ಪ್ರಗತಿವಾಹಿನಿ ಸುದ್ದಿ, ನವದೆಹಲಿ -ತಮ್ಮನ್ನು ಅನರ್ಹಗೊಳಿಸಿರುವ ಕರ್ನಾಟಕ ವಿಧಾನಸಭೆ ಸ್ಪೀಕರ್ ಆದೇಶವನ್ನು ರದ್ಧುಗೊಳಿಸಬೇಕು ಎಂದು 17 ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಬುಧವಾರಕ್ಕೆ ಮುಂದೂಡಿದೆ.
ಬುಧವಾರ ವಾದಮಂಡಿಸಲು ಅನರ್ಹ ಶಾಸಕರ ಪರ ವಕೀಲ ಮುಖುಲ್ ರೋಹಟಗಿಗೆ ಮತ್ತು ಗುರುವಾರ ವಾದ ಮಂಡಿಸಲು ಸ್ಪೀಕರ್ ಪರ ವಕೀಲ ಕಪಿಲ್ ಸಿಬಲ್ ಅವರಿಗೆ ಸೂಚಿಸಿದೆ. ಇದಾದ ನಂತರ ಸುಪ್ರಿಂ ಕೋರ್ಟ್ ತೀರ್ಪು ನೀಡಲಿದೆ. ಅಂದರೆ, ಅನರ್ಹ ಶಾಸಕರು ಇನ್ನೂ 4 ದಿನ ಕಾಯಲೇಬೇಕಾಗಿದೆ.
ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆ ಆರಂಭಿಸುವ ಮುನ್ನ ಒಂದು ಗಂಟೆ ಮುಂದೂಡಲಾಗಿತ್ತು. ನಂತರ ಎರಡೂ ಕಡೆಯ ವಕೀಲರು ತಮ್ಮ ವಾದ ಮಂಡಿಸಿದರು. ಇದೇ ವೇಳೆ ಚುನಾವಣೆ ಆಯೋಗ ಕೂಡ ಆಶ್ಚರ್ಯಕರ ರೀತಿಯಲ್ಲಿ ಪತ್ರವೊಂದನ್ನು ಸುಪ್ರಿಂ ಕೋರ್ಟ್ ಗೆ ಸಲ್ಲಿಸಿತು.
ವಾದ-ಪ್ರತಿವಾದ
ಶಾಸಕರನ್ನು ಅನರ್ಹಗೊಳಸಿದ್ದು ತಪ್ಪು. ಅವರಿಗೆ ಸಮಯಾವಕಾಶ ನೀಡಿ ನೋಟೀಸ್ ಕೂಡ ನೀಡಿರಲಿಲ್ಲ. ಹಾಗಾಗಿ ಸ್ಪೀಕರ್ ಆದೇಶವನ್ನು ರದ್ದುಗೊಳಿಸಬೇಕು ಎಂದು ಅನರ್ಹರ ಪರ ವಕೀಲರು ವಾದ ಮಂಡಿಸಿದರು.
ಸ್ಪೀಕರ್ ಕ್ರಮ ಸರಿಯಾಗಿದೆ. ಹಾಗಾಗಿ ಈ ಪ್ರಕರಣಕ್ಕೆ ಯಾವುದೇ ಮಧ್ಯಂತರ ಆದೇಶ ನೀಡಬಾರದು. ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಬೇಕು ಎಂದು ಕಪಿಲ್ ಸಿಬಲ್ ವಾದ ಮಂಡಿಸಿದರು.
ಈ ವೇಳೆ ಚುನಾವಣೆ ಆಯೋಗ ಸ್ವಯಂ ಪ್ರೇರಿತವಾಗಿ, ಅನರ್ಹರು ಚುನಾವಣೆಗೆ ಸ್ಪರ್ಧಿಸಲು ತನ್ನ ಆಕ್ಷೇಪವಿಲ್ಲ ಎನ್ನುವ ಪತ್ರವೊಂದನ್ನು ಸುಪ್ರಿಂ ಕೋರ್ಟ್ ಮುಂದೆ ಮಂಡಿಸಿತು. ಅಂತಿಮವಾಗಿ ಸುಪ್ರಿಂ ಕೋರ್ಟ್ ಬುಧವಾರಕ್ಕೆ ವಿಚಾರಣೆಯನ್ನು ಮುಂದೂಡಿತು.
ಹಲವರಿಗೆ ನೋಟೀಸ್
ಜೊತೆಗೆ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಮತ್ತು ಸ್ಪೂೀಕರ್ ಕಚೇರಿಗೂ ಸುಪ್ರಿಂ ಕೋರ್ಟ್ ನೋಟೀಸ್ ಜಾರಿಗೊಳಿಸಿದೆ.
ಇದರಿಂದಾಗಿ ಅನರ್ಹ ಶಾಸಕರಿಗೆ ಅತಂತ್ರ ಸ್ಥಿತಿ ಮುಂದುವರಿದಂತಾಗಿದೆ. ಆದರೆ ಚುನಾವಣೆ ಆಯೋಗದ ಪತ್ರ ಸ್ವಲ್ಪ ರಿಲೀಫ್ ನೀಡಿದೆ. ಚುನಾವಣೆ ಆಯೋಗ ಚುನಾವಣೆ ಅಧಿಸೂಚನೆ ಹೊರಡಿಸುವಾಗ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶವಿಲ್ಲ ಎಂದು ಹೇಳಿ ಇದೀಗ ಅವರ ಸ್ಪರ್ಧಗೆ ತನ್ನ ಆಕ್ಷೇಪ್ ಇಲ್ಲ ಎಂದು ಸ್ವಯಂ ಪ್ರೇರಿತವಾಗಿ ಪತ್ರ ನೀಡಿರುವುದು ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಚುನಾವಣೆಯೇ ರದ್ದಾಗುತ್ತಾ? -ಸುಪ್ರಿಂ ತೀರ್ಪು ಏಕೆ ಮಹತ್ವ ಗೊತ್ತಾ?
ನೀತಿ ಸಂಹಿತೆ ಉಲ್ಲಂಘನೆಯ ಮೊದಲ ದೂರು ಮುಖ್ಯಮಂತ್ರಿ ವಿರುದ್ಧ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