GIT add 2024-1
Laxmi Tai add
Beereshwara 33

ವನ, ವನ್ಯಜೀವಿ ಸಂರಕ್ಷಣೆಗೆ ನಾವೀನ್ಯ ತಂತ್ರಜ್ಞಾನ ಬಳಕೆ ಅನಿವಾರ್ಯ:ಈಶ್ವರ ಖಂಡ್ರೆ

Anvekar 3
Cancer Hospital 2

ಮಾ.21 ಅಂ.ರಾ.ಅರಣ್ಯ ದಿನ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು : ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಗಂಭೀರ ಜಾಗತಿಕ ಸಮಸ್ಯೆಗಳಿಗೆ ಮಾಲಿನ್ಯ ಮತ್ತು ಅರಣ್ಯ ನಾಶ ಕಾರಣವಾಗಿದ್ದು, ಪ್ರಕೃತಿ, ಪರಿಸರ, ವನ, ವನ್ಯಜೀವಿ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಅರಣ್ಯ ದಿನ (ಮಾ.21) ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ ಅವರು, ಈ ಬಾರಿಯ ಅರಣ್ಯ ದಿನದ ಧ್ಯೇಯವಾಕ್ಯ ‘ಅರಣ್ಯ ಮತ್ತು ನಾವೀನ್ಯತೆ: ಉತ್ತಮ ವಿಶ್ವಕ್ಕಾಗಿ ಹೊಸ ಪರಿಹಾರಗಳು’ (Forests and innovation: New Solutions for a better world) ಎಂಬುದಾಗಿದ್ದು, ಪರಿಸರ, ಅರಣ್ಯ ಪ್ರದೇಶ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ಸಮರ್ಥವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನಾವೀನ್ಯಪೂರ್ಣ ವಿಧಾನಗಳ ಅಳವಡಿಕೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರಣ್ಯ ಒತ್ತುವರಿಯ ಪತ್ತೆಯಲ್ಲಿ ಉಪಗ್ರಹ ಚಿತ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಹಿಂದಿನ 5-10 ವರ್ಷಗಳಲ್ಲಿ ಅರಣ್ಯ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಈ ಚಿತ್ರಗಳಿಂದ ತಿಳಿಯಲು ಸಾಧ್ಯವಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಉಪಗ್ರಹ ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರೆ ಹೊಸ ಒತ್ತುವರಿ ತಡೆಯಲು ಸಾಧ್ಯ, ಈ ವಿಧಾನವನ್ನು ಅರಣ್ಯ ಇಲಾಖೆ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದ್ದಾರೆ. 

Emergency Service

ಕಾಡ್ಗಿಚ್ಚಿನಿಂದ ಅರಣ್ಯ ಮತ್ತು ವನ್ಯಜೀವಿಗಳಿಗೆ ಹೆಚ್ಚಿನ ಹಾನಿ ಆಗದಂತೆ ತಡೆಯುವಲ್ಲಿ ಉಪಗ್ರಹ ಚಿತ್ರದ ನೆರವಿನಿಂದ ಮಾಹಿತಿ ನೀಡುವ ದೂರ ಸಂವೇದಿ ತಂತ್ರಜ್ಞಾನ ಮಹತ್ವದ ಪಾತ್ರ ವಹಿಸುತ್ತಿದೆ. ಕಾಡ್ಗಿಚ್ಚಿನ ಮಾಹಿತಿ ಇಸ್ರೋದ ರಾಷ್ಟ್ರೀಯ ದೂರ ಸಂವೇದಿ ಕೇಂದ್ರ (ಎನ್.ಆರ್.ಎಸ್.ಸಿ.)ಗೆ ಬಂದು ಅಲ್ಲಿಂದ ಭಾರತೀಯ ಅರಣ್ಯ ಸರ್ವೇಕ್ಷಣಾ ಇಲಾಖೆ (ಎನ್.ಆರ್.ಎಸ್.ಸಿ.)ಗೆ ಬರುತ್ತದೆ. ಅಲ್ಲಿಂದ ಸಂಬಂಧಿತ ಅರಣ್ಯ ವಲಯದ ಸಿಬ್ಬಂದಿಗೆ ರವಾನೆ ಆಗುತ್ತಿದೆ. ಹೀಗಾಗಿ ತಕ್ಷಣವೇ ಬೆಂಕಿ ನಂದಿಸಲು ಹಾಗೂ ಅರಣ್ಯ ರಕ್ಷಿಸಲು ಸಹಕಾರಿ ಆಗುತ್ತಿದೆ. ನಾವೀನ್ಯಪೂರ್ಣ ವಿಧಾನಗಳ ಬಳಕೆ ಅರಣ್ಯ ಸಂರಕ್ಷಣೆಗೆ ಅತ್ಯಗತ್ಯವಾಗಿದೆ ಎಂದು ತಿಳಿಸಿದ್ದಾರೆ.

ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಪರಿಸರ, ಪ್ರಕೃತಿ ಪ್ರೇಮಿಗಳಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಈಶ್ವರ ಖಂಡ್ರೆ ಅಂತಾರಾಷ್ಟ್ರೀಯ ಅರಣ್ಯ ದಿನದ ಶುಭ ಕೋರಿದ್ದಾರೆ.

Bottom Add3
Bottom Ad 2