*ಉದ್ಯಮಗಳಿಗೆ ನಿರಂತರ ವಿದ್ಯುತ್ ಪೂರೈಕೆ*; *ಉಧ್ಯಂಬಾಗ, ಮಚ್ಚೆ ವಿದ್ಯುತ್ ಮೂಲಸೌಕರ್ಯ ಮೇಲ್ದರ್ಜೆಗೆ*

220 ಕೆವಿ ವಿದ್ಯುತ್ ಸ್ಟೇಷನ್ಗಳ ಸಂಖ್ಯೆ ಒಂದರಿಂದ ಮೂರಕ್ಕೆ ಹೆಚ್ಚಳ; ವಿದ್ಯುತ್ ವ್ಯತ್ಯಯ ನಿವಾರಣೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆ ರೂಪಿಸುವ ಭರವಸೆ
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಉಧ್ಯಂಬಾಗ ಮತ್ತು ಮಚ್ಚೆ ಕೈಗಾರಿಕಾ ಪ್ರದೇಶಗಳಲ್ಲಿ ವಿದ್ಯುತ್ ಏರಿಳಿತ ಹಾಗೂ ಪದೇಪದೇ ವಿದ್ಯುತ್ ವ್ಯತ್ಯಯದಿಂದ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾ ಕೈಗಾರಿಕಾ ಕೇಂದ್ರ (DIC) ವತಿಯಿಂದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹೇಮಂತ್ ಹಾಗೂ ವಿವಿಧ ಉದ್ಯಮ ಸಂಘಟನೆಗಳ ಪ್ರತಿನಿಧಿಗಳ ಜಂಟಿ ಸಭೆ ಆಯೋಜಿಸಲಾಯಿತು.
ಸಭೆಯಲ್ಲಿ ಕೈಗಾರಿಕಾ ಪ್ರದೇಶಗಳ ವಿದ್ಯುತ್ ಮೂಲಸೌಕರ್ಯ ಸುಧಾರಣೆ, ಸಬ್ಸ್ಟೇಷನ್ಗಳ ಸಾಮರ್ಥ್ಯ ಹೆಚ್ಚಳ ಹಾಗೂ ಉದ್ಯಮಗಳಿಗೆ ನಿರಂತರ ವಿದ್ಯುತ್ ಪೂರೈಕೆ ಕುರಿತು ಚರ್ಚೆ ನಡೆಸಲಾಯಿತು.
ಬೆಳಗಾವಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ (BCCI) ವಿವಿಧ ಕೈಗಾರಿಕಾ ಹಾಗೂ ವ್ಯಾಪಾರ ಸಂಘಟನೆಗಳ ಪರವಾಗಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿ, ಎಂಎಸ್ಎಂಇ ಉದ್ಯಮಗಳು ಎದುರಿಸುತ್ತಿರುವ ವಿದ್ಯುತ್ ಏರಿಳಿತ ಸಮಸ್ಯೆಯನ್ನು ತಕ್ಷಣ ಪರಿಹರಿಸುವಂತೆ ಒತ್ತಾಯಿಸಿತು.
ಮಚ್ಚೆ ಸಬ್ಸ್ಟೇಷನ್ನಲ್ಲಿ ಮಂಜೂರಾಗಿರುವ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ತಕ್ಷಣ ಆರಂಭಿಸಬೇಕು. 33 ಕೆವಿ ಸಬ್ಸ್ಟೇಷನ್ಗಳನ್ನು 110 ಕೆವಿಗೆ ಹಾಗೂ 110 ಕೆವಿ ಸಬ್ಸ್ಟೇಷನ್ಗಳನ್ನು 220 ಕೆವಿಗೆ ಮೇಲ್ದರ್ಜೆಗೇರಿಸುವ ಪ್ರಕ್ರಿಯೆಗೆ ವೇಗ ನೀಡಬೇಕು. ಉಧ್ಯಂಬಾಗ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚುವರಿ ಸಬ್ಸ್ಟೇಷನ್ ಸ್ಥಾಪಿಸಬೇಕು. ಈಗಿರುವ ವಿದ್ಯುತ್ ಮೂಲಸೌಕರ್ಯವನ್ನು ಆಧುನೀಕರಿಸಿ, ನಿರಂತರ ಹಾಗೂ ಗುಣಮಟ್ಟದ ವಿದ್ಯುತ್ ಪೂರೈಕೆ ಖಚಿತಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಯಿತು.
