Kannada NewsKarnataka NewsLatest

*ICC T20 ಅಂಡರ್-19 ವಿಶ್ವಕಪ್‌ ನಲ್ಲಿ ವನಿತೆಯರ್ ಕಮಾಲ್*

ಪ್ರಗತಿವಾಹಿನಿ ಸುದ್ದಿ: ಕಳೆದ ಬಾರಿಯೂ ಭಾರತದ T20 ಅಂಡರ್-19 ವನಿತೆಯರು ಚಾಂಪಿಯನ್ ಆಗಿದ್ದರು. ಈಗ ಮತ್ತೆ ಕಪ್ ತಮ್ಮದಾಗಿಸಿಕೊಂಡಿದ್ದಾರೆ.‌ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾದ ಯುವತಿಯರು ಭರ್ಜರಿ ಗೆಲುವು ಪಡೆದು ಮತ್ತೊಮ್ಮೆ ವರ್ಲ್ಡ್‌ ಕಪ್‌ಗೆ ಮುತ್ತಿಕ್ಕಿದ್ದಾರೆ. 

ಇನ್ನು ಭಾರತದ ವನಿತೆಯರು ಈ ಟೂರ್ನಿಯ ಆರಂಭದಿಂದಲೂ ಸೋಲನ್ನೇ ನೋಡಲಿಲ್ಲ ಎನ್ನುವುದು ವಿಶೇಷ. ಕೌಲಾಲಂಪುರ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದುಕೊಂಡ ದಕ್ಷಿಣ ಆಫ್ರಿಕಾದ T20 ಅಂಡರ್-19 ತಂಡದ ನಾಯಕಿ ಕೈಲಾ ರೇನೆಕೆ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡರು. ಅದರಂತೆ ಭಾರತೀಯ ವನಿತೆಯರು ಫೀಲ್ಡಿಂಗ್‌ಗೆ ಆಗಮಿಸಿದರು. ಆಫ್ರಿಕಾ ನಿಗದಿತ 20 ಓವರ್‌ಗಳಲ್ಲಿ ಆಲೌಟ್ ಆಗಿ ಕೇವಲ 82 ರನ್‌ಗಳನ್ನು ಮಾತ್ರ ಗಳಿಸಿತು.

ಭಾರತದ ಪರ ಬೌಲರ್ಸ್ ಮಿಂಚಿನ ಬೌಲಿಂಗ್ ಮಾಡಿ ಆಫ್ರಿಕಾ ತಂಡವನ್ನು ಎಡೆಮುರಿ ಕಟ್ಟಿದ್ದಾರೆ. ತಂಡದ ಪರ ಗೊಂಗಡಿ ತ್ರಿಷಾ 3 ವಿಕೆಟ್ ಪಡೆದರೆ, ಆಯುಷಿ ಶುಕ್ಲಾ, ಪರುಣಿಕಾ ಸಿಸೋಡಿಯಾ, ವೈಷ್ಣವಿ ಶರ್ಮಾ ತಲಾ ಎರಡು ವಿಕೆಟ್ ಪಡೆದು ತಂಡದ ಗೆಲುವಿಗೆ ಕಾರಣರಾಗಿದ್ದಾರೆ.

ಇನ್ನು 83 ರನ್‌ಗಳ ಸುಲಭ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ ಯುವತಿಯರು ಕೇವಲ 1 ವಿಕೆಟ್ ಕಳೆದುಕೊಂಡು ಜಯಭೇರಿ ಭಾರಿಸಿದರು. ಬೌಲಿಂಗ್ ನಲ್ಲೂ ಮಿಂಚಿದ್ದ ಗೊಂಗಡಿ ತ್ರಿಷಾ ಬ್ಯಾಟಿಂಗ್‌ನಲ್ಲಿ 8 ಫೋರ್ ಸಮೇತ 44 ರನ್ ಸಿಡಿಸಿದರು.

