Kannada NewsKarnataka NewsLatestPolitics

*ವಾಣಿ ಶಿವರಾಂ, ರೂಪಾ ಲಿಂಗೇಶ್ ಕಾಂಗ್ರೆಸ್ ಸೇರ್ಪಡೆ*

ಕಾಂಗ್ರೆಸ್ ವಕ್ತಾರರಾಗಿ ತೇಜಸ್ವಿನಿ ನೇಮಕ

ಪ್ರಗತಿವಾಹಿನಿ ಸುದ್ದಿ: ವಾಣಿ ಶಿವರಾಂ, ರೂಪಾ ಲಿಂಗೇಶ್, ಗೋಪಿಕೃಷ್ಣ, ಛಲವಾದಿ ಮಹಾಸಭಾದ ಪದಾಧಿಕಾರಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಪಕ್ಷಕ್ಕೆ ಬರ ಮಾಡಿಕೊಂಡ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್, ಕೆ. ಶಿವರಾಂ ಅವರ ಧರ್ಮಪತ್ನಿ ವಾಣಿ ಶಿವರಾಂ ಅವರು ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಜತೆಯಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಬಿಜೆಪಿ ಹಾಗೂ ಬೇರೆ ಪಕ್ಷಕ್ಕೆ ಸೇರುವುದಕ್ಕಿಂತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಕೈಗೆ ಶಕ್ತಿ ತುಂಬಲು ಇಂದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ ಎಂದರು.

ಶಿವರಾಂ ಅವರು ಐಎಎಸ್ ಅಧಿಕಾರಿಯಾಗಿ ಪರಿಚಿತರಾಗಿದ್ದಾರೆ. ಅವರು ಬಿಜೆಪಿ ಸೇರಿ ಸಾಕಷ್ಟು ಹೋರಾಟ ಮಾಡಿಕೊಂಡು ಬಂದಿದ್ದರು. ಅವರು ವಿಧಿವಶರಾಗುವ ಮುನ್ನ ಚಾಮರಾಜನಗರದಿಂದ ನನಗೆ ಕರೆ ಮಾಡಿದ್ದರು. ಈ ಮಧ್ಯೆ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೂ ಚರ್ಚೆ ಮಾಡಿದ್ದರು. ಆದರೆ ಭಗವಂತನ ಆಟ ಅವರು ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ ಕುಟುಂಬಸ್ಥರು ಹಾಗೂ ಅನುಯಾಯಿಗಳು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಛಲವಾದಿ ಮಹಾಸಭಾ ಕೂಡ ಬಹಳ ದೊಡ್ಡ ಸಂಘಟನೆ. ಈ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಿದೆ.

ಕಾಂಗ್ರೆಸ್ ಪಕ್ಷ ಈ ಸಮಾಜದವರನ್ನು ಗುರುತಿಸಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಮೈತ್ರಿ ಒಪ್ಪದೆ ಇಂದು ಅನೇಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಹಳಬರು, ಹೊಸಬರು ಎಂಬ ತಾರತಮ್ಯ ಇಲ್ಲದೇ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನೀವೆಲ್ಲರೂ ಇನ್ನು ಮುಂದೆ ಕಾಂಗ್ರೆಸ್ ಪಕ್ಷದ ಸಕ್ರಿಯ ನಾಯಕರು. ನೀವುಗಳು ನಿಮ್ಮ ಬ್ಲಾಕ್ ಮಟ್ಟದಲ್ಲಿ ಹೆಚ್ಚಿನ ಜನರನ್ನು ಆನ್ ಲೈನ್ ಮೂಲಕ ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ಮಾಡಬೇಕು. ತಳಮಟ್ಟದಲ್ಲಿ ಸಂಘಟನೆ ಮಾಡಿ ಪಕ್ಷಕ್ಕೆ ಶಕ್ತಿ ತುಂಬಬೇಕು. ಪಕ್ಷಕ್ಕೆ ಸೇರುವುದಷ್ಟೇ ಮುಖ್ಯವಲ್ಲ. ಪ್ರತಿ ಹಳ್ಳಿಗಳಲ್ಲಿ ಸಂಘಟನೆ ಮಾಡಿ ಪಕ್ಷಕ್ಕೆ ಆಸ್ತಿಯಾಗಬೇಕು.

