ಸಂಗಮೇಶ ಆರ್. ನಿರಾಣಿ
ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ
ವೀರಮಲ್ಲ ಪ್ರಕಾಶ ಜಲಶಕ್ತಿಯ ಮಹಾಮಾಂತ್ರಿಕ. ನಮ್ಮ ಹೈದ್ರಾಬಾದ ಕರ್ನಾಟಕದ ಹವಾಗುಣವನ್ನು ಹೋಲುವ ತೆಲಂಗಾಣದದಂತಹ ರಾಜ್ಯವನ್ನು ಬರದ ಛಾಯೆಯಿಂದ ಪಾರು ಮಾಡಿದ ಭಗೀರಥ. ಚಾಣಾಕ್ಯ ಮೌರ್ಯ ಸಾಮ್ರಾಜ್ಯ ಕಟ್ಟಿದಂತೆ, ವಿದ್ಯಾರಣ್ಯರು ಹಕ್ಕ-ಬುಕ್ಕರಿಗೆ ಪ್ರೇರಣೆ ನೀಡಿ ವಿಜಯನಗರ ಸಾಮ್ರಾಜ್ಯ ನಿರ್ಮಿಸಿದಂತೆ, ತೆಲಂಗಾಣ ನಿರ್ಮಾಣದ ಹಿಂದಿನ ಅದ್ಭುತ ಶಕ್ತಿ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ರಾವ್ ಹಿಂದಿನ ಪ್ರೇರಕ ಶಕ್ತಿ. ವೀರಮಲ್ಲ ಪ್ರಕಾಶ ಅವರನ್ನು ಜನ ಪ್ರೀತಿಯಿಂದ ’ತೆಲಂಗಾಣ ಪ್ರಕಾಶ’ ಗುರುತಿಸುತ್ತಾರೆ. ನಿಜಕ್ಕೂ ತೆಲಂಗಾಣ ಪ್ರಕಾಶಿಸುತ್ತಿರುವುದಕ್ಕೆ ಪ್ರಕಾಶ ಅವರದೂ ಅವಿರತ ಶ್ರಮವಿದೆ.
ಆಂದ್ರದಿಂದ ತೆಲಂಗಾಣ ಪಡೆದ ಹಟಗಾರ
ಮೊದಲಿನಿಂದಲೂ ವೃತ್ತಿಯಲ್ಲಿ ವಕೀಲನಾಗಿದ್ದರೂ, ಉತ್ತಮ ಬರಹಗಾರರಾದ ಇವರು ತೆಲಂಗಾಣ ಎಂಬ ಹೊಸ ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ದಿ ಕ್ರಾಂತಿಯ ಹರಿಕಾರರೆನಿಸಿದ್ದಾರೆ. ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟದ ಮುಂಚೂಣಿಯಲ್ಲಿದ್ದ ಕೆಲವೇ-ಕೆಲವು ದಿಗ್ಗಜರಲ್ಲಿ ವೀರಮಲ್ಲ ಪ್ರಕಾಶ ಮುಂಚೂಣಿಯಲ್ಲಿದ್ದವರು. ತೆಲಂಗಾಣ ರಾಷ್ಟ್ರ ಸಮೀತಿ ಎಂಬ ಪ್ರಾದೇಶಿಕ ಪಕ್ಷದ ಸಂಸ್ಥಾಪಕರಲ್ಲಿ ಇವರೂ ಕೂಡ ಒಬ್ಬರಾಗಿದ್ದಾರೆ.