ಸಾನಿಕಾ ಚಲೆ ಕೂಡ 26 ರನ್ ಗಳಿಸಿ ತಂಡದ ಗೆಲುವಿಗೆ ತಮ್ಮ ಕಾಣಿಕೆ ನೀಡಿದರು. 11.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 84 ರನ್ ಗಳಿಸುವ ಮೂಲಕ ಭಾರತ ಗೆಲುವಿನ ನಗೆ ಬೀರಿತು. ಈ ಟೂರ್ನಿಯಲ್ಲಿ 9 ಪಂದ್ಯಗಳಲ್ಲಿ ಯಾವುದನ್ನೂ ಸೋಲದೇ ವನಿತೆಯರು ಗೆದ್ದಿದ್ದಾರೆ. ಇನ್ನು ಗೊಂಗಡಿ ತ್ರಿಷಾ ಅವರು ಪ್ಲೇಯರ್ ಆಫ್ ದೀ ಮ್ಯಾಚ್ ಹಾಗೂ ಪ್ಲೇಯ‌ರ್ ಆಫ್ ದೀ ಸೀರೀಸ್ ಪ್ರಶಸ್ತಿ ಪಡೆದುಕೊಂಡರು.

ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಗಣ್ಯರು ಅಭಿನಂದನೆ ತಿಳಿಸಿದ್ದಾರೆ.

‘ನಮ್ಮ ನಾರಿ ಶಕ್ತಿಯ ಬಗ್ಗೆ ಅಪಾರ ಹೆಮ್ಮೆ! ಐಸಿಸಿ 19 ವರ್ಷದೊಳಗಿನವರ ಟಿ20 ವಿಶ್ವಕಪ್ 2025ರಲ್ಲಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದಕ್ಕಾಗಿ ಭಾರತೀಯ ತಂಡಕ್ಕೆ ಅಭಿನಂದನೆಗಳು. ಈ ಗೆಲುವು ನಮ್ಮ ತಂಡದ ಅತ್ಯುತ್ತಮ ಸಾಂಘಿಕ ನಿರ್ವಹಣೆ, ದೃಢಸಂಕಲ್ಪ ಮತ್ತು ಧೈರ್ಯದ ಫಲಿತಾಂಶವಾಗಿದೆ. ಇದು ಮುಂಬರುವ ಹಲವಾರು ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ. ತಂಡದ ಮುಂದಿನ ಪ್ರಯತ್ನಗಳಿಗಾಗಿ ನನ್ನ ಶುಭಾಶಯಗಳು’ ಎಂದು ಪ್ರಧಾನಿ ನರೇಂದ್ರ ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ನಿಜವಾದ ಚಾಂಪಿಯನ್ಸ್!! ಭಾರತದ 19 ವರ್ಷದೊಳಗಿನವರ ಮಹಿಳಾ ಕ್ರಿಕೆಟ್ ತಂಡದ ಉತ್ತಮ ಪ್ರದರ್ಶನ ಮತ್ತು ಟಿ20 ವಿಶ್ವಕಪ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಕ್ಕೆ ಅಭಿನಂದನೆಗಳು. ಟೂರ್ನಿಯುದ್ದಕ್ಕೂ ಭಾರತ ತಂಡದ ಅಜೇಯ ಓಟ, ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನಲ್ಲಿ ಪರಾಕಾಷ್ಠೆಯಾಯಿತು. ತಂಡದ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಸುತ್ತೇನೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘ಭಾರತಕ್ಕೆ ಐತಿಹಾಸಿಕ ಜಯ! ನಮ್ಮ ಮಹಿಳಾ ತಂಡದ ಆಟಗಾರ್ತಿಯರು ಟಿ20 ವಿಶ್ವಕಪ್ ಅನ್ನು ಸಂಪೂರ್ಣ ನಿರ್ಣಯ ಮತ್ತು ಅಸಾಧಾರಣ ಪ್ರತಿಭೆಯೊಂದಿಗೆ ಗೆದ್ದಿದ್ದಾರೆ. ಈ ಗೆಲುವು ಅವರ ಕಠಿಣ ಪರಿಶ್ರಮ ಮತ್ತು ಹೋರಾಟದ ಮನೋಭಾವಕ್ಕೆ ಸಾಕ್ಷಿಯಾಗಿದೆ. ಕರ್ನಾಟಕದ ನಿಕಿ ಪ್ರಸಾದ್ ಅವರು ನಾಯಕಿಯಾಗಿ ತಂಡವನ್ನು ಮುನ್ನಡೆಸುತ್ತಿರುವುದನ್ನು ಕಂಡು ಹೆಮ್ಮೆಯಾಗಿದೆ. ಅವರ ನಾಯಕತ್ವ ಮತ್ತು ಸಮರ್ಪಣೆ ನಿಜವಾಗಿಯೂ ಸ್ಫೂರ್ತಿದಾಯಕವಾಗಿದೆ. ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button