ನಾನು ಎರಡು ದಿನ ಕೇರಳ ಪ್ರವಾಸ ಮಾಡಿ ಬಂದಿದ್ದು, ಇದೇ ಏ.16 ರಂದು ಮತ್ತೆ ಕೇರಳ ಪ್ರವಾಸ ಮಾಡಲಿದ್ದೇನೆ. ನಂತರ ನಮ್ಮ ರಾಜ್ಯದ ಚುನಾವಣೆ ಮುಗಿದ ನಂತರ ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೆ ತೆರಳುತ್ತಿದ್ದೇನೆ. ಮುಖ್ಯಮಂತ್ರಿಗಳ ಜತೆಯಲ್ಲಿ ಉತ್ತರ ಪ್ರದೇಶಕ್ಕೆ ತೆರಳಬೇಕು ಎಂದು ಪಕ್ಷ ತೀರ್ಮಾನಿಸಿದೆ.

ಇಂದು ಬೆಳಗ್ಗೆ ಕೇರಳದಲ್ಲಿ ಪ್ರಚಾರ ಮಾಡಿ ಬಂದಿದ್ದೇನೆ. ಕಳೆದ ಬಾರಿ ಯುಡಿಎಫ್ ಕೇರಳದಲ್ಲಿ 19 ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿ 20ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ. ಮುಖ್ಯಮಂತ್ರಿಗಳು ಕೂಡ ಬಿಜೆಪಿಗೆ ಕೇರಳದಲ್ಲಿ ಒಂದು ಸ್ಥಾನ ಗೆಲ್ಲಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಎಸ್ ಪಿ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, ಯಾವುದೇ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳ ಬಗ್ಗೆ ಭಿನ್ನಾಭಿಪ್ರಾಯವಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ.

ಈ ಮಧ್ಯೆ ಚುನಾವಣಾ ಆಯೋಗದಿಂದ ಕರ್ನಾಟಕಕ್ಕೆ ಬರ ಪರಿಹಾರ ವಿಳಂಬವಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಪ್ಪಿಕೊಂಡಿದ್ದಾರೆ. ಆದರೆ ನಮ್ಮ ರಾಜ್ಯ ಸರ್ಕಾರ ನಾಲ್ಕೈದು ತಿಂಗಳ ಹಿಂದೆಯೇ ಬರ ಪರಿಹಾರ ನೀಡುವಂತೆ ಮನವಿ ಮಾಡಿತ್ತು. ಪ್ರಧಾನಮಂತ್ರಿ, ಗೃಹ ಸಚಿವರನ್ನು ಮುಖ್ಯಮಂತ್ರಿಗಳು ಭೇಟಿ ಮಾಡಿ ಮನವಿ ಮಾಡಿದ್ದರು. ಕೇಂದ್ರದಿಂದ ಬರ ಅಧ್ಯಯನ ತಂಡ ಕೂಡ ಬಂದಿತ್ತು, ಅದನ್ನು ಅವರು ಮರೆತಿದ್ದಾರೆ.

ಇನ್ನು ಬರ ಪರಿಹಾರ ವಿಚಾರವಾಗಿ ಕರ್ನಾಟಕ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಖಂಡಿಸಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ಬರ ಪರಿಹಾರ ವಿತರಣೆ ವಿಚಾರದಲ್ಲಿ ಮಧ್ಯಪ್ರವೇಶ ಮಾಡಬಾರದು ಎಂದು ನಮ್ಮ ಪಕ್ಷದ ವತಿಯಿಂದ ಕೂಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದು, ನಮ್ಮ ರಾಜ್ಯಕ್ಕೆ ಬರಬೇಕಾದ ಅನುದಾನ, ಪರಿಹಾರ ಬಾಕಿಯಿದೆ ಎಂದು ತಿಳಿಸಿದ್ದೇವೆ.

ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಸಮರ್ಪಕವಾಗಿ ನೀರಿನ ಸಮಸ್ಯೆ ನಿಭಾಯಿಸಲಾಗುತ್ತಿದೆ.

ಕಾಂಗ್ರೆಸ್ ವಕ್ತಾರರಾಗಿ ತೇಜಸ್ವಿನಿ ಗೌಡ

ವಿಧಾನ ಪರಿಷತ್ ಮಾಜಿ ಸದಸ್ಯೆ ತೇಜಸ್ವಿನಿ ಗೌಡ ಅವರು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಅವರು ಕಾಂಗ್ರೆಸ್ ಮೂಲದವರು. ಕಾಂಗ್ರೆಸ್ ಪಕ್ಷದಿಂದ ಮಾತ್ರ ಈ ದೇಶಕ್ಕೆ ಒಳ್ಳೆಯದಾಗಲಿದೆ ಎಂದು ಪಕ್ಷಕ್ಕೆ ಬಂದಿದ್ದಾರೆ. ತೇಜಸ್ವಿನಿ ಗೌಡ ಅವರು ನಮ್ಮ ಸಂಸದರಾಗಿದ್ದರು. ಪಕ್ಷದ ಅಧ್ಯಕ್ಷನಾಗಿ ನಾನು ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಇಂದಿನಿಂದ ತೇಜಸ್ವಿನಿ ಗೌಡ ಅವರನ್ನು ಪಕ್ಷದ ಅಧಿಕೃತ ವಕ್ತಾರರಾಗಿದ್ದಾರೆ.

ಪಕ್ಷ ಸೇರ್ಪಡೆಯಾದ ಪ್ರಮುಖರು:

ವಾಣಿ ಶಿವರಾಂ ಅವರ ಜತೆಗೆ, ರಾಜರಾಜೇಶ್ವರಿ ನಗರ ಕ್ಷೇತ್ರದ ಮಾಜಿ ಕಾರ್ಪೊರೇಟರ್ ರೂಪಾ ಲಿಂಗೇಶ್, ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಕೆ ರವಿಚಂದ್ರ, ಮಡಿವಾಳ ಸಮಾಜದ ಪ್ರಮುಖ ಮುಖಂಡರಾದ ಗೋಪಿಕೃಷ್ಣ ಅವರು, ಸರ್ವಜ್ಞನಗರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮೊಹಮದ್ ಮುಸ್ತಾಫ ಹಾಗೂ ನೂರಾರು ಕಾರ್ಯಕರ್ತರು, ಆನೇಕಲ್ ನಿಂದ ಬಿಜೆಪಿ ನಾಯಕರಾದ ಮಂಜು, ವಿಜಯ್ ಕುಮಾರ್, ಚಾಮರಾಜನಗರದ ಛಲವಾದಿ ಮಹಾಸಭಾದ ಉಪಾಧ್ಯಕ್ಷರಾದ ಬಸವರಾಜ್, ಬಿಡದಿಯಲ್ಲಿ ಜೆಡಿಎಸ್ ಪಕ್ಷದಿಂದ ಕೃಷ್ಣಪ್ಪ, ಹೆಚ್.ಡಿ ಕೋಟೆಯಿಂದ ಪರಮಶಿವಮೂರ್ತಿ, ಛಲವಾದಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಎಸ್.ಕೆ ಶಿವಕುಮಾರ್, ರೈತಸಂಘದಿಂದ ವೀರಭದ್ರಸ್ವಾಮಿ, ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಸಿ.ಎಸ್ ಪ್ರಕಾಶ್ ಅವರು ಇಂದು ಕಾಂಗ್ರೆಸ್ ಪಕ್ಷ ಸೇರಿದರು.

Related Articles

Back to top button