ಅತ್ಯುತ್ತಮ ವಾಗ್ಮಿಗಳಾದ ಇವರು ಟಿ.ಆರ್.ಎಸ್. ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯಾಗಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿಗಳಾದ ಕೆ. ಚಂದ್ರಶೇಖರರಾವ್‌ರವರಿಗೆ ನೀತಿ ಮತ್ತು ಯೋಜನೆಗಳನ್ನು ರೂಪಿಸಲು ಸಲಹೆಗಾರರಾಗಿ ಹಾಗೂ ತೆಲಂಗಾಣ ಜಲ ಸಂಪನ್ಮೂಲ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನೀರಾವರಿ ಕುರಿತು ಯೋಜನೆ ಮತ್ತು ನೀತಿಗಳನ್ನು ರೂಪಿಸುವಲ್ಲಿ ತುಂಬಾ ಆಸಕ್ತಿ ಇರುವ ಇವರು ನಮ್ಮ ದೇಶದ ಪ್ರಮುಖ ಜಲತಜ್ಞರಲ್ಲಿ ಒಬ್ಬರಾಗಿದ್ದಾರೆ. ಭಾರತದ ಅತಿ ದೊಡ್ಡ ಲಿಫ್ಟ್ ಇರಿಗೇಶನ್ ಯೋಜನೆಯಾದ ಕಾಲೇಶ್ವರಂ ಲಿಫ್ಟ್ ಇರಿಗೇಶನ್ ಯೋಜನೆ ಮತ್ತು ತೆಲಂಗಾಣ ರಾಜ್ಯದ ಶೇ. ೭೦ರಷ್ಟು ಪ್ರದೇಶಕ್ಕೆ ಶುದ್ದ ಕುಡಿಯುವ ನೀರು ಪೂರೈಸುವ ಮಹತ್ವಾಕಾಂಕ್ಷೆಯ ಮಿಶನ್ ಭಗೀರಥ ಯೋಜನೆಯ ಹಿಂದಿನ ಅದ್ಭುತ ಶಕ್ತಿಯಾಗಿದ್ದಾರೆ.
ತೆಲಂಗಾಣ ರಾಜ್ಯದ ನೆಲ ಮತ್ತು ಜಲ ಅಭಿವೃದ್ದಿ ಮಂಡಳಿ ’ವಾಲಂತರಿ’ ಮುಖ್ಯಸ್ಥರಾದ ನಂತರ ನೆಲ ಮತ್ತು ಜಲ ಸಮೃದ್ದಿ ಹಾಗೂ ಸಂರಕ್ಷಣೆಗಾಗಿ ರಾಜ್ಯದ ಉದ್ದಗಲಕ್ಕೂ ವಿನೂತನವಾದ ಆಂದೋಲನ ಮತ್ತು ವಿಶಿಷ್ಟವಾದ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಗಮನ ಸೆಳೆದಿದ್ದಾರೆ. ಇತ್ತಿಚ್ಚಿಗೆ ಹೈದ್ರಾಬಾದ್‌ನಲ್ಲಿ ನಡೆದ ದಕ್ಷೀಣ ಭಾರತ ನದಿ ಪರಿವಾರಗಳ ಸಮಾವೇಶ ’ವಾಟರ್‌ಮ್ಯಾನ್ ಆಪ್ ಇಂಡಿಯಾ’ ಖ್ಯಾತಿಯ ರಾಜೇಂದ್ರಸಿಂಗ್‌ರವರ ನೇತೃತ್ವದಲ್ಲಿ ಪ್ರಕಾಶ್‌ರವರು ಆಯೋಜಿಸಿದ್ದರು. ಉತ್ತಮ ಬರಹಗಾರರಾದ ಇವರು ತೆಲಂಗಾಣ ಪ್ರತ್ಯೇಕ ರಾಜ್ಯ ಹೋರಾಟ ಹಾಗೂ ನೀರಾವರಿ ಕುರಿತು ಹಲವಾರು ಲೇಖನ ಹಾಗೂ ಪುಸ್ತಕಗಳನ್ನು ಬರೆದಿದ್ದಾರೆ.
ವೀರಮಲ್ಲ ಪ್ರಕಾಶರವರು ೧೫ ಜನೇವರಿ ೧೯೫೮ರಂದು ತೆಲಂಗಾಣದ ವಾರಂಗಲ್ ಜಿಲ್ಲೆಯ ವೆಂಕಟಾಪೂರ ಬಳಿಯ ಪಾಲಂಪೇಟ್ ಎಂಬ ಗ್ರಾಮದಲ್ಲಿ ಜನಿಸಿದ್ದಾರೆ. ಇವರ ತಂದೆ ರಾಜಾ ನರಸಿಂಗರಾವ್ ಮತ್ತು ತಾಯಿ ಕೌಸಲ್ಯ. ಆಂದ್ರ ಪ್ರದೇಶ ಹೈಕೋರ್ಟ್ ವಕೀಲರಾಗಿ ವೃತ್ತಿ ಆರಂಭಿಸಿದ ಇವರಿಗೆ ಬಾಲ್ಯದಿಂದಲೂ ಇವರಿಗೆ ಸಮಾಜ ಕಟ್ಟುವ ತುಡಿತ, ಅನ್ಯಾಯವನ್ನು ವಿರೋಧಿಸುವ ಹಾಗೂ ಮೆಟ್ಟಿನಿಲ್ಲುವ ಮನೋಭಾವನೆ ಇತ್ತು.
