Kannada NewsKarnataka NewsLatestWorld

*ಏಕ ಕಾಲಕ್ಕೆ 10 ಸಾವಿರ ವಿಮಾನ ಹಾರಾಟ ಸ್ಥಗಿತ*: *15 ಲಕ್ಷ ಪ್ರಯಾಣಿಕರಿಗೆ ಸಂಕಷ್ಟ, ಕಾರಣವೇನು?*

ಪ್ರಗತಿವಾಹಿನಿ ಸುದ್ದಿ: ಅಮೆರಿಕದ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ತಾಂತ್ರಿಕ ದೋಷದಿಂದ ದೇಶಾದ್ಯಂತ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ವಿಮಾನಗಳ ಟೇಕ್‌ಆಫ್‌ಗೆ ತಾತ್ಕಾಲಿಕ ನಿರ್ಬಂಧ ವಿಧಿಸಿತ್ತು. ಇದರಿಂದ ಸಾವಿರಾರು ವಿಮಾನಗಳ ಸಂಚಾರ ರದ್ದಾಗಿದ್ದು, ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದೆ. ನಿರ್ಬಂಧ ತೆರವುಗೊಂಡಿದ್ದರೂ ಸೇವೆಗಳು ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ನೀಡಿರುವ ಮಾಹಿತಿಯ ಪ್ರಕಾರ, ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯ ಸ್ವಿಚ್‌ಗಳು ಮತ್ತು ರೂಟರ್‌ಗಳು ಹೆಚ್ಚಿನ ಡೇಟಾ ಒತ್ತಡದಿಂದ ಓವರ್‌ಲೋಡ್ ಆಗಿದ್ದವು. ಇದರಿಂದ ತಪ್ಪಾದ ಹಾಗೂ ಅಸಮಂಜಸ ಮಾಹಿತಿಗಳು ರವಾನೆಯಾಗಿ ಸಂವಹನ ಮತ್ತು ರಾಡಾರ್ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು.

ದೇಶದಾದ್ಯಂತ ಇರುವ 22 ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ಮೇಲೂ ಇದರ ಪರಿಣಾಮ ಬೀರಿತ್ತು. ಪೈಲಟ್‌ಗಳು ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ನಡುವೆ ಸರಿಯಾದ ಸಂವಹನ ಸಾಧ್ಯವಾಗದಿದ್ದರೆ ವಿಮಾನಗಳ ಸುರಕ್ಷತೆಗೆ ಅಪಾಯ ಎದುರಾಗಬಹುದು. ಹೀಗಾಗಿ FAA ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನಗಳ ಟೇಕ್‌ಆಫ್‌ಗೆ ತಡೆ ನೀಡಿತ್ತು. ಈಗಾಗಲೇ ಆಕಾಶದಲ್ಲಿದ್ದ ವಿಮಾನಗಳಿಗೆ ಸುರಕ್ಷಿತವಾಗಿ ಇಳಿಯಲು ಅವಕಾಶ ಕಲ್ಪಿಸಲಾಗಿತ್ತು.

ಈ ತಾಂತ್ರಿಕ ಸಮಸ್ಯೆಯ ಹಿಂದೆ ಸೈಬರ್ ದಾಳಿ ಅಥವಾ ಕೃತಕ ಬುದ್ಧಿಮತ್ತೆಯ ಕೈವಾಡವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಸೈಬರ್ ದಾಳಿಯ ಯಾವುದೇ ಪುರಾವೆ ಪತ್ತೆಯಾಗಿಲ್ಲ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್ ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಸೇವೆಗಳಲ್ಲಿನ ವ್ಯತ್ಯಯಕ್ಕೂ ಈ ಘಟನೆಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಘಟನೆಯಿಂದ ಅಮೆರಿಕದಲ್ಲಿ 4 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, 10 ಸಾವಿರಕ್ಕೂ ಅಧಿಕ ವಿಮಾನಗಳು ವಿಳಂಬವಾಗಿವೆ. ಸುಮಾರು 15 ಲಕ್ಷ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಏರ್ ಇಂಡಿಯಾ ಕೂಡ ಅಮೆರಿಕಕ್ಕೆ ತೆರಳುವ ಹಾಗೂ ಅಲ್ಲಿಂದ ಭಾರತಕ್ಕೆ ಬರುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿತ್ತು.

ಇದೇ ವೇಳೆ, ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಆಧುನೀಕರಿಸಲು 50 ಬಿಲಿಯನ್ ಡಾಲರ್ ಅನುದಾನದ ಅಗತ್ಯವಿದೆ ಎಂದು ಸಾರಿಗೆ ಕಾರ್ಯದರ್ಶಿ ಒತ್ತಾಯಿಸಿದ್ದಾರೆ. ವಿಮಾನ ಹಾರಾಟದ ನಿರ್ಬಂಧ ತೆರವುಗೊಂಡಿದ್ದರೂ, ಪ್ರಯಾಣಿಕರ ಸಂಚಾರ ಸಹಜ ಸ್ಥಿತಿಗೆ ಮರಳಲು ಇನ್ನಷ್ಟು ಸಮಯ ಬೇಕಾಗುವ ಸಾಧ್ಯತೆಯಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button