ಪ್ರಗತಿವಾಹಿನಿ ಸುದ್ದಿ; ಕೀವ್: ಉಕ್ರೇನ್ ನಲ್ಲಿ ರಷ್ಯಾಸೇನೆ ಮತ್ತಷ್ಟು ತನ್ನ ದಾಳಿ ತೀವ್ರಗೊಳಿಸಿದ್ದು, ಇಂದು ನಡೆಸಿದ ಶೆಲ್ ದಾಳಿಯಲ್ಲಿ ಕರ್ನಾಟಕದ ವಿದ್ಯಾರ್ಥಿಯೋರ್ವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಉಕ್ರೇನ್ ನಲ್ಲಿ ರಷ್ಯಾ ಯುದ್ಧ ಇಂದು 6ನೇ ದಿನಕ್ಕೆ ಕಾಲಿಟ್ಟಿದ್ದು, ಕೀವ್ ಹಾಗೂ ಖಾರ್ಕಿವ್ ನಗರದಲ್ಲಿ ಬಾಂಬ್ ಸ್ಫೋಟ, ಕ್ಷಿಪಣಿ ದಾಳಿ ತೀವ್ರಗೊಳಿಸಿದೆ. ಇಂದು ಬೆಳಿಗ್ಗೆ 10ಗಂಟೆಗೆ ಖಾರ್ಕಿವ್ ನಲ್ಲಿ ರಷ್ಯಾ ಸೇನೆ ನಡೆಸಿದ ಭೀಕರ ಶೆಲ್ ದಾಳಿಯಲ್ಲಿ ರಾಜ್ಯದ ಮೆಡಿಕಲ್ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
ಹಾವೇರಿ ಮೂಲದ ನವೀನ್ ಎಂಬ ವಿದ್ಯಾರ್ಥಿ ರಷ್ಯಾ ದಾಳಿಯಲ್ಲಿ ಬಲಿಯಾಗಿದ್ದಾರೆ. ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ನಾಲ್ಕನೇ ವರ್ಷ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ ನವೀನ್, ಯುದ್ಧದ ಬೆನ್ನಲ್ಲೇ ತಾಯ್ನಾಡಿಗೆ ವಾಪಸ್ ಆಗಲು ಸಾಧ್ಯವಾಗದೇ ಸಂಕಷ್ಟಕ್ಕೀಡಾಗಿದ್ದರು.
ಪೋಷಕರಿಗೆ ಕರೆ ಮಾಡಿ ಸಾಂತ್ವನ ಹೇಳಿದ ಸಿಎಂ ಬಸವರಾಜ ಬೊಮ್ಮಾಯಿ*
ಉಕ್ರೇನ್ ನಲ್ಲಿ ಮೃತಪಟ್ಟ ಹಾವೇರಿ ಜಿಲ್ಲೆಯ ಯುವಕ ನವೀನ್ ಅವರ ತಂದೆ ಶೇಖರಗೌಡ ಅವರೊಂದಿಗೆ ದೂರವಾಣಿ ಮಾತನಾಡಿದ ಮುಖ್ಯಮಂತ್ರಿಗಳು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು.
ನವೀನ್ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ತರಲು ಸಾಧ್ಯವಿರುವ ಎಲ್ಲ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಈ ಸಂಬಂಧ ವಿದೇಶಾಂಗ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮಗನ ಬಗ್ಗೆ ಮಾಹಿತಿ ನೀಡಿದ ಶೇಖರಗೌಡ ಗ್ಯಾನ ಗೌಡರ್ ಇಂದು ಮುಂಜಾನೆ ತಮ್ಮ ಮಗ ದೂರವಾಣಿ ಕರೆ ಮಾಡಿದ್ದ. ಪ್ರತಿ ದಿನ ಎರಡು ಮೂರು ಬಾರಿ ದೂರವಾಣಿ ಮೂಲಕ ಮಾತಾಡುತ್ತಿದ್ದ ಎಂದು ವಿವರಿಸಿದರು.
ನವೀನ್ ಸಾವು ಅತ್ಯಂತ ದುರಾದೃಷ್ಟಕರ. ಭಗವಂತ ನವೀನ್ ಆತ್ಮಕ್ಕೆ ಶಾಂತಿ ನೀಡಲಿ. ಕುಟುಂಬದವರಿಗೆ ಈ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವು ದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ನಿಂದ ಬೆಂಗಳೂರಿನ ಜನತೆಗೆ ಸಂಕಷ್ಟ; ಸಿಎಂ ಬೊಮ್ಮಾಯಿ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