ಅದ್ದರಿಂದಲೇ ಅವರು ತೆಲಂಗಾಣ ರಾಜ್ಯ ಉದಯದಂತಹ ಬಹುದೊಡ್ಡ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಮತ್ತು ಅತ್ಯಂತ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿ ಯಶಸ್ಸು ಸಾಧಿಸುವಲ್ಲಿ ಅನುಕೂಲವಾಯಿತು.
ಪ್ರೋ. ಜಯಶಂಕರ ಹೊರತಂದರು ತೆಲಂಗಾಣದ ’ಪ್ರಕಾಶ’
ಸದಾ ಹೋರಾಟದ ಮನೋಭಾವ ಹೊಂದಿದ ಹಾಗೂ ದೇಹಿ ಎಂದು ಬಂದ ಅಸಹಾಯಕರಿಗೆ ಸದಾ ಸಹಾಯಕ್ಕೆ ನಿಲ್ಲುತ್ತಿದ್ದರು. ೧೯೫೨ರಿಂದಲೂ ಪ್ರಾದೇಶಿಕ ಅಸಮತೋಲನ ಹಾಗೂ ನದಿ ನೀರು ಹಂಚಿಕೆಯಲ್ಲಿ ಆಗುತ್ತಿರುವ ತಾರತಮ್ಯದಿಂದಾಗಿ ತೆಲಂಗಾಣ ಭಾಗಕ್ಕೆ ಆಗುತ್ತಿದ್ದ ಅನ್ಯಾಯಕ್ಕೆ ಸೆಡ್ಡು ಹೊಡೆದು ನಿಂತು ಪ್ರತ್ಯೇಕ ತೆಲಂಗಾಣ ಹೋರಾಟದ ದಾರಿ ತುಳಿದಿದ್ದ ಪ್ರೊಪೇಸರ್ ಜಯಶಂಕರ್‌ರವರು ಪ್ರಕಾಶರವರನ್ನು ಗುರ್ತಿಸಿ ತೆಲಂಗಾಣ ಹೋರಾಟಕ್ಕೆ ಕರೆ ತಂದರು.
ತೆಲಂಗಾಣ ಸಮಗ್ರ ಅಭಿವೃದ್ದಿಯ ಜೊತೆಗೆ ನೀರಾವರಿ ಕ್ರಾಂತಿ ಮಾಡಿ ಬರದ ನಾಡನ್ನು ಬೆಳಕಾಗಿಸಬೇಕೆಂದು ಅಭಿವೃದ್ದಿ ಜಪ ಮಾಡುತ್ತಿದ್ದ ವೀರಮಲ್ಲ ಪ್ರಕಾಶ ಆಂದೋಲನದಲ್ಲಿ ತೊಡಗಿಕೊಂಡ ನಂತರ ಇಡೀ ಹೋರಾಟದ ಸ್ವರೂಪವೇ ಬದಲಾಯಿತು. ನಂತರ ಇಡೀ ಹೋರಾಟಕ್ಕೆ ರಾಜಕೀಯ ಇಚ್ಚಾಶಕ್ತಿ ಹಾಗೂ ಜನಾಕರ್ಷಣೆಯ ಕೊರತೆ ಎದ್ದು ಕಾಣುತ್ತಿದ್ದನ್ನು ಅರಿತುಕೊಂಡ ಪ್ರಕಾಶರವರು ಇಂದಿನ ತೆಲಂಗಾಣದ ಮುಖ್ಯಮಂತ್ರಿಗಳಾದ ಕೆ. ಚಂದ್ರಶೇಖರರಾವ್‌ರನ್ನು ಮನವೊಲಿಸಿ ಕರೆತಂದು ಹೋರಾಟದ ನೇತೃತ್ವ ನೀಡಿದರು. ಈ ಎಲ್ಲ ಮಹನೀಯರ ಹೋರಾಟದ ಫಲವಾಗಿ ೨ ಜೂನ್ ೨೦೧೪ರಂದು ತೆಲಂಗಾಣ ರಾಜ್ಯವು ಭಾರತದ ೨೯ನೇ ರಾಜ್ಯವಾಗಿ ಉದಯವಾಯಿತು.
