ಪ್ರಗತಿವಾಹಿನಿ ಸುದ್ದಿ ಉಗರಗೋಳ (ತಾ.ಸವದತ್ತಿ) : ಇಷ್ಟಲಿಂಗಾರ್ಚನೆಯ ಅನುಷ್ಠಾನ ಮತ್ತು ಶಿವಯೋಗದಲ್ಲಿ ಉತ್ತುಂಗ ಸಾಧನೆಗೈದ ಗ್ರಾಮದ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದ ವಾರ್ಷಿಕ ಜಾತ್ರಾ ಮಹೋತ್ಸವ ಕಾರ್ತಿಕ ಮಾಸದ ಕೊನೆಯ ಸೋಮವಾರ (ನ.21 ರಂದು) ಜರುಗಲಿದೆ.
ಅಷ್ಟಾವರಣ, ಪಂಚಾಚಾರ ಮತ್ತು ಷಟ್‌ಸ್ಥಲಗಳ ಸೈದ್ಧಾಂತಿಕ ವಿಚಾರಗಳನ್ನು ಸಮಸ್ತ ಭಕ್ತ ಸಮೂಹಕ್ಕೆ ಪ್ರಚುರಪಡಿಸಿ ನಿರಂತರ ಧರ್ಮ ಜಾಗೃತಿಯೊಂದಿಗೆ ಜೀವನ ಮೌಲ್ಯಗಳ ಅನುಪಾಲನೆಗೆ ಮಾರ್ಗದರ್ಶನ ಮಾಡಿರುವ ಕರ್ತೃ ಪೂಜ್ಯ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳು ಸಮಸ್ತ ಭಕ್ತಗಣದ ಮನೆಮನಗಳಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಪರಮಪೂಜ್ಯರ ನಾಮಸ್ಮರಣೆಗೆ ತೆರೆದುಕೊಳ್ಳಲು ಪ್ರತೀ ವರುಷ ಶ್ರೀಮಠದ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಸೋಮವಾರ ಪ್ರಾತಃಕಾಲದಲ್ಲಿ ಪೂಜ್ಯ ಶ್ರೀಗುರು ಶಿವಪ್ಪಯ್ಯ ಶಿವಯೋಗಳವರ ಕರ್ತೃ ಗದ್ದುಗೆಗೆ ಏಕಾದಶ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ, ಮಹಾಮಂಗಳಾರತಿ ಜರುಗುವವು. ನಂತರ ಮುಂಜಾನೆ 9 ಗಂಟೆಗೆ ಶ್ರೀಮಠದಿಂದ ಪೂಜ್ಯ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಭಾವಚಿತ್ರ ಹಾಗೂ ಪಲ್ಲಕ್ಕಿ ಉತ್ಸವವು 108 ಕುಂಭಗಳ ಮೆರವಣಿಗೆಯು ವಿವಿಧ ಜನಪದ ವಾದ್ಯಮೇಳಗಳೊಂದಿಗೆ ಉಗರಗೋಳ ಗ್ರಾಮದಲ್ಲಿ ನಡೆಯಲಿದ್ದು, ನಂತರ ಮಹಾಪ್ರಸಾದದ ದಾಸೋಹ ಜರುಗಲಿದೆ.
ಲಕ್ಷ ದೀಪೋತ್ಸವ : ಜಾತ್ರಾ ಮಹೋತ್ಸವದ ಅಂಗವಾಗಿ ಸಂಜೆ 5-30 ಗಂಟೆಗೆ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳವರ ಮಠದ ಬೃಹತ್ ಪ್ರಾಂಗಣದಲ್ಲಿ ಲಕ್ಷ ದೀಪೋತ್ಸವ ಹಾಗೂ ಧರ್ಮ ಜಾಗೃತಿ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಹೂಲಿ ಸಾಂಬಯ್ಯನವರಮಠದ ಶ್ರೀ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಗರಗೋಳ ಗ್ರಾಮದ ನಿರ್ವಾಣೇಶ್ವರಮಠದ ಶ್ರೀ ಮಹಾಂತ ಸ್ವಾಮೀಜಿ ಮತ್ತು ರಾಮಾರೂಢಮಠದ ಶ್ರೀ ಬ್ರಹ್ಮಾರೂಢ ಸ್ವಾಮೀಜಿ, ತಾರಿಹಾಳ ಅಡವಿಸಿದ್ಧೇಶ್ವರ ವಿರಕ್ತಮಠದ ಶ್ರೀಅಡವಯ್ಯ ದೇವರು ಸಮಾರಂಭದ ಸಾನ್ನಿಧ್ಯವಹಿಸುವರು.
