ದೇಶದ ಯಾವುದೇ ವಿಚಾರದ ಬಗ್ಗೆ ಯಾವುದೇ ಸಮಯದಲ್ಲಿ ಬಹಿರಂಗ ಚರ್ಚೆಗೆ ಬನ್ನಿ ನಾವು ಸಿದ್ಧ ಎಂದ ಉಗ್ರಪ್ಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆ ನಡೆಸಲು ರಾಹುಲ್ ಗಾಂಧಿಯವರೇ ಸಮಯ, ಜಾಅಗ ನಿಗದಿ ಮಾಡಲಿ ನಮ್ಮ ಸಚಿವರೇ ಚರ್ಚೆಗೆ ಬರುತ್ತಾರೆ ಎಂದು ಕೇಂದ್ರಾ ಗೃಹ ಸಚಿವ ಅಮಿತ್ ಶಾ ಹಾಕಿದ್ದ ಸವಾಲಿಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕ ವಿ.ಎಸ್ ಉಗ್ರಪ್ಪ, ಯಾವುದೇ ಸಮಯದಲ್ಲಿ ಬಹಿರಂಗ ಚರ್ಚೆಗೆ ನಾವು ಸಿದ್ಧ. ವಿಧಾನಸೌಧದ ಮೆಟ್ಟಿಲು ಮೇಲೆಯೇ ಚರ್ಚೆ ಆಗಲಿ ಎಂದು ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮಿತ್​ ಶಾ ಸವಾಲನ್ನು ನಾವು ಸ್ವೀಕರಿಸುತ್ತೇವೆ. ಅಮಿತ್ ಶಾ, ಪ್ರಧಾನಿ ಮೋದಿ ಅಥವಾ ಪ್ರಹ್ಲಾದ್ ಜೋಶಿ ಯಾರೇ ಚರ್ಚೆ ಬರಲಿ, ನಾವು ಸಿದ್ದ. ನಿಮಗೆ ತಾಕತ್ತು ಇದ್ದರೆ ಸಿಎಎ ಮತ್ತು ದೇಶದ ಯಾವುದೇ ವಿಚಾರದ ಬಗ್ಗೆ ಯಾವುದೇ ಸಮಯದಲ್ಲಿ ಬಹಿರಂಗ ಚರ್ಚೆಗೆ ಬನ್ನಿ. ವಿಧಾನಸೌಧದ ಮೆಟ್ಟಿಲುಗಳ ಮೇಲೆಯೇ ಚರ್ಚೆ ಆಗಲಿ ಎಂದು ಮಾಜಿ ಸಂಸದ ವಿ.ಎಸ್​.ಉಗ್ರಪ್ಪ ಸವಾಲು ಹಾಕಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್​ ಶಾ ಬೆಂಗಳೂರು ಮತ್ತು ಹುಬ್ಬಳ್ಳಿಗೆ ಬಂದು ಹೋದರು. ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತಾಡಲಿಲ್ಲ. ಜಿಎಸ್​ಟಿ ಹಣವನ್ನು ನೀಡುವ ವಿಚಾರ ಬಗ್ಗೆ, ಸಂಪುಟ ರಚನೆ ವಿಚಾರದ ಬಗ್ಗೆಯೂ ಮಾತನಾಡಲಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಇತಿಹಾಸ ತಜ್ಞ ರಾಮಚಂದ್ರ ಗುಹಾ ರಾಹುಲ್ ಗಾಂಧಿ ವಿರುದ್ಧ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ರಾಮಚಂದ್ರ ಗುಹಾ ಹೇಳಿದ್ದು ಸತ್ಯ. ರಾಹುಲ್ ಗಾಂಧಿ ಮೋದಿಗೆ ಸರಿಯಲ್ಲ, ಮೋದಿ ಹಾಗೆ ರಾಹುಲ್ ಲಕ್ಷಾಂತರ ರೂ. ಬೆಲೆಬಾಳುವ ಬಟ್ಟೆ ಧರಿಸಲ್ಲ. ಮೋದಿ ಹಾಗೆ ರಾಹುಲ್ ಗಾಂಧಿ ಸುಳ್ಳು ಹೇಳಲ್ಲ. ರಾಹುಲ್ ಗಾಂಧಿ ಒಬ್ಬ ವ್ಯಕ್ತಿಯಲ್ಲ, ಅವರು ಕಾಂಗ್ರೆಸ್ ಶಕ್ತಿ. ರಾಮಚಂದ್ರ ಗುಹಾ ಅವರೇ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಬೇಡಿ ಎಂದು ತಿರುಗೇಟು ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button