ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಎರಡು ಮಹತ್ವದ ರೈಲುಗಳಿಗೆ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಹಾಗೂ ಭಾರತ್ ಗೌರವ್ ಕಾಶಿ ರೈಲುಗಳಿಗೆ ಹಸಿರು ನಿಶಾನೆ ತೋರಿದರು.
ಮೊದಲು ಪ್ಲಾಟ್ ಫಾರಂ ನಂ. 7ರಲ್ಲಿ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿದ ಪ್ರಧಾನಿ ಮೋದಿ ಬಳಿಕ ಪ್ಲಾಟ್ ಫಾರ್ಮ್ 8ರಲ್ಲಿ ಭಾರತ್ ಗೌರವ್ ಕಾಶಿ ರೈಲಿಗೆ ಚಾಲನೆ ನೀಡಿದರು.
ವಂದೇ ಭಾರತ್ ರೈಲು ಮೈಸೂರಿನಿಂದ ಚೆನ್ನೈಗೆ ತೆರಳಲಿರುವ ರೈಲಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಸಿದ್ಧಪಡಿಸಲಾಗಿರುವ ಈ ರೈಲು ಶತಾಬ್ದಿ ಎಕ್ಸ್ ಪ್ರೆಸ್ ಗಿಂತಲೂ ವೇಗವಾಗಿ ಚಲಿಸಲಿದೆ. ನೂತನ ರೈಲಿಗೆ ಇಂದು ಬೆಂಗಳೂರು ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಯಿತು.
ಭಾರತ್ ಗೌರವ್ ಕಾಶಿ ರೈಲು ರಾಜ್ಯದ ಜನತೆಗಾಗಿ ಕಾಶಿ ಯಾತ್ರೆಗೆ ತೆರಳಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯಿಂದ ಆರಂಭವಾಗಿರುವ ವಿಶೇಷ ರೈಲು ಇದಾಗಿದೆ. 8 ದಿನಗಳ ಕಾಲ ಪ್ಯಾಕೇಜ್ ಟ್ರಿಪ್ ಇರಲಿದ್ದು, ಕಾಶಿಯಾತ್ರೆಗೆ ತೆರಳುವವರಿಗೆ 5 ಸಾವಿರ ರೂಪಾಯಿ ಸಹಾಯಧನವನ್ನು ಕೂಡ ರಾಜ್ಯ ಸರ್ಕಾರ ಘೋಷಿಸಿದೆ. ಪ್ರವಾಸದಲ್ಲಿ ಆಹಾರ, ವಸತಿ ಹಾಗೂ ಇನ್ನಿತರ ಸೌಕರ್ಯಗಳನ್ನು ಯಾತ್ರಿಕರಿಗೆ ಕಲ್ಪಿಸಲಾಗಿದೆ.
ಇದಕ್ಕೂ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸಂತಶ್ರೇಷ್ಠ ಕನಕದಾಸ ಜಯಂತಿ ಹಿನ್ನೆಲೆಯಲ್ಲಿ ಶಾಸಕರ ಭವನ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಸಿಎಂ ಬಸವರಾಜ್ ಬೊಮ್ಮಾಯಿ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಚಿವೆ ಶಶಿಕಲಾ ಜೊಲ್ಲೆ ಮೊದಲಾದವರು ಉಪಸ್ಥಿತರಿದ್ದರು.
ರಾಜಧಾನಿ ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ಮೋದಿ
https://pragati.taskdun.com/politics/pm-modikarnatakabangalorevisit/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