*ಶತಮಾನ ಪೂರೈಸಿದ ಶಾಲೆಯಿಂದ ಪ್ರತಿಭೆಗಳ ಅನಾವರಣ: ಜನಕಟ್ಟಿ*
ಪ್ರಗತಿವಾಹಿನಿ ಸುದ್ದಿ, ಖಾನಾಪುರ: “ಪಟ್ಟಣದ ಶಾಸಕರ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ 1906ರಲ್ಲಿ ಆರಂಭಗೊಂಡಿದ್ದು, ಶತಮಾನೋತ್ಸವ ಪೂರೈಸಿದೆ. ಈ ಶಾಲೆಯಲ್ಲಿ ಕಲಿತ ಅಸಂಖ್ಯಾತ ವಿದ್ಯಾರ್ಥಿಗಳು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗಡಿಭಾಗದ ಕನ್ನಡ ಭಾಷಿಕರ ಅಸಂಖ್ಯಾತ ಪ್ರತಿಭೆಗಳ ಅನಾವರಣ ಈ ಶಾಲೆಯಿಂದ ಆಗಿದೆ” ಎಂದು ಸಿ.ಆರ್.ಪಿ ಬಸವರಾಜ ಜನಕಟ್ಟಿ ಹೇಳಿದರು.
ಶಾಸಕರ ಮಾದರಿ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಕಳೆದ ಶೈಕ್ಷಣಿಕ ವರ್ಷದಲ್ಲಿ ಕ್ರೀಡೆ, ಪ್ರತಿಭಾ ಕಾರಂಜಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಮಾತನಾಡಿ, “ಹಿಂದೆ ಖಾಸಗಿ ಶಾಲೆಗಳ ಸಂಖ್ಯೆ ಕಮ್ಮಿ ಇತ್ತು. ಆಗ ನಾವೆಲ್ಲ ಸರ್ಕಾರಿ ಶಾಲೆಗಳಲ್ಲೇ ಕಲಿಯಬೇಕಿತ್ತು. ಆದರೆ ಆಗಿನ ಕಾಲದಲ್ಲಿ ಸರ್ಕಾರಿ ಶಾಲೆಗಳಲ್ಲಿ ಈಗಿರುವಷ್ಟು ಸೌಕರ್ಯಗಳು ಇರಲಿಲ್ಲ. ಈಗ ಕಾಲ ಬದಲಾಗಿದೆ. ಸರ್ಕಾರಿ ಶಾಲೆಗಳು ಹೈಟೆಕ್ ಆಗಿ ಬದಲಾಗಿವೆ. ಸರ್ಕಾರಿ ಶಾಲೆಗಳಲ್ಲಿ ಪ್ರತಿಭಾವಂತ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳಿಗೆ ಇಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಆದರೆ ಪಾಲಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬರುತ್ತಿಲ್ಲ. ಪರಿಣಾಮ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಪ್ರತಿ ವರ್ಷ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಕುಂಠಿತಗೊಳ್ಳುತ್ತಿರುವುದು ಕಳವಳದ ಸಂಗತಿ. ಸರ್ಕಾರದ ಎಲ್ಲ ಸೌಲಭ್ಯಗಳು ತಮಗೆ ಬೇಕು ಎನ್ನುವ ಪ್ರತಿಯೊಬ್ಬರೂ ಸರ್ಕಾರಿ ಶಾಲೆಗಳನ್ನು ಉಳಿಸುವ ಸಂಕಲ್ಪ ಹೊಂದಬೇಕು” ಎಂದು ಅವರು ಕರೆ ನೀಡಿದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ತಾನಾಜಿ ಪೂಜಾರಿ ಸ್ನೇಹ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಶಾಲೆಯ ಮಕ್ಕಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಬಿಇಒ ಅಪ್ಪಣ್ಣ ಅಂಬಗಿ, ಮುಖ್ಯ ಶಿಕ್ಷಕಿ ಸಾವಿತ್ರಿ ಕುಜ್ಜಿ, ಸರ್ಕಾರಿ ಪಿಯು ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಹಾಗೂ ಪತ್ರಕರ್ತ ಪ್ರಸನ್ನ ಕುಲಕರ್ಣಿ ಸೇರಿದಂತೆ ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಸದಸ್ಯರು, ಪಾಲಕರು, ವಿದ್ಯಾರ್ಥಿಗಳು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