Film & Entertainment

*ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡಲು ಸಿದ್ಧವಾಗಿದೆ “ವನ್ಯಾ”*

ಬಡಿಗೇರ್ ದೇವೇಂದ್ರ ನಿರ್ದೇಶನದ ಮತ್ತೊಂದು ಚಿತ್ರ

ಪ್ರಗತಿವಾಹಿನಿ ಸುದ್ದಿ: ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಬಡಿಗೇರ್ ದೇವೇಂದ್ರ ತಮ್ಮ ಮೂರನೇ ಸಿನಿಮಾ ಚಿತ್ರೀಕರಣ ಪೂರ್ಣಗೊಳಿಸಿದ್ದು, ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರದ ಶೀರ್ಷಿಕೆ ಪೋಸ್ಟರ್ ಬಿಡುಗಡೆಗೊಳಿಸಿದ್ದಾರೆ.

’ರುದ್ರಿ’, ’ಇನ್’ ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿರುವ ನಿರ್ದೇಶಕ ಬಡಿಗೇರ್ ದೇವೇಂದ್ರ, ಇದೀಗ ಅರಣ್ಯ ಸಂರಕ್ಷಣೆಗಾಗಿ ಕಾಡಿನ ಹಾಡಿಯಲ್ಲಿರುವ ಕುಟುಂಬವೊಂದು ಪಡುವ ಪರಿಪಾಡು, ಎದಿರಿಸುವ ಸಂಕಷ್ಟ, ಹೋರಾಟದ ಬದುಕಿನ ಕಥಾ ಹಂದರವುಳ್ಳ ಚಿತ್ರವನ್ನು ತೆರೆಯ ಮೇಲೆ ತರಲು ಮುಂದಾಗಿದ್ದಾರೆ. ಚಿತ್ರಕ್ಕೆ ‘ವನ್ಯಾ’ ಎಂದು ಶೀರ್ಷಿಕೆ ಇಡಲಾಗಿದ್ದು, ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಿತ್ರದ ಟೈಟಲ್ ಬಿಡುಗಡೆಗೊಳಿಸಿದರು.

Home add -Advt

ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರದ ಶೀರ್ಷಿಕೆ ಪೋಸ್ಟರ್ ಅನಾವರಣಗೊಳಿಸಿದ್ದಕ್ಕೆ ‘ವನ್ಯಾ’ ತಂಡ ಸಂತಸಗೊಂಡಿದೆ. ಇದು ಸ್ಯಾಂಡಲ್‌ವುಡ್‌ನಲ್ಲಿ ತಮ್ಮ ಪ್ರಯಾಣದ ಮೊದಲ ಗೆಲುವು ಎಂದು ಖುಷಿ ಹಂಚಿಕೊಂಡಿದೆ.

ಕೊಪ್ಪಳದ ಬಡಿಗೇರ್ ದೇವೇಂದ್ರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವನ್ಯ’ ಚಿತ್ರವನ್ನು ಐಡಿಯಾ ವರ್ಕ್ಸ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಪಲ್ಲವಿ ಅನಂತ್ ನಿರ್ಮಿಸುತ್ತಿದ್ದಾರೆ.

2010 ರಲ್ಲಿ ಇಂಗ್ಲಿಷ್ ನಿಯತಕಾಲಿಕೆಯೊಂದರಲ್ಲಿ ಪ್ರಕಟವಾದ ಸುದ್ದಿ ಲೇಖನ ಚಿತ್ರದ ಸ್ಕ್ರಿಪ್ಟ್ ಗೆ ಸ್ಫೂರ್ತಿಯಾಗಿದೆ. ನನ್ನ ಸ್ನೇಹಿತ ಲತನ್ ನನಗೆ ಸ್ಕ್ರಿಪ್ಟ್ ಕೆಲಸವನ್ನು ಪೂರ್ಣಗೊಳಿಸಲು ಸಹಾಯ ಮಾಡಿದರು. ಈ ಚಿತ್ರವು ಮರದ ಕಳ್ಳಸಾಗಣೆದಾರರು ಮತ್ತು ದುರಾಸೆಯ ರಾಜಕಾರಣಿಗಳಿಂದ ಕಾಡನ್ನು ರಕ್ಷಿಸಲು ಶ್ರಮಿಸುವ ತಂದೆ ಮತ್ತು ಮಗಳ ಕುರಿತ ಕಥೆಯಾಗಿದೆ ಎಂದು ನಿರ್ದೇಶಕ ಬಡಿಗೇರ್ ದೇವೇಂದ್ರ ತಿಳಿಸಿದ್ದಾರೆ.

‘ವನ್ಯಾ’ ಚಿತ್ರ ಪ್ರೇಕ್ಷಕರ ಮನಮುಟ್ಟುವುದರಲ್ಲಿ ಅನುಮಾನವಿಲ್ಲ. ಈ ಚಿತ್ರವನ್ನು ಹಲವು ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶಿಸಬೇಕೆಂಬುದು ನಮ್ಮ ಗುರಿ. ಕಾರಣ ಚಿತ್ರದ ಕಥಾ ಹಂದರ ಸಾರ್ವತ್ರಿಕ ಆಕರ್ಷಣೆಯ ವಸ್ತು-ವಿಷಯವನ್ನು ಹೊಂದಿದೆ. ಚಿತ್ರದ ಇನ್ನೊಂದು ವಿಶೇಷತೆಯೆಂದರೆ ಇದನ್ನು ಸಿಂಕ್ ಸೌಂಡ್‌ನಲ್ಲಿ ಚಿತ್ರೀಕರಿಸಲಾಗಿರುವುದು ಎಂದು ಹೇಳಿದ್ದಾರೆ.

ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ವಿಜನಾಥ್ ಬಿರಾದಾರ್ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಮೇಘನಾ ಬೆಳವಾಡಿ ಅವರ ಮಗಳ ಪಾತ್ರದಲ್ಲಿ ಹಾಗೂ ಮೊಮ್ಮಗಳ ಪಾತ್ರದಲ್ಲಿ ಬಾಲನಟಿಯಾಗಿ ಧಾತ್ರಿ ಭಟ್ ಅಭಿನಯಿಸಿದ್ದಾರೆ. ಬಾಲನಟಿ ಧಾತ್ರಿಗೆ ಇದು ಮೊದಲ ಸಿನಿಮಾ. ಆದರೂ ಕ್ಯಾಮರಾ ಮುಂದೆ ಯಾವುದೇ ಭಯವಿಲ್ಲದೇ, ಹಿರಿಯ ಕಲಾವಿದರೊಂದಿಗೆ ಅದ್ಭುತವಾಗಿ ಅಭಿನಯಿಸಿದ್ದಾಳೆ. ಚಿತ್ರದಲ್ಲಿ ಪ್ರಕಾಶ್ ಬೆಳವಾಡಿ, ಶ್ರೀಕಾಂತ್, ಯಶವಂತ್ ಮತ್ತು ಇತರರು ಅಭಿನಯಿಸಿದ್ದಾರೆ.

Related Articles

Back to top button