ಎಲ್ಲಿ ಹೋದವು ಆ ಕವಿತೆಗಳು, ನಿತ್ಯೋತ್ಸವಾಗಿ ಹಾಡಿದ್ದು…

ಎಲ್ಲಿ ಹೋದವು ಆ ಕವಿತೆಗಳು, ನಿತ್ಯೋತ್ಸವಾಗಿ ಹಾಡಿದ್ದು…

ರಾಗರತಿಯ ಕೆಂಪಿನಲಿ,  ಕಂಡ ಸಂಜೆ ಮುಗಿಲು…

ಜಗವೆಲ್ಲ ನಗುತಿರಲಿ, ಜಗದಳವು ನನಗಿರಲಿ… ಎಂಬ ಉದಾತ್ತ ಭಾವಗೀತೆಗಳು…

ಏಳು ಚಿನ್ನ ಬೆಳಗಾಯ್ತು ರನ್ನ, ಮೂಡಲ ತೆರೆಯೆ ಕಣ್ಣ
ನಕ್ಷತ್ರ  ಜಾರಿ ಇರುಳೆಲ್ಲ ಸೋರಿ, ಮಿಗಿಲಿಹುದು ಬಾನ ಬಣ್ಣ…

ಮಕ್ಕಳಿರಾ ಏಳಿ, ರಸ ಕುಡಿಯಲೇಳಿ
ಹುಸಿ ನಿದ್ದೆ ಗಿದ್ದೆ ಸಾಕು
ಈ ತುಂಬು ಬಾಳು ತುಂಬಿರುವಾ ತನಕ
ತುಂತುಂಬಿ ಕುಡಿಯಬೇಕು
-ಎಂದು ಹಾಡಿ ಹರಿಸಿದ ಅ ಕವಿಗಳ ನೆನಹು ಮತ್ತೆ ಮತ್ತೆ ಕಾಡುವುದೇಕೋ…

ಒಲವೆಂಬ ಹೊತ್ತಿಗೆಯನೋದಬಯಸುವ ನೀನು
ಬೆಲೆ ಎಷ್ಟು  ಎಂದು ಕೇಳುವೆಯ ಹುಚ್ಚ
ಹಲ ಜನುಮ ಕಳೆದರೂ ಬಹು ವರುಷ ದುಡಿದರೂ
ತೆರಲಾರೆ ನೀನದರ ಬರಿ ಅಂಚೆವೆಚ್ಚ
-ಎಂದು ಹಾಡಿದ ಕವಿಯ ಮನಸಿನ ಭಾವುಕತೆಗೆ ಸಹ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ.

ತಿರುಕನೋರ್ವ ಊರಮುಂದೆ
ಮುರುಕು ಧರ್ಮಶಾಲೆಯಲ್ಲಿ
ಮಲಗಿರುತ್ತಲೊಂದ ಕನಸ ಕಂಡನಾಗಲೇ
-ಎಂಬ ಕವಿತೆಯನ್ನು ರಾಗವಾಗಿ ಹಾಡಿ, ತಿರುಕನ ಕನಸು ಭಂಗವಾದಾಗಿನ ಕೊನೆಯ ಸಾಲುಗಳನ್ನು ಹಾಡುವಾಗ ತೋರಿದ ವಿಷಾದ ಪುರುಷ ಪ್ರಯತ್ನವೆ ಶ್ರೇಷ್ಟ  ಎಂಬ ಕವಿತೆಯ ಮರ್ಮವನ್ನೂ ಮೀರಿ ನಮ್ಮ ಹಸುಮನಸ್ಸನ್ನು ಕಲಕಿದ್ದಂತೂ ನಿಜ!!

