Kannada NewsLatestNational

*ಮಹಿಳಾ ಕಾನ್ಸ್ ಟೇಬಲ್ ಗಳಿಂದ ಲಿಂಗ ಬದಲಾವಣೆಗೆ ಅನುಮತಿ ಕೋರಿ ಪತ್ರ; ದಂಗಾದ ಪೊಲೀಸ್ ಅಧಿಕಾರಿಗಳು*

ಪ್ರಗತಿವಾಹಿನಿ ಸುದ್ದಿ; ಲಖನೌ: ಪೊಲೀಸ್ ಕಾನ್ಸ್ ಟೇಬಲ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ಸಿಬ್ಬಂದಿಗಳು ಲಿಂಗ ಬದಲಾವಣೆಗೆ ಅನುಮತಿ ಕೋರಿ ಡಿಜಿಪಿಗೆ ಪತ್ರ ಬರೆದಿದ್ದು, ಈ ಪ್ರಕರಣ ಪೊಲೀಸ್ ಇಲಖೆಗೆ ತಲೆನೋವಾಗಿ ಪರಿಣಮಿಸಿದೆ.

ಉತ್ತರ ಪ್ರದೇಶದ ಗೋರಕ್ ಪುರ ಹಾಗೂ ಗೋಂಡಾದಲ್ಲಿನ ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳು ಲಿಂಗ ಬದಲಾವಣೆ ಪ್ರಕ್ರಿಯೆಗೆ ಒಳಗಾಗಲು ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

Home add -Advt

ಮಹಿಳಾ ಪೊಲೀಸರಾಗಿ ನೇಮಕಗೊಂಡಿರುವ ಈ ಇಬ್ಬರು ಕಾನ್ಸ್ ಟೇಬಲ್ ಗಳಿಗೆ ಲಿಂಗ ಬದಲಾವಣೆಗೆ ಅನುಮತಿ ನೀಡುವುದು ಹೇಗೆ ಎಂಬುದೇ ಪೊಲೀಸ್ ಅಧಿಕಾರಿಗಳ ಮುಂದಿರುವ ಪ್ರಶ್ನೆಯಾಗಿದೆ. ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ನಡೆದ ಮೊದಲ ಪ್ರಕರಣ ಇದಾಗಿದೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ಯುಪಿ ಪೊಲೀಸ್ ಇಲಾಖೆ ಹೆಚ್ಚುವರಿ ಡೈರೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿ, ಇಬ್ಬರು ಮಹಿಳಾ ಕಾನ್ಸ್ ಟೇಬಲ್ ಗಳು ಲಿಂಗ ಬದಲಾವಣೆಗೆ ಅನುಮತಿ ಕೋರಿದ್ದಾರೆ. ಇಬ್ಬರೂ ವಿಭಿನ್ನ ಕಾರಣಗಳನ್ನು ಉಲ್ಲೇಖ ಮಾಡಿದ್ದಾರೆ. ಲಿಂಗ ಪರಿವರ್ತನೆಗೆ ಅನುಮತಿ ನೀಡಲು ಹಲವು ಸಮಸ್ಯೆಗಳಿವೆ. ಮಹಿಳಾ ಕಾನ್ಸ್ ಟೇಬಲ್ ಗಳು ಶಸ್ತ್ರಚಿಕಿತ್ಸೆ ಬಳಿಕ ಪುರುಷ ಕಾನ್ಸ್ ಟೇಬಲ್ ಗಳು ಎಂದು ಪರಿಗಣಿಸಿದರೆ ಅವರಿಗೆ ಅಗತ್ಯವಿರುವ ದೈಹಿಕ ಮಾನದಂಡಗಳನ್ನು ಪರಿಗಣಿಸುವುದು ಹೇಗೆ? ಪುರುಷ ಹಾಗೂ ಮಹಿಳೆಯರ ವಿಭಾಗದಲ್ಲಿ ಎತ್ತರ, ಓಡುವ ಸಾಮರ್ಥ್ಯ ಹಾಗೂ ಭುಜ ಬಲದಂತಹ ಹಲವು ದೈಹಿಕ ಮಾನದಂಡಗಳಿವೆ. ಯುಪಿಯಲ್ಲಿ ಪುರುಷ ಹಾಗೂ ಮಹಿಳೆಯರ ನೇಮಕಾತಿ ವೇಳೆ ಪೊಲೀಸ್ ಇಲಾಖೆಯಲ್ಲಿ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಮಹಿಳಾ ಮಾನದಂಡಗಳ ಅಡಿಯಲ್ಲಿ ಉದ್ಯೋಗ ಪಡೆದ ನಂತರ ಲಿಂಗ ಬದಲಾಯಿಸುವ ಮಹಿಳಾ ಸಿಬ್ಬಂದಿಯು ಮಾನದಂಡಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ತಿಳಿಸಿದ್ದಾರೆ.

ಜನವರಿಯಿಂದ ಈ ಪ್ರಕರಣ ನಡೆಯುತ್ತಿದೆ. ಲಿಂಗ ಬದಲಾವಣೆಗೆ ಅನುಮತಿ ಪಡೆಯಲು ವಿಫಲರಾದ ಬಳಿಕ ಓರ್ವ ಕಾನ್ಸ್ ಟೇಬಲ್ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಡಿಜಿಪಿ ಕಚೇರಿ ಅಲಹಾಬಾದ್ ಕೋರ್ಟ್ ನಲ್ಲಿ ಈ ಸಮಸ್ಯೆಗಳ ಬಗ್ಗೆ ಮುಂದಿಟ್ಟಿದೆ. ನ್ಯಾಯಾಲಯ ಮೆರಿಟ್ ಆಧಾರದಡಿ ಮಹಿಳಾ ಕಾನ್ಸ್ ಟೇಬಲ್ ಗಳ ಕೋರಿಕೆಯನ್ನು ಮತ್ತೊಮ್ಮೆ ಮರುಪರಿಶೀಲನೆ ಮಾಡುವಂತೆ ಪೊಲೀಸ್ ಪ್ರಧಾನ ಕಚೇರಿಗೆ ಹೇಳಿದೆ. ಅಲ್ಲದೇ ಭವಿಷ್ಯದಲ್ಲಿ ಮತ್ತೆ ಬರಬಹುದಾದ ಇಂತಹ ಪ್ರಕರಣಗಳಿಗೆ ಕೆಲವು ಮಾನದಂಡ ಸಿದ್ಧಪಡಿಸುವಂತೆ ಸೂಚಿಸಿದೆ ಎಂದು ತಿಳಿಸಿದ್ದಾರೆ.

Related Articles

Back to top button