿಕ, ಸಿಪಿಐ ಆರ್.ಆರ್. ಪಾಟೀಲ, ಪಿಎಸ್ ಐ ರಾಕೇಶ ಬಗಲಿ, ಅಂಕಲಿ ಪಿಎಸ್ ಐ ಎಲ್.ಎಂ. ಆರಿ, ಖಡಕಲಾಟ ಪಿಎಸ್ ಐ ಎಸ್.ಸಿ. ಮಂಟೂರ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button