ಇದಲ್ಲದೆ, ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲು ಸ್ಥಳೀಯ ಹೆಸ್ಕಾಂ ಅಧಿಕಾರಿಗಳು ಹಾಗೂ ಉದ್ಯಮ ಸಂಘಟನೆಗಳ ಪ್ರತಿನಿಧಿಗಳ ನಡುವೆ ಪ್ರತಿ ಮೂರು ತಿಂಗಳಿಗೊಮ್ಮೆ ಜಂಟಿ ಸಭೆ ನಡೆಸುವ ವ್ಯವಸ್ಥೆ ರೂಪಿಸಬೇಕು ಎಂದು ಒತ್ತಾಯಿಸಲಾಯಿತು.
220 ಕೆವಿ ಸ್ಟೇಷನ್ಗಳ ಸಂಖ್ಯೆ ಮೂರಕ್ಕೆ ಹೆಚ್ಚಳ: ಹೆಸ್ಕಾಂ ಎಂಡಿ ಭರವಸೆ
ಸಭೆಯಲ್ಲಿ ಮಾತನಾಡಿದ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಹೇಮಂತ್, ಬೆಳಗಾವಿಯ ಉದ್ಯಮಗಳಿಗೆ ವಿದ್ಯುತ್ ಪೂರೈಕೆಯಲ್ಲಿ ಸಾಕಷ್ಟು ಬದಲಾವಣೆ ಹಾಗೂ ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರಸ್ತುತ ಬೆಳಗಾವಿಯಲ್ಲಿ ಒಂದು 220 ಕೆವಿ ವಿದ್ಯುತ್ ಸ್ಟೇಷನ್ ಇದ್ದು, ಶೀಘ್ರದಲ್ಲೇ ಇವುಗಳ ಸಂಖ್ಯೆಯನ್ನು ಮೂರಕ್ಕೆ ಹೆಚ್ಚಿಸಲಾಗುವುದು. ಇದರಿಂದ ವಿದ್ಯುತ್ ಮೇಲಿನ ಲೋಡ್ ಕಡಿಮೆಯಾಗಿ, ಪೂರೈಕೆ ವ್ಯವಸ್ಥೆ ಸುಧಾರಿಸಲಿದೆ ಎಂದು ತಿಳಿಸಿದರು.
ಉದ್ಯಮಿಗಳು ಹಾಗೂ ಹೆಸ್ಕಾಂ ಅಧಿಕಾರಿಗಳು ಒಟ್ಟಾಗಿ ಚರ್ಚಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ವಿದ್ಯುತ್ ವ್ಯತ್ಯಯ ಕಡಿಮೆ ಮಾಡಲು ಅಲ್ಪಾವಧಿ ಕ್ರಮಗಳ ಜೊತೆಗೆ ದೀರ್ಘಾವಧಿಯ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಈ ನಿಟ್ಟಿನಲ್ಲಿ ತಮ್ಮ ತಂಡದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸಿ ಅಗತ್ಯ ಸುಧಾರಣೆಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕೈಗಾರಿಕಾ ಪ್ರದೇಶಗಳ ಬೆಳವಣಿಗೆಗೆ ನಿರಂತರ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದ್ದು, ಉದ್ಯಮಗಳ ಸಮಸ್ಯೆಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಹೆಸ್ಕಾಂ ಕ್ರಮ ಕೈಗೊಳ್ಳಲಿದೆ ಎಂಬ ಆಶಯ ಸಭೆಯಲ್ಲಿ ವ್ಯಕ್ತವಾಯಿತು.
ಸಭೆಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್, BCCI ಅಧ್ಯಕ್ಷ ಸ್ವಪ್ನಿಲ್ ಶಹ, ಕಾರ್ಯದರ್ಶಿ ಮನೋಜ್ ಮತ್ತಿಕೊಪ್ಪ, ಹೆಸ್ಕಾಂ ಸಮಿತಿ ಅಧ್ಯಕ್ಷ ಆನಂದ ದೇಸಾಯಿ, ನಿಕಟಪೂರ್ವ ಅಧ್ಯಕ್ಷ ಪ್ರಭಾಕರ ನಾಗರಮುನೋಳಿ, ಕೈಗಾರಿಕಾ ಸಮಿತಿ ಅಧ್ಯಕ್ಷ ರಾಜೇಶ್ ಮುಚ್ಚಂಡಿಕರ್, ಕಾರ್ಪೊರೇಷನ್ ಸಮಿತಿ ಅಧ್ಯಕ್ಷ ಸಂದೀಪ್ ಬಾಗೇವಾಡಿ, ನ್ಯೂಸ್ ಲೆಟರ್ ಎಡಿಟರ್ ಎಂ.ಕೆ. ಹೆಗಡೆ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ನಿತಿನ್ ಲೇಂಡಗೆ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಹೆಸ್ಕಾಂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