ಬಂಗಾರು ತೆಲಂಗಾಣದ ಕನಸು ನನಸು
ತೆಲಂಗಾಣ ರಾಜ್ಯ ಉದಯವಾದಾಗ ಪ್ರಥಮ ಚುನಾವಣೆಯಲ್ಲಿ ಟಿ.ಆರ್.ಎಸ್ ಪಕ್ಷ ಮತದಾರರಿಗೆ ಪ್ರಣಾಳಿಕೆಯಲ್ಲಿ ಬರೆದುಕೊಟ್ಟ ಬಂಗಾರು ತೆಲಂಗಾಣ ನಿರ್ಮಾಣದ ಕನಸಿಗೆ ಮನಸೋತು ಮತದಾರ ಟಿ.ಆರ್.ಎಸ್. ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಕೆ.ಸಿ.ಆರ್. ತೆಲಂಗಾಣದ ಪ್ರಥಮ ಮುಖ್ಯಮಂತ್ರಿ ಆದರು. ಬಂಗಾರು ತೆಲಂಗಾಣ ಘೋಷಣೆ ಮಾಡಿದ್ದು ಕೆ.ಸಿ.ಆರ್. ಆದರೂ, ನಿರ್ಮಾಣದ ಹೊಣೆಯನ್ನು ತೆರೆಮರೆಯಲ್ಲಿ ಹೊತ್ತಿದ್ದೂ ಮಾತ್ರ ಪ್ರಕಾಶ್‌ರವರು.
ಪ್ರಾದೇಶಿಕ ಅಸಮತೋಲನ ಹಾಗೂ ನದಿ ನೀರು ಹಂಚಿಕೆ ವಿವಾದವನ್ನೆ ಪ್ರಮುಖವಾಗಿಸಿಕೊಂಡು ವಿಭಜನೆಯಾದ ತೆಲಂಗಾಣಕ್ಕೆ ಸಮಗ್ರ ನೀರಾವರಿ ಕಲ್ಪಿಸುವುದು ದೊಡ್ಡ ಸವಾಲಾಗಿತ್ತು. ದಕ್ಷಿಣ ಭಾರತದ ದೊಡ್ಡ ನದಿಗಳಾದ ಕೃಷ್ಣೆ ಮತ್ತು ಗೋದಾವರಿ ರಾಜ್ಯದಲ್ಲಿ ಹರಿದಿದ್ದರೂ ಹಿಂದಿನ ಆಂದ್ರಪ್ರದೇಶ ಸರ್ಕಾರಗಳ ಆ ಭಾಗದ ಕುರಿತ ಅಸಡ್ಡೆಯಿಂದಾಗಿ ಮಹಾರಾಷ್ಟ್ರದ ವಿದರ್ಭದ ನಂತರ ಅತಿ ಹೆಚ್ಚು ರೈತರು ಆತ್ಮಹತ್ಯಗೆ ಒಳಗಾದ ಪ್ರದೇಶ ಎಂಬ ಕುಖ್ಯಾತಿಗೆ ತೆಲಂಗಾಣ ಪಾತ್ರವಾಗಿತ್ತು.
ರಾಜ್ಯವು ಒಟ್ಟು ೭೫.೨೧ ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿಯನ್ನು ಹೊಂದಿದ್ದರೂ ಕೇವಲ ೨೨.೮೯ ಹೆಕ್ಟೇರ್ ಭೂಮಿಗೆ ಮಾತ್ರ ನೀರಾವರಿ ಸೌಲಭ್ಯ ಕಲ್ಪಿಸಲಾಗಿತ್ತು. ಸಮಗ್ರ ಕೃಷಿ ಅಭಿವೃದ್ದಿಗಾಗಿ ಉಳಿದ ಭೂಮಿಯನ್ನು ನೀರಾವರಿಗೆ ಒಳಪಡಿಸುವ ಸವಾಲು ಚಂದ್ರಶೇಖರ ಅವರ ಮುಂದಿತ್ತು. ಇದಕ್ಕೆ ಪರಿಹಾರವಾಗಿ ಕೆಸಿಆರ್ ಮತ್ತು ಪ್ರಕಾಶ ಎಂಬ ತೆಲಂಗಾಣದ ಜೊಡೆತ್ತುಗಳ ಕಂಡು ಹಿಡಿದ ಸೂತ್ರವೇ ಕಾಲೇಶ್ವರಂ ಲಿಫ್ಟ್ ಇರಿಗೇಶನ್ ಯೋಜನೆ.