ಸವದತ್ತಿ ಯಲ್ಲಮ್ಮನಗುಡ್ಡದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಸಯ್ಯ ಈರಯ್ಯಸ್ವಾಮಿ ಹಿರೇಮಠ ಲಕ್ಷ ದೀಪೋತ್ಸವ ಉದ್ಘಾಟಿಸಲಿದ್ದು, ಹುಬ್ಬಳ್ಳಿ-ಧಾರವಾಡ ಪೋಲೀಸ್ ಕಮೀಷನರೇಟ್ ನಿವೃತ್ತ ಎ.ಸಿ.ಪಿ. ಜಿ.ಆರ್. ಹಿರೇಮಠ ಅಧ್ಯಕ್ಷತೆವಹಿಸುವರು. ಉಗರಗೋಳ ಗ್ರಾ.ಪಂ. ಅಧ್ಯಕ್ಷೆ ಜುಬೇದಾ ಬಾರಿಗಿಡ, ಉಪಾಧ್ಯಕ್ಷ ಶಿವನಗೌಡ ಗಡಾದಗೌಡ್ರ, ಯಲ್ಲಮ್ಮನಗುಡ್ಡದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಪಿ. ಜೀರಗಾಳ, ಸವದತ್ತಿ ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಮೈತ್ರಾದೇವಿ ವಸ್ತ್ರದ, ಯಲ್ಲಮ್ಮನಗುಡ್ಡದ ಶ್ರೀರೇಣುಕಾ ಯಲ್ಲಮ್ಮ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಕೆ.ಎಸ್. ಗಂದಿಗವಾಡ, ವೈ.ವೈ. ಕಾಳಪ್ಪನವರ, ವಿವಿಧ ಕ್ಷೇತ್ರಗಳ ಗಣ್ಯರಾದ ಬಿ.ಪಿ. ಪಾಟೀಲ, ವೈ.ಆರ್. ಚನ್ನಪ್ಪಗೌಡರ, ಕುಮಾರಿ ಆರ್.ಪಿ.ಪವಾರ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ಸವದತ್ತಿ, ಹುಕ್ಕೇರಿ, ಉಗರಗೋಳ, ಹರ್ಲಾಪುರ, ಹಂಚಿನಾಳ, ಮುನವಳ್ಳಿ ಗ್ರಾಮಗಳ ವಿವಿಧ ಕ್ಷೇತ್ರಗಳ ಗಣ್ಯರು, ರೈತ ನಾಯಕರು, ಯುವ ಧುರೀಣರು ಅತಿಥಿಗಳಾಗಿ ಪಾಲ್ಗೊಳ್ಳುವರು.
ಗುರುರಕ್ಷೆ ಗೌರವ : ರಾಷ್ಟ್ರಪತಿಗಳ ಶೌರ್ಯ ಪ್ರಶಸ್ತಿ ಹಾಗೂ ಮುಖ್ಯಮಂತ್ರಿಗಳ ಚಿನ್ನದ ಪದಕ ಪುರಸ್ಕೃತರಾದ ನವೀನ ಪವಾಡಿ, ಭಾರತೀಯ ಸೈನ್ಯದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಮಂಜುನಾಥ ಭೋವಿ, ಕಸಾಪ ಗಜಲ್ ಕಾವ್ಯ ಪ್ರಶಸ್ತಿ ಪಡೆದಿರುವ ನರಗುಂದ ತಾಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಆನಂದ ಭೋವಿ, 2021-22 ರಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕಗಳನ್ನು ಸಂಪಾದಿಸಿದ ಯಲ್ಲಪ್ಪ ಉಳ್ಳಿಗೇರಿ, ರೇಖಾ ಹೋಳಿ, ಶರತ್ ಬಾರ್ಕಿ, ತಂಗೆವ್ವ ಗೊರವನಕೊಳ್ಳ, ವಿನಾಯಕ ಗುಡೆಣ್ಣವರ, ಶ್ರೇಯಸ್ ಬಾರ್ಕಿ ಅವರಿಗೆ ಗುರುರಕ್ಷೆ ಗೌರವ ನೀಡಿ ಸನ್ಮಾನಿಸಲಾಗುವುದು.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸಂಗೀತ ಅಧ್ಯಾಪಕ ಡಾ. ಅರ್ಜುನ ವಠಾರ ಹಾಗೂ ಡಾ. ಪುಟ್ಟರಾಜ ಕವಿಗವಾಯಿಗಳ ಶಿಷ್ಯ ಕಲಾಬಳಗದ ವತಿಯಿಂದ ಸಾಂಸ್ಕೃತಿಕ ಸಂಗೀತ ಸಂಜೆ ಕಾರ್ಯಕ್ರಮ ಜರುಗುವುದು. ಈ ಪವಿತ್ರ ಸಮಾರಂಭದಲ್ಲಿ ಶ್ರೀಮಠದ ಸಮಸ್ತ ಸದ್ಭಕ್ತ ಸಮೂಹ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಪೂಜ್ಯ ಶ್ರೀಗುರು ಶಿವಪ್ಪಯ್ಯ ಶಿವಯೋಗಿಗಳ ಕೃಪಾಕಾರುಣ್ಯಕ್ಕೆ ಪಾತ್ರರಾಗಬೇಕೆಂದು ಶ್ರೀಮಠದ ಆಡಳಿತ ಮಂಡಳಿಯ ಸಿಇಒ ನಿವೃತ್ತ ಕೆಎಎಸ್ ಅಧಿಕಾರಿ ಮಹೇಶ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ಕೋರಿದ್ದಾರೆ.
Breaking News: ಕಾಂಗ್ರೆಸ್ ರಾತ್ರೋರಾತ್ರಿ ಉನ್ನತ ಮಟ್ಟದ ಸಭೆ: ತುರ್ತು ಪತ್ರಿಕಾಗೋಷ್ಠಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