*ನಾನು ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತಿದ್ದೇನೆ; ಅಳಲು ತೋಡಿಕೊಂಡ ಮಾಜಿ ಸಚಿವ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪಕ್ಷ ಕೊಟ್ಟ ಟಾಸ್ಕ್ ನಿರ್ವಹಿಸಲು ಹೋಗಿ ಸೋತು ನಿರುದ್ಯೋಗಿಯಾಗಿದ್ದೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ವಿ.ಸೋಮಣ್ಣ, ಚುನಾವಣೆ ಸೋಲಿನ ಬಳಿಕ ನಾನು ಮೊದಲ ಬಾರಿ ಪಕ್ಷದ ಕಚೇರಿಗೆ ಬಂದಿದ್ದೇನೆ. ಪಕ್ಷಕ್ಕಿಂತ ಯಾರೂ ದೊಡ್ದವರಲ್ಲ ಎಂದು ನಂಬಿದವನು ನಾನು. ಗೋವಿಂದರಾಜನಗರದಲ್ಲಿ 480 ಕೋಟಿಗೂ ಅಧಿಕ ಖರ್ಚು ಮಾಡಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಿದ್ದೆ. ಮನೆಯಲ್ಲಿಯೇ ಮಲಗಿದ್ದರೂ ಅಲ್ಲಿಂದ ಗೆಲ್ಲುತ್ತಿದ್ದೆ. ಆದರೆ ಪಕ್ಷ ಕೊಟ್ಟ ಟಾಸ್ಕ್ ಹಿನ್ನೆಲೆಯಲ್ಲಿ ಕ್ಷೇತ್ರ ಬಿಟ್ಟು ಹೋದೆ. ವರುಣಾ ಹಾಗೂ ಚಾಮರಾಜನಗರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಈಗ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಸೋತು ನಿರುದ್ಯೋಗಿಯಾಗಿ ಮನೆಯಲ್ಲಿ ಕುಳಿತಿದ್ದೇನೆ ಎಂದು ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದರು.
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಬಗ್ಗೆ ಮಾತನಾಡಿದ ಅವರು, ನಾನು ಹೈಕಮಾಂಡ್ ಬಳಿ ಏನು ಹೇಲಬೇಕೋ ಅದನ್ನು ಹೇಳಿದ್ದೇನೆ. ನಾನು ಸನ್ಯಾಸಿ ಅಲ್ಲ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ. ಪಕ್ಷ ಕೊಡುವ ಸಂದೇಶದ ಪ್ರಕಾರ ಕೆಲಸ ಮಾಡುತ್ತೇನೆ. ನನಗೆ ಯಾವುದೇ ಡಬಲ್ ಸ್ಟ್ಯಾಂಡರ್ಡ್ ಇಲ್ಲ. ಪಕ್ಷ ಏನು ಹೇಳುತ್ತೆ ನೋಡೋಣ ಎಂದರು.
ಚುನಾವಣೆ ಸೋಲಿನ ಹೊಣೆಯನ್ನು ನಳೀನ್ ಕುಮಾರ್ ಕತೀಲ್ ಹೊತ್ತುಕೊಂಡಿದ್ದಾರೆ. ಅವರು ಶ್ರಮಜೀವಿ. ದೂರದೃಷ್ಟಿ ಇರುವ ವ್ಯಕ್ತಿ. ನಾನು ಕೆಲಸ ಮಾಡಲು ಅವಕಾಶ ಕೇಳಿದ್ದೇನೆ. ನನಗಿಂತ ಬುದ್ಧಿವಂತರು ಇದ್ದರೆ ಅವರಿಗೆ ಅವಕಾಶ ಕೊಡಲಿ. ಆದರೆ ನಾನು ಸುಮ್ಮನೇ ಕೂರುವ ವ್ಯಕ್ತಿ ಅಲ್ಲ, ನಾನು ನಿದ್ರೆ ಮಾಡಲ್ಲ, ಬೇರೆಯವರಿಗೂ ನಿದ್ರಿಸಲು ಬಿಡಲ್ಲ. ಪಕ್ಷ ಕೊಡುವ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