Latest

ರೆಬಲ್ ಶಾಸಕರಿಗೆ ಸಿಎಂ ಬುಲಾವ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಂಡಾಯ ಬುಗಿಲೆದ್ದಿದ್ದು, ಉತರ ಕರ್ನಾಟಕ ಭಾಗದ ಮೂವರು ಶಾಸಕರಾದ ಉಮೇಶ್ ಕತ್ತಿ, ಮುರಿಗೇಶ್ ನಿರಾಣಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ಯಡಿಯೂರಪ್ಪ ವಿರುದ್ಧ ತಿರುಗಿಬಿದ್ದಿದ್ದಾರೆ. ಈ ಹಿನ್ನಲೆಯಲ್ಲಿ ಸಿಎಂ ಯಡಿಯೂರಪ್ಪ ಬಂಡಾಯವೆದ್ದಿರುವ ಶಾಸಕರಿಗೆ ಬೆಂಗಳೂರಿಗೆ ಬರುವಂತೆ ಸೂಚಿಸಿದ್ದಾರೆ.

ಹಿರಿಯ ಶಾಸಕ ಉಮೇಶ್ ಕತ್ತಿಗೆ ಕರೆ ಮಾಡಿರುವ ಸಿಎಂ ಯಡಿಯೂರಪ್ಪ, ಮನೆಗೆ ಬರುವಂತೆ ತಿಳಿಸಿದ್ದಾರೆ. ನಿಮ್ಮ ಸಹೋದರನನ್ನು ರಾಜ್ಯ ಸಭೆ ಸದಸ್ಯ ಹಾಗೂ ನಿಮ್ಮನ್ನ ಸಚಿವರನ್ನಾಗಿ ಮಾಡುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಅಲ್ಲದೇ ಎಲ್ಲಾ ವಿಚಾರಗಳ ಬಗ್ಗೆ ಕುಳಿತು ಮಾತಾಡೋಣ ಎಂಬುದಾಗಿ ಸಿಎಂ ಬುಲಾವ್ ನೀಡಿದ್ದಾರೆ ಎನ್ನಲಾಗಿದೆ.


ಇದೇ ವೇಳೆ ಶಾಸಕ ಮುರುಗೇಶ್ ನಿರಾಣಿಗೂ ಕರೆ ಮಾಡಿರುವ ಯಡಿಯೂರಪ್ಪ, ಉಮೇಶ್ ಕತ್ತಿ ಜತೆ ಮನೆಗೆ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಈ ನಡುವೆ ಮಾತನಾಡಿದ ಶಾಸಕ ಮುರುಗೇಶ್ ನಿರಾಣಿ, ನಾನೇನು ಸನ್ಯಾಸಿ ಅಲ್ಲ. ನನಗೂ ಸಚಿವ ಸ್ಥಾನದ ಮೇಲೆ ಆಸೆ ಇದೆ. ಆದರೆ ನಾನು ಅಸಮಾಧಾನಿತರ ನೇತೃತ್ವ ವಹಿಸಿದ್ದೇನೆ ಎನ್ನುವುದು ಸುಳ್ಳು. ಕಳೆದ ಎರಡು ತಿಂಗಳಿಂದ ನಾನು ಯಾರೊಂದಿಗೂ ಚರ್ಚಿಸಿಲ್ಲ. ಬೆಂಗಳೂರಿಗೂ ಬಂದಿಲ್ಲ. ಬಂದರೂ ಕಮಿಟಿ ಮೀಟಿಂಗ್ ಮಾಡಿದ್ದೇವೆ ಅಷ್ಟೆ, ಅದನ್ನು ಮುಗಿಸಿ ಮತ್ಯಾರನ್ನೂ ಭೇಟಿ ಮಾಡಿಲ್ಲ. ತಪ್ಪು ಮಾಹಿತಿ ನೀಡಲಾಗಿದೆ. ಉಳಿದವರ ಬಗ್ಗೆ ನಾವು ಮಾತನಾಡುವುದಿಲ್ಲ ಎಂದಿದ್ದಾರೆ.

ಉತ್ತರ ಕರ್ನಾಟಕ ಪ್ರಭಾವಿ ನಾಯಕರಾದ ಉಮೇಶ್ ಕತ್ತಿ, ಮುರಗೇಶ್ ನಿರಾಣಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಸಿಎಂ ವಿರುದ್ಧ ಸಂಚು ರೂಪಿಸಿದ್ದು, ಕಳೆದ 15 ದಿನದಲ್ಲಿ ಸುಮಾರು ಆರು ಬಾರಿ ಸಭೆ ನಡೆಸಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಡುವ ನಿಟ್ಟಿನಲ್ಲಿ ಈ ಸಭೆ ನಡೆದಿದೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಭಾರಿ ಭಿನ್ನಮತ: ಫೈನಲ್ ಎಚ್ಚರಿಕೆ ನೀಡಿದ ಕತ್ತಿ ಸಹೋದರರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button