ಭಾರತದ ಅತಿದೊಡ್ಡ ಏತನೀರಾವರಿ ಯೋಜನೆ ಕಾಲೇಶ್ವರಂ ಲಿಫ್ಟ್ ಇರಿಗೇಶನ್
ಆಂದ್ರಪ್ರದೇಶ ವಿಭಜನೆಗಿಂತ ಮೊದಲು ೨೦೦೭ರಲ್ಲಿ ಅಂದಿನ ಸರ್ಕಾರ ರೂಪಿಸಿದ ಡಾ|| ಬಿ. ಆರ್. ಅಂಬೇಡ್ಕರ್ ಪ್ರಣಿಹಿತಾ ಚೆವೆಲ್ಲಾ ಶ್ರಾವಂತಿ ಯೋಜನೆಯು ಕಾಲೇಶ್ವರ ಯೋಜನೆಯ ಮೂಲ ಸ್ವರೂಪವಾಗಿದೆ. ಆ ಯೋಜನೆಯಲ್ಲಿ ಕೇವಲ ೧೬ ರಿಂದ ೨೦ ಟಿಎಂಸಿ ನೀರು ಮಾತ್ರ ಬಳಸಿಕೊಳ್ಳಲು ಸಾಧ್ಯವಾಗುತ್ತಿತ್ತು. ತೆಲಂಗಾಣ ಉದಯದ ನಂತರ ಇದನ್ನು ನವೀಕರಿಸಿ ಹೊಸ ಚಿಂತನೆಗಳೊಂದಿಗೆ ಗೋದಾವರಿ ನೀರು ಹಂಚಿಕೆ ನ್ಯಾಯಾಧಿಕರಣದಿಂದ ತೆಲಂಗಾಣ ರಾಜ್ಯಕ್ಕೆ ದೊರೆಯಬೇಕಾದ ೧೬೦ ಟಿಎಂಸಿ ನೀರನ್ನು ಉಪಯೋಗಿಸಿಕೊಳ್ಳಲು ಕಾಲೇಶ್ವರಂ ಯೋಜನೆ ಸಿದ್ದವಾಯಿತು.
ಗೋದಾವರಿ ಮತ್ತು ಪ್ರಣಹಿತಾ ನದಿ ಸಂಗಮಿಸುವ ಸ್ಥಳವಾದ ಭೂಪಾಲಪಲ್ಲಿಯ ಮೇಧಿಘಟ್ಟ ಸಮೀಪದ ಕಾಲೇಶ್ವರಂ ಬಳಿ ಯೋಜನೆ ೨೦೧೬ರಲ್ಲಿ ಶಂಕುಸ್ಥಾಪನೆ ಮಾಡಲಾಯಿತು. ವಾರ್ದಾ, ವೈನಗಂಗಾ, ಪೈನಗಂಗಾ ಸೇರಿದಂತೆ ಹಲವಾರು ಉಪನದಿಗಳನ್ನು ಹೊಂದಿರುವ ಪ್ರಣಿಹಿತಾ ನದಿಯ ೨೮೦ ಟಿಎಂಸಿ ಅಡಿ ನೀರು ಪ್ರತಿವರ್ಷ ಗೋದಾವರಿ ನದಿಯನ್ನು ಸೇರುತ್ತದೆ. ಈ ನೀರನ್ನು ಸದ್ಬಳಕೆ ಮಾಡಿಕೊಂಡು ತೆಲಂಗಾಣ ರಾಜ್ಯವನ್ನು ಬರಮುಕ್ತ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ.