ಪಠ್ಯ ಪುಸ್ತಕದಲ್ಲಿನ ಪದ್ಯಗಳು ಓದಿ ಬಾಯಿಪಾಠ ಮಾಡಿ ತಾತ್ಪರ್ಯ ಬರೆದು ನಮ್ಮ ಪ್ರೀತಿಯ ಗುರುಗಳು ಭೇಷ್ ಎಂದು ಹೊಗಳಿದಾಗ ಈ ಎಲ್ಲ ಕವಿತೆಗಳ ಭಾವಸಾರದ ಹಕ್ಕು ನಮ್ಮದೇ ಆಗಿ ನಾವೇ ಆ ಕವಿತೆಗಳ ಕರ್ತುಗಳಾದಂತೆ ಹೆಮ್ಮೆ ಪಟ್ಟದ್ದು ಸುಳ್ಳಲ್ಲ!!
ನಂತರ ಕಾಲೇಜಿಗೆ ಹೋಗುವ ಸಮಯದಲ್ಲಂತೂ ಭಾವಗೀತೆಗಳ ಸುಂದರ ಜಗವೇ ಕಣ್ಮುಂದೆ ಅನಾವರಣ ಗೊಂಡಂತಾಗಿತ್ತು.

ನಿತ್ಯೋತ್ಸವದ ಕವಿ ನಿಸಾರ ಅಹ್ಮದ ಅವರ ಕವನಗಳೇ ಕನಸುಗಳಾಗಿದ್ದವು.

ಎಲ್ಲ ಮರೆತಿರುವಾಗ ….ಕವಿತೆಯಂತೂ ನೆನಪಿನ ಬುತ್ತಿಯ ಸಿಹಿ ಕಜ್ಜಾಯವಾಗಿ ಮಧುರ ನೆನಪಾಗಿ ಕಾಡುತ್ತದೆ.
ಬಹುತೇಕ ಎಲ್ಲ ಬಾವಗೀತೆಗಳು ನಂತರ ಹಾಡುವವರ ಸಿರಿಕಂಠದಿಂದ ಹೊರಹೊಮ್ಮಿ ಜನಪ್ರಿಯತೆಗಳಿಸಿದರೂ ಇನ್ನೂ ಅನೇಕ ಕವಿತೆಗಳು ವನಸುಮಗಳಂತೆ  ಪುಸ್ತಕಗಳ ತೆರೆಯ ಮರೆಯಲ್ಲಿಯೇ ಉಳಿದದ್ದೂ ನಿಜ!

ತುಹಿನ ಗಿರಿಗೆ ಚಲನದಾಸೆ
ಮೂಕವನಕೆ ಗೀತದಾಸೆ
ಸೃಷ್ಟಿ ಸಿರಿಯ ಹೊತ್ತ ತಿರೆಯ ನಗುವಿನಾಸೆ ನಾ!!
ಎಂದು ಹಾಡಿದ ಕವಿಯ ಭಾವನೆಯ ಅಲೆಯಲ್ಲಿ
ಮಿಂದ ಮನಸ್ಸು  ನಿಜಕ್ಕೂ ಇಂದಿಗೂ ಆ ವಿಶ್ವ ಪ್ರೇಮದ ಸಂಸ್ಕಾರವನ್ನು ಮರೆತೆನೆಂದರೂ ಮರೆಯುವುದಿಲ್ಲ.

ನಂತರ ಕನ್ನಡದ ಕ್ಲಾಸಿನಲ್ಲಿ  ನಮ್ಮ ನೆಚ್ಚಿನ ಪ್ರೋ. ಹರದಗಟ್ಥಿ ಗುರುಗಳು ಮಲುಹಣನ ರಗಳೆ ಎಂಬ   ಹಳೆಗನ್ನಡದ ಕಾವ್ಯವೊಂದನ್ನು  ಕಲಿಸುವಾಗ ಆ ಕಾವ್ಯದ ಕೊನೆಯ ಘಟ್ಟದಲ್ಲಿ ಬರುವ ಪಂಚಿಂಗ್
ಸಾಲನ್ನು ಘಟ್ಟಿಸಿ ಘಟ್ಟಿಸಿ ಹೇಳಿನಾವು ಎಂದೆಂದಿಗೂ  ಆ ಕಾವ್ಯವನ್ನು ಮರೆಯದಂತೆ ಪಾಠ ಮಾಡುತ್ತಿದ್ದ ಪರಿಗೆ ಇಂದಿಗೂ ಆ ಸಾಲುಗಳನ್ನು ಪ್ರಸಂಗ ಬಂದಾಗಲೆಲ್ಲ ಉದ್ಧರಿಸಿ ಸಂತಸ ಪಡುವುದೇ ಒಂದು ಸೌಭಾಗ್ಯ.
“ಬರುವುದೇನುಂಟೊಮ್ಮೆ ಬರುವ ಕಾಲಕೆ ಬಹುದು
ಬಯಕೆ …ಬರುವುದರ  ಕಣ್ಸನ್ನೆ ಕಾಣೋ”
ಎಂದು ಕವಿತೆಯನ್ನು ಮುಗಿಸುವಾಗ ನಮ್ಮ ಭಾವುಕ ಗುರುಗಳ ಕಣ್ಣುಗಳೂ ತೇವವಾಗಿರುತ್ತಿದ್ದದ್ದು ಸುಳ್ಳಲ್ಲ!!

