ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. ಬೆಳಗಾವಿ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಅರಭಾವಿ ಶಾಸಕ ಮತ್ತು ಕೆಎಂಎಫ್ ನಿಕಟಪೂರ್ವ ಅಧ್ಯಕ್ಷ, ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ ೧೩ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ವಿವೇಕರಾವ್ ಪಾಟೀಲ (ರಾಯಬಾಗ), ಬಾಲಚಂದ್ರ ಲಕ್ಷ್ಮಣರಾವ್ ಜಾರಕಿಹೊಳಿ (ಗೋಕಾಕ್), ಮಲ್ಲಪ್ಪ ಬಾಳಪ್ಪ ಪಾಟೀಲ (ಮೂಡಲಗಿ), ಕಲ್ಲಪ್ಪ ನಿಂಗಪ್ಪ ಗಿರೆನ್ನವರ (ಬೆಳಗಾವಿ), ಡಾ. ಬಸವರಾಜ ಮ. ಪರವಣ್ಣನವರ (ಕಿತ್ತೂರು), ಬಾಬುರಾವ ಸತ್ತೆಪ್ಪ ವಾಘಮೋಡೆ (ಕಾಗವಾಡ), ವಿರೂಪಾಕ್ಷಿ ಬಾಳಪ್ಪ ಈಟಿ (ಚಿಕ್ಕೋಡಿ), ರಾಯಪ್ಪ ಬಾಳಪ್ಪ ಡೂಗ (ಹುಕ್ಕೇರಿ), ಪ್ರಕಾಶ ಯಲ್ಲಪ್ಪ ಅಂಬೋಜಿ (ಖಾನಾಪುರ), ಸಂಜಯ ಶ್ರೀಶೈಲಪ್ಪ ಶಿಂತ್ರೆ (ನಿಪ್ಪಾಣಿ), ಸದೆಪ್ಪ ಬಸಲಿಂಗಪ್ಪ ವಾರಿ (ಸವದತ್ತಿ), ಶಂಕರ ಕೆಂಚಪ್ಪ ಇಟ್ನಾಳ (ಯರಗಟ್ಟಿ), ಸವಿತಾ ಸುರೇಶ ಖಾನಪ್ಪಗೋಳ (ಮೂಡಲಗಿ-ಮಹಿಳಾ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿದ್ದ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ರಿಜಿಸ್ಟ್ರಾರ್ ರಾಜಶ್ರೀ ಜೈನಾಪುರ ಪ್ರಕಟಿಸಿದರು. ಇನ್ನು ಅಥಣಿ, ಬೈಲಹೊಂಗಲ ಮತ್ತು ರಾಮದುರ್ಗ ಕ್ಷೇತ್ರಗಳಿಗೆ ತಲಾ ಒಂದೊಂದು ಸ್ಥಾನಗಳಿಗೆ ಬರುವ ಭಾನುವಾರ ೧೭ ರಂದು ಚುನಾವಣೆ ನಡೆಯಲಿದೆ ಎಂದು ಜೈನಾಪುರ ತಿಳಿಸಿದರು.
ನಾಮಪತ್ರಗಳನ್ನು ವಾಪಸ್ಸು ಪಡೆಯಲು ಸೋಮವಾರ ಕಡೆಯ ದಿನವಾಗಿತ್ತು.
ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘದ ಅಭಿವೃದ್ಧಿಗೆ ಕ್ರಮ- ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಭಿವೃದ್ಧಿಗೆ ಸಹಕಾರಿ ತತ್ವದಡಿ ಶ್ರಮಿಸುವುದಾಗಿ ಆಡಳಿತ ಮಂಡಳಿಯ ಚುನಾವಣೆಯ ನೇತೃತ್ವ ವಹಿಸಿರುವ ಶಾಸಕ ಮತ್ತು ಕೆಎಂಎಫ್ ನಿರ್ದೇಶಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.
ಇದೇ ದಿ. ೧೭ ರಂದು ಜಿಲ್ಲಾ ಹಾಲು ಒಕ್ಕೂಟಕ್ಕೆ ಚುನಾವಣೆ ನಿಗದಿಯಾಗಿದ್ದು, ರೈತರು ಮತ್ತು ಸಹಕಾರಿಗಳ ಸಹಕಾರದಿಂದ ಒಟ್ಟು ೧೬ ಸ್ಥಾನಗಳ ಪೈಕಿ ೧೩ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಕಳೆದ ಮೂರು ಅವಧಿಗಳಿಂದ ಈ ಒಕ್ಕೂಟದ ಆಡಳಿತ ಮಂಡಳಿಯ ಸದಸ್ಯರ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆ ನಡೆದಿದೆ. ಈ ಬಾರಿಯೂ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಗೆ ಪ್ರಯತ್ನಿಸಲಾಗುತ್ತಿದೆಯಾದರೂ ಕೆಲವರಲ್ಲಿ ಹೊಂದಾಣಿಕೆ ಕೊರತೆಯಿಂದ ಮೂರು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಮೂರೂ ಸ್ಥಾನಗಳು ಸಹ ತಮ್ಮ ನೇತೃತ್ವದ ಅಭ್ಯರ್ಥಿಗಳು ಆಯ್ಕೆಯಾಗಲಿದ್ದಾರೆ. ಸಹಕಾರ ತತ್ವಗಳನ್ನು ಪಾಲನೆ ಮಾಡಿಕೊಂಡು ಹಾಲು ಒಕ್ಕೂಟದ ಪ್ರಗತಿಗೆ ಶ್ರಮಿಸುತ್ತಿರುವ ರೈತರ ಸಂಸ್ಥೆಗೆ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಚುನಾವಣೆಯನ್ನು ನಡೆಸಲಾಗಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಮುಖಂಡರು ಸಹ ಸಹಕಾರ ನೀಡಿದ್ದಾರೆ. ಅದರಲ್ಲಿಯೂ ರಾಜ್ಯ ಸರ್ಕಾರದ ಸಚಿವರುಗಳ ಸಹ ನಮಗೆ ಅಗತ್ಯವಿರುವ ಎಲ್ಲ ಬೆಂಬಲವನ್ನು ನೀಡುವ ಮೂಲಕ ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ್ದಾರೆ ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟವನ್ನು ರಾಜ್ಯದಲ್ಲಿಯೇ ಮಾದರಿಯನ್ನಾಗಿ ಮಾಡಲಾಗುವುದು. ರೈತರು, ಹಾಲು ಉತ್ಪಾದಕರು ಮತ್ತು ನೌಕರರ ಆಶಯದಂತೆ ಒಕ್ಕೂಟದ ಬಲವರ್ಧನೆಗೆ ಸಹಕಾರ ತತ್ವದಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ನಿರ್ವಹಿಸುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