Kannada NewsLatestWorld

*ತರಬೇತಿ ವೇಳೆ ಗಾಳಿಯಲ್ಲೇ ಡಿಕ್ಕಿ ಹೊಡೆದ ಎರಡು ಸೇನಾ ವಿಮಾನಗಳು*: *ನಾಲ್ವರು ಪೈಲಟ್ ಗಳು ಸಾವು*

ಪ್ರಗತಿವಾಹಿನಿ ಸುದ್ದಿ: ಫಿಲಿಪೈನ್ಸ್‌ನಲ್ಲಿ ವಾಯುಪಡೆಯ ತರಬೇತಿ ಕಾರ್ಯಾಚರಣೆ ವೇಳೆ ಎರಡು ಸೇನಾ ವಿಮಾನಗಳು ಗಾಳಿಯಲ್ಲೇ ಪರಸ್ಪರ ಡಿಕ್ಕಿ ಹೊಡೆದು ಪತನಗೊಂಡಿದ್ದು, ಘಟನೆಯಲ್ಲಿ ನಾಲ್ವರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಈ ಭೀಕರ ವಿಮಾನ ಅಪಘಾತದಿಂದ ಸ್ಥಳೀಯರಲ್ಲಿ ಆತಂಕ ಮೂಡಿದೆ.

ತರಬೇತಿಯಲ್ಲಿ ತೊಡಗಿದ್ದ ಎರಡು ವಿಮಾನಗಳು ಆಕಾಶದಲ್ಲೇ ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಬಳಿಕ ಕೆಳಕ್ಕೆ ಬಿದ್ದಿವೆ. ಅಪಘಾತದ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಫಿಲಿಪೈನ್ಸ್ ವಾಯುಪಡೆ (PAF) ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಅಪಘಾತಕ್ಕೀಡಾದ ಎರಡೂ ವಿಮಾನಗಳು SF-260 ಮಾದರಿಗೆ ಸೇರಿದ್ದು, ಏರ್‌ಬೇಸ್ ಆವರಣದೊಳಗೆ ಪತನಗೊಂಡಿವೆ ಎಂದು ತಿಳಿಸಿದೆ. ಘಟನೆಯಲ್ಲಿ ನಾಲ್ವರು ಪೈಲಟ್‌ಗಳು ಮೃತಪಟ್ಟಿದ್ದು, ಇತರರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿಮಾನಗಳು ಗಾಳಿಯಲ್ಲೇ ಡಿಕ್ಕಿ ಹೊಡೆಯಲು ಕಾರಣವೇನು ಎಂಬುದನ್ನು ಪತ್ತೆಹಚ್ಚಲು ವಾಯುಪಡೆ ತನಿಖೆಗೆ ಆದೇಶಿಸಿದೆ. ತನಿಖೆ ಪೂರ್ಣಗೊಳ್ಳುವವರೆಗೆ ಮುನ್ನೆಚ್ಚರಿಕಾ ಕ್ರಮವಾಗಿ ವಾಯುಪಡೆಯಲ್ಲಿರುವ ಎಲ್ಲ SF-260 ಮಾದರಿಯ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಅಪಘಾತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ತರಬೇತಿ ವೇಳೆ ಸಂಭವಿಸಿದ ಇತರ ಸಮಸ್ಯೆಗಳೇ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button