ಶಾಲಾದಿನಗಳಲ್ಲಿ ಶಾಲಾವಾರ್ಷಿಕೋತ್ಸವಕ್ಕೆ ನಾವು ನೃತ್ಯ ಸಂಯೋಜನೆಗೆ ಬಳಸುತ್ತಿದ್ದ ಹಾಡುಗಳೆಲ್ಲ ಬಹುತೇಕ ಕುವೆಂಪು, ಬೇಂದ್ರೆ, ಅಡಿಗರು, ಮಂಜೇಶ ಗೋವಿಂದ ಪೈ ಅವರ ರಚನೆಗಳೇ ಆಗಿರುತ್ತಿದ್ದವು.
ದೂರ ಬಹು ದೂರ ಹೋಗುವ ಬಾರಾ
ಬಾಗಿಲೊಳು ಕ್ಯೆ ಮುಗಿದು ಒಳಗೆ ಬಾ ಯಾತ್ರಿಕನೇ
ಆನಂದಮಯ  ಈ ಜಗ ಹೃದಯ ….
ಮೂಡಲ ಮನೆಯಾ ಮುತ್ತಿನ ನೀರಿನಾ
ನೇಗಿಲ ಯೋಗಿ … ಮುಂತಾದ ಕವಿತೆಗಳು, ಗೀತೆಗಳು ನಮ್ಮ ಕುಣಿತದ ಓಘಕ್ಕೆ ಸಿಕ್ಕು ಕೋಲಾಟವಾಗಿಯೋ,  ಗ್ರುಪ್ ಡಾನ್ಸ್ ಆಗಿಯೋ ಪ್ರದರ್ಶನಗೊಂಡು   ಭಯಂಕರವಾಗಿ ಪ್ರಸಿದ್ಧಿ ಪಡೆದು, ಚಪ್ಪಾಳೆ ಗಿಟ್ಥಿಸಿಕೊಂಡು ಸಣ್ಣ ಪುಟ್ಟ ಬಹುಮಾನ ಪಡೆದು ಮನೆಕಡೆ ಹೆಜ್ಜೆ ಹಾಕುವಾಗ ಜಗವನ್ನೆ ಗೆದ್ದ ಭಾವ ಮನವನ್ನು ಆವರಿಸಿರುತ್ತಿತ್ತು.
ಕನ್ನಡ ಕವಿತೆಗಳಂತೆ ಅಷ್ಟಿಷ್ಟು ಕೆಲವು ಇಂಗ್ಲೀಷ್ ಕವಿತೆಗಳ ಸಾಲುಗಳೂ ಇನ್ನೂ ನೆನಪಿನ ಮೂಸೆಯಲ್ಲಿ ಅವಿತು ಕುಳಿತಿವೆ.

