ಪ್ರಗತಿವಾಹಿನಿ ಸುದ್ದಿ; ಉಡುಪಿ: ಕೊರೊನಾ ಸೋಂಕಿತ ವ್ಯಕ್ತಿಗೆ ಜಿಲ್ಲಾಧಿಕಾರಿಯೊಬ್ಬರು ಊರಿನಲ್ಲಿ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ಸೂಚಿಸಿದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.
ಹೌದು. ಉಡುಪಿ ಜಿಲ್ಲೆಯ ಕಾಪು ಮೂಲದ ಕೊರೊನಾ ಸೋಂಕಿತ ವ್ಯಕ್ತಿಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ವ್ಯಕ್ತಿ ಸಂಪರ್ಕಕ್ಕೆ ಬಂದ ಎಲ್ಲ ರೋಗಿಗಳ ವೆಚ್ಚ ಅವನೇ ಭರಿಸಬೇಕು ಎಂದು ಆದೇಶ ನೀಡಿದ್ದಾರೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾದ ವ್ಯಕ್ತಿ ಕ್ರಿಕೆಟ್ ಆಡಿದ್ದಾನೆ. ಆತ ನಿಯಮ ಉಲ್ಲಂಘನೆ ಮಾಡಿ ಎಲ್ಲ ಕಡೆ ಓಡಾಡಿದ್ದಾನೆ. ಹೋಮ್ ಕ್ವಾರಂಟೈನ್‍ನ ಸೂಚನೆ ನೀಡಿದರೂ ಆ ವ್ಯಕ್ತಿ ಹೊರಗಡೆ ತಿರುಗಾಡಿ ನಿರ್ಲಕ್ಷ್ಯ ಮೆರೆದಿದ್ದಾನೆ. ಹಾಗಾಗಿ ಆತನಿಂದಲೇ ಇತರ ಸೋಂಕಿತರ ವೆಚ್ಚವನ್ನು ವಸೂಲಿ ಮಾಡುತ್ತೇನೆ ಎಂದಿದ್ದಾರೆ.
ಇಡೀ ಊರಿಗೆ ಆದ ವೆಚ್ಚವನ್ನು ಆ ರೋಗಿ ಕೊಡಬೇಕು. ಆ ವ್ಯಕ್ತಿಯ ಮೇಲೆ ಕ್ರಿಮಿನಲ್ ಕೇಸು ಕೂಡ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಕ್ವಾರಂಟೈನ್ ಸಂದರ್ಭದಲ್ಲಿ ಉದ್ಧಟತನ ತೋರಿದ ಎಲ್ಲರಿಂದ ವೆಚ್ಚವನ್ನು ವಸೂಲಿ ಮಾಡುತ್ತೇವೆ. ಕಾನೂನು ಉಲ್ಲಂಘಿಸಿದವರಿಗೆ ಎರಡು ವರ್ಷ ಜೈಲುವಾಸ ವಿಧಿಸುವ ಅವಕಾಶ ಇದೆ ಎಂದು ಹೇಳಿದರು.
ವಿದೇಶದಿಂದ ಬಂದ ವ್ಯಕ್ತಿ ಕೊಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಡಾಡಿದ್ದು, ಪ್ರಕರಣ ದಾಖಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಎಂಟು ಮಂದಿಯ ಮೇಲೆ ಪ್ರಕರಣ ದಾಖಲಿಸಿದ್ದೇವೆ. ಕ್ವಾರಂಟೈನ್‍ನಲ್ಲಿ ಇರುವವರನ್ನು ಅವರ ಕುಟುಂಬದವರು ಹೊರ ಬಾರದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