Latest

ಶೆಟ್ಟಿಹಳ್ಳಿ ಜನರಿಗೆ ಕಾಡುಕೋಣದ ಕಾಟ; ರಾಮಸಮುದ್ರದಲ್ಲಿ ಚಿರತೆ ಪುಂಡಾಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಸರಕಾರದ ಹಲವು ಪ್ರಯತ್ನಗಳು, ಕ್ರಮಗಳ ಮಧ್ಯೆಯೂ  ಮಾನವ- ವನ್ಯಜೀವಿಗಳ ನಡುವಿನ ಸಂಘರ್ಷ ಅಂತ್ಯ ಕಾಣುತ್ತಿಲ್ಲ. ಹಲವೆಡೆ ಕಾಡು ಪ್ರಾಣಿಗಳು ಜನರನ್ನು ಹೈರಾಣಾಗಿಸುತ್ತಲೇ ಇವೆ.

ಯಾದಗಿರಿ ತಾಲೂಕಿನ ರಾಮಸಮುದ್ರ ಗ್ರಾಮದಲ್ಲಿ ನಾಲ್ಕೈದು ದಿನಗಳಿಂದ ಚಿರತೆಯೊಂದು ಜನರ ನಿದ್ದೆಗೆಡಿಸಿದ್ದು ರಾತ್ರಿ ಹೊತ್ತು ರೈತರ ಜಮೀನಿಗೆ ನುಗ್ಗಿ  ಜಾನುವಾರುಗಳ ಭಕ್ಷಣೆ ನಡೆಸುತ್ತಿದೆ.

ನಾಗೇಂದ್ರ ರೆಡ್ಡಿ ಎಂಬ ರೈತರಿಗೆ ಸೇರಿದ ನಾಲ್ಕು ಜಾನುವಾರುಗಳನ್ನು ಭಕ್ಷಣೆ ಮಾಡಿರುವ ಚಿರತೆ, ಈಗಾಗಲೇ ಎರಡು ನಾಯಿಗಳನ್ನು ಸಹ ಭಕ್ಷಣೆ ಮಾಡಿದೆ.

ಈ ಭಾಗದ ರೈತರು, ಸಾರ್ವಜನಿಕರು ಮನೆಯಿಂದ ಹೊರಬೀಳಲಿಕ್ಕೂ ಆತಂಕಪಡುತ್ತಿದ್ದಾರೆ. ರಾತ್ರಿ ತಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ನಿದ್ದೆಗೆಡುತ್ತಿದ್ದಾರೆ.

ಸದ್ಯ ಇಲ್ಲಿನ ಅರಣ್ಯ ಇಲಾಖೆ ಬಳಿ ಟ್ರ್ಯಾಪಿಂಗ್ ಕ್ಯಾಮರಾ ಹಾಗೂ ಬೋನಿನ ವ್ಯವಸ್ಥೆ ಇಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್ ತಿಳಿಸಿದ್ದು ಸದ್ಯ ಇವುಗಳಿಗಾಗಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ತಾತ್ಕಾಲಿಕವಾಗಿ ಕಲಬುರಗಿಯಿಂದ ತರಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹುಕ್ಕೇರಿ ತಾಲೂಕಿನಲ್ಲಿ:

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ಕಾಡುಕೋಣಗಳು ರೈತರ ನಿದ್ದೆಗೆಡಿಸಿದೆ. 40- 50 ಸಂಖ್ಯೆಯಲ್ಲಿರುವ ಕಾಡೆಮ್ಮೆಗಳೂ ಒಳಗೊಂಡಿರುವ ಹಿಂಡು ರಾತ್ರಿ ವೇಳೆ ಹೊಲಗದ್ದೆಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.

ಸಲಾಮವಾಡಿ ಗ್ರಾಮದ ರವೀಂದ್ರ ಪಾಟೀಲ ಎಂಬುವವರ 2.20 ಎಕರೆ ಹಾಗೂ ದತ್ತಾತ್ರೇಯ ಪಾಟೀಲ ಅವರ 1.30 ಎಕರೆ ಜಮೀನಿನ ಕಬ್ಬಿನ ಬೆಳೆಯನ್ನು ಈ ಹಿಂಡು ನಾಶಗೈದಿದೆ. ಇದಲ್ಲದೆ ಭತ್ತ, ರಾಗಿ, ತರಕಾರಿ, ಗೋಡಂಬಿ ಇತ್ಯಾದಿಗಳನ್ನೂ ನಾಶ ಮಾಡಿವೆ. ಎರಡು ವಾರಗಳಿಂದ ನಿಲ್ಲದ ಈ ಕಾಟಕ್ಕೆ ರೈತರು ಸುಸ್ತಾಗಿದ್ದಾರೆ. ಸೂಕ್ತ ಕ್ರಮಕ್ಕಾಗಿ ಅರಣ್ಯ ಇಲಾಖೆ ಮೊರೆ ಹೋಗಿದ್ದಾರೆ.

ಬೆಚ್ಚಿ ಬೀಳಿಸಿದ ಒಂಟಿ ಸಲಗ:

ಇದೇ ವೇಳೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ- ದಾಂಡೇಲಿ ರಸ್ತೆಯಲ್ಲಿ ಒಂಟಿ ಸಲಗ ಹಾದಿ ಮಧ್ಯದಲ್ಲೇ ಪ್ರತ್ಯಕ್ಷವಾಗಿದ್ದು ಕಾರೊಂದರಲ್ಲಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಎಸ್ಕೇಪ್ ಆದ ವಿಡಿಯೊ ಜನರ ಎದೆಬಡಿತ ಹೆಚ್ಚಿಸಿದೆ.

ಮಾನವ- ವನ್ಯಜೀವಿ ಸಂಘರ್ಷ ನಿವಾರಣೆ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಹಲವು ಬಾರಿ ಸಭೆಗಳು ನಡೆದಿದ್ದರೂ ಅರಣ್ಯ ಇಲಾಖೆ ಇನ್ನೂ ಸಬಲೀಕರಣಗೊಂಡಿಲ್ಲ. ಹಲವೆಡೆ ಅರಣ್ಯ ಇಲಾಖೆ ಬಳಿ ಟ್ರ್ಯಾಪ್ ಕ್ಯಾಮರಾ, ಬೋನುಗಳೂ ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದೆ.

 

*50 ದಿನಗಳ ಬಳಿಕ BJP ಸರ್ಕಾರ ಇರಲ್ಲ ಎಂದ ಡಿ.ಕೆ.ಶಿವಕುಮಾರ್*

https://pragati.taskdun.com/d-k-shivakumarreactionvidhanasabha-election-2/

ಆಡಳಿತ ಸುಧಾರಣಾ ಆಯೋಗದ ವರದಿಗಳು ಸರಕಾರಕ್ಕೆ ಸಲ್ಲಿಕೆ

https://pragati.taskdun.com/administrative-reforms-commission-reports-submitted-to-govt/

ಮಂಗಮಾಯವಾಗಿದ್ದ ಮಹಾರಾಷ್ಟ್ರ ಸರ್ಕಾರಿ ಬಸ್ ಕರ್ನಾಟಕದಲ್ಲಿ ಪತ್ತೆ!

https://pragati.taskdun.com/stolen-maharashtra-government-bus-found-in-karnataka/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button