ಎಲ್ಲದಕ್ಕಿಂತ ಮಿಗಿಲಾಗಿ ನಮ್ಮ ಇಂಗ್ಲೀಷ್  ಭಾಷೆಯ ಕಾವ್ಯವಿಭಾಗವನ್ನು ಕಲಿಸಲು ಬರುತ್ತಿದ್ದ ಪ್ರೋಫೆಸರ್ ಒಬ್ಬರು ಪ್ರತಿಸಲ ಕ್ಲಾಸಿನೊಳಗೆ ಕಾಲಿಡುತ್ತಿಂದ್ದಂತೆ ನಮ್ಮೆಲ್ಲರತ್ತ ದೊಡ್ಡ ಕಣ್ಣು ಗಳನ್ನರಳಿಸಿ ಹೂಂಕರಿಸಿ what is poem!?????? ಎಂದು ಜೋರಾಗಿ ಪ್ರಶ್ನಿಸುತ್ತಿದ್ದರು. ಅವರ ಧ್ವನಿಯ
ಆರ್ಭಟಕ್ಕೆ ಹೆದರಿ ನಾವು ಮುಂದಿದ್ದ textbook ನ ಹಾಳೆ ತಿರುವುತ್ತಿದ್ದಂತೆ ಅವರ ಧ್ವನಿಯ ಅರೋಹಣ ಮೆಲ್ಲನೆ ಸ್ಥಾಯಿಯನ್ನು ಬದಲಾಯಿಸಿ ಅವರೋಹಣದ ಹಾದಿಯಲ್ಲಿ ಮಂಜುಳವಾಗಿ ಹರಿದು A POEM IS A SPONTANEOUS OVERFLOW OF POWERFUL FEELINGS THAT ARE RECOLLECTED IN TRANQUILITY……..ಎಂದು ವ್ಯಾಖ್ಯಾನಿಸಿ  ತಿಳಿಯಾದ ಮುಗುಳ್ನಗುವಿನಿಂದ Robert Frost ನ ಕವಿತೆಯೊಂದನ್ನು ವಾರಗಟ್ಟಲೇ ಕಲಿಸಿದ್ದು ಹಸಿಗೋಡೆಯ ಹರಳಿನಂತೆ ಮನದಲ್ಲಿ ನಾಟದಿರಲು ಸಾಧ್ಯವೇ??
ಇಂದು  ಅನೇಕ ಹಾಡುಗಳು ಭಾವಗೀತೆಗಳಾಗಿ ಹೊಸಪೀಳಿಗೆಗೆ ಪರಿಚಿತವಾಗುತ್ತಿರುವುದು ಸಂತಸದ ಸಂಗತಿ . ಆದರೂ ಇಂದಿನ ಪಠ್ಯಪುಸ್ತಕಗಳಲ್ಲಿ ಸತ್ವಭರಿತ ಜೀವನಕ್ಕೆ ಸಂಸ್ಕಾರ ನೀಡುವ  ಈ ಮಧುರ ಗೀತೆಗಳ  ಪಠಣ, ಪಾಠಣ ಅಷ್ಟಾಗಿ ಕಂಡುಬರುತ್ತಿಲ್ಲ ಎನ್ನುವುದು ತುಸು ನೋವಿನ ಸಂಗತಿಯೇ….
ಕೊನೆಯದಾಗಿ  ನನಗಿಷ್ಟವಾದ ಮತ್ತೊಂದು ಕವಿತೆ ಎಂದರೆ
ನಮ್ಮ ಮನೆಯ ಅಂಗಳದೊಳು ಅರಳಿತೊಂದು  ಪುಟ್ಟ ಮಲ್ಲಿಗೆ
ನೆಲ ಮುಗಿಲಿನ ಚೆಲುವನಾಂತು ಬಂದಿತೆಂತು ಇಲ್ಲಿಗೆ…..
ಎಂದು ಉಧ್ಘರಿಸಿದ ಕವಿಸಮಯದ ಭಾವ ಸ್ಪುರಣ.
ಮೂಡುವನು ರವಿ ಮೂಡುವನು ಕತ್ತಲೊಡನೆ
ಬಡಿದಾಡುವನು ಎಂಬ ಕವಿತೆಯ ಕೊನೆಗೆ ಏರಿದವನು ಚಿಕ್ಕವನಿರಬೇಕೇ … ಎಂಬ ಮಾತನು ಸಾರುವನು..
ಎನ್ನುವ ಕವಿತೆಯ ಸಾರಾಂಶ  ಬಾಳಹಾದಿಯಲಿ ಸದಾ ಬೆಳಕು ತೋರುವ ದೀವಿಗೆಯಾಗಿವೆ. ಇಂಥ ಕವಿ ಗಳ ಕವಿತೆಗಳಿಂದಾಗಿಯೇ  ಬೇವಿನ ಕಹಿ ಬಾಳಿನಲ್ಲಿ ಹೂವಿನ ನರುಗಂಪು ಸೂಸಿ ಕವಿದ ಕಾರಿರುಳ ತಮವ ನಿವಾರಿಸಿ ಬೆಳಕ ಗೀತೆಯ ಗಾನಸುಧೆ ಹರಿಸುವ ಗೆಯ್ಮೆ ನಮ್ಮದಾಗಲಿ
ಈ ಕವಿತೆಗಳ ಭಾವಸಾರವೇ ನಮ್ಮ ಸ್ವಭಾವಾಗಿ ಹೊರಹೊಮ್ಮಿ ಧನ್ಯತೆಯೊಂದೇ ನಾವು ಆ ಮಹಾನ್  ಕವಿಗಳ ಆಶಯಕ್ಕೆ ತೋರುವ ಗೌರವವಲ್ಲವೇ ?
ಪಂಜೆ ಮಂಗೇಶರಾಯರು, ಗೋವಿಂದ ಪೈ ಅವರು, ವಿ. ಸೀತಾರಾಮಯ್ಯನವರು, ಈಶ್ವರ ಸಣಕಲ್ಲರು, ರಾಜರತ್ನಂ ಅವರು, ರಾಷ್ಟ್ರ ಕವಿ ಕುವೆಂಪು, ಜಿ. ಎಸ್. ಶಿವರುದ್ರಪ್ಪ, ವರಕವಿ  ಬೇಂದ್ರೆ, ಪು. ತಿ. ನರಸಿಂಹಾಚಾರ್ಯರು, ಮೈಸೂರು ಮಲ್ಲಿಗೆಯ ಕೆ. ಸ್. ನರಸಿಂಹ ಸ್ವಾಮಿ, ಬೇಟಗೇರಿ ಕೃಷ್ಣ ಶರ್ಮ ರಿಂದ ಯಾವ ಮೋಹನ ಮುರಳಿ ಕರೆಯಿತು ಎಂದು ಸದಾ ಪ್ರಸ್ತುತವಾಗುವ ಅದ್ಭುತ   ಗೀತೆಯನ್ನು ನೀಡಿದ ಅಡಿಗರು ಹಾಗೂ ಇಂದಿಗೂ ನಮ್ಮೊಂದಿಗೆ ಇದ್ದು ಸರಳ ಸಜ್ಜನಿಕೆಯಿಂದ ನಿತ್ಯೋತ್ಸವಾಗಿ ಬೆಳಗುತ್ತಿರುವ  ಕವಿಗಳಾದ ನಿಸ್ಸಾರ ಅಹ್ಮದರು, ಚನ್ನವೀರ ಕಣವಿಯವರು, ಜ್ಞಾನಪೀಠ   ಪ್ರಶಸ್ತಿ ವಿಜೇತ ಕಂಬಾರರು, ವೆಂಕಟೇಶ ಮೂರ್ತಿಯವರು ಅಬ್ಬಾ ಎಷ್ಟೆಲ್ಲ ಅನರ್ಘ ರತ್ನಗಳು ನಮ್ಮ ಭಾವ ಜಗತ್ತನ್ನು ಶ್ರೀಮಂತಗೊಳಿಸಿವೆ.
ನಮ್ಮ ಸುಖ ದು:ಖಗಳಲ್ಲಿ ನಮಗರಿವಿಲ್ಲದಂತೆಯೇ ಸಹಭಾಗಿಯಾಗಿ ಸದಾ ಸಾಂತ್ವನಗೈಯ್ಯುವ ದಾರಿದೀಪದಂತಿರುವ ಈ ಕವಿತೆಗಳಿಗೆ, ಕವಿಗಳಿಗೆ ನಾವು ಸದಾ ಋಣಿಗಳು ಎಂದರೆ ಅತಿಶಯೋಕ್ತಿ ಏನಲ್ಲ, ಅಲ್ಲವೇ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button