ಈ ಯೋಜನೆಯನ್ನು ೭ ಲಿಂಕ್‌ಗಳು ಹಾಗೂ ೨೮ ಪ್ಯಾಕೇಜ್ ಮೂಲಕ ಅನುಷ್ಠಾನಗೊಳಿಸಲಾಗಿದೆ. ಮಳೆಗಾಲದ ೯೦ ದಿನಗಳಲ್ಲಿ ಪ್ರತಿನಿತ್ಯ ೨ ಟಿಎಂಸಿ ಅಡಿಯಂತೆ ವಾರ್ಷಿಕ ೧೮೦ ಟಿಎಂಸಿ ನೀರು ಲಿಫ್ಟ್ ಮಾಡಲು ಈ ಯೋಜನೆಯಿಂದ ಸಾಧ್ಯವಿದೆ. ಈ ಯೋಜನೆಯ ಒಟ್ಟು ಉದ್ದ ೫೦೦ ಕಿ.ಮೀ ಇದ್ದು, ೧೩ ಜಿಲ್ಲೆಗಳಿಗೆ ನೀರು ತಲುಪಿಸಲು ೧೮೦೦ ಕಿ.ಮೀ. ಕಾಲುವೆ ನಿರ್ಮಿಸಲಾಗಿದೆ.
ಯೋಜನೆಯ ಅಡಿಯಲ್ಲಿ ಮೇಧಿಘಟ್ಟ ಬ್ಯಾರೇಜ್‌ನಿಂದ ೧೯೫ ಟಿಎಂಸಿ ಅಡಿ, ಶ್ರೀಪಾದ ಯಲ್ಲಂಪಲ್ಲಿ ಯೋಜನೆಯಿಂದ ೨೦ ಟಿಎಂಸಿ ಅಡಿ ಹಾಗೂ ಅಂತರ್ಜಲ ವೃದ್ದಿಯಿಂದ ೨೫ ಟಿಎಂಸಿ ಅಡಿ ಸೇರಿ ವಾರ್ಷಿಕ ೨೪೦ ಟಿಎಂಸಿ ಅಡಿ ನೀರನ್ನು ಸದ್ಬಳಕೆ ಮಾಡುವ ಗುರಿಯನ್ನು ಹೊಂದಲಾಗಿದೆ.
ಸಮುದ್ರ ಮಟ್ಟದಿಂದ ೧೦೦ಮೀ. ಎತ್ತರದಿಂದ ಮೇಲೆತ್ತಿ, ೬ ಹಂತದಲ್ಲಿ ಲಿಫ್ಟ್ ಮಾಡಿ ಸಮುದ್ರಮಟ್ಟದಿಂದ ೬೧೮ ಮೀ ಎತ್ತರದಲ್ಲಿರುವ ಕೊಂಡಪೊಚಮ್ಮ ಸಾಗರಕ್ಕೆ ನೀರು ಸಾಗಿಸಲಾಗುತ್ತದೆ. ಅಂದರೆ ಗೋದಾವರಿ ನದಿಯಿಂದ ಅರ್ಧ ಕಿ.ಮೀ ಎತ್ತರದಲ್ಲಿರುವ ಪ್ರದೇಶಕ್ಕೆ ನೀರನ್ನು ತಲುಪಿಸಲಾಗುತ್ತದೆ.
ಯೋಜನೆಯಿಂದ ದೊರೆಯುವ ೨೪೦ ಟಿಎಂಸಿ ನೀರಿನಲ್ಲಿ ೧೬೯ ಟಿಎಂಸಿ ಅಡಿ ನೀರಾವರಿಗಾಗಿ, ೩೦ ಟಿಎಂಸಿ ಅಡಿ ಹೈದರಾಬಾದ ಹಾಗೂ ಸಿಕಂದರಾಬಾದ ಮಹಾನಗರ ಹಾಗೂ ೧೦ ಟಿಎಂಸಿ ಅಡಿ ನೀರನ್ನು ಗ್ರಾಮೀಣ ಪ್ರದೇಶದ ಕುಡಿಯುವ ನೀರಿಗಾಗಿ ಹಂಚಿಕೆ ಮಾಡಲಾಗಿದೆ. ೧೮.೫ ಲಕ್ಷ ಎಕರೆ ಹೊಸ ನೀರಾವರಿ ಕ್ಷೇತ್ರ ರೂಪಗೊಳ್ಳುವುದರ ಜೊತೆಗೆ ೧೩ ಜಿಲ್ಲೆಗಳ ಒಟ್ಟು ೪೫ ಲಕ್ಷ ಎಕರೆ ಭೂಮಿಗೆ ಸದೃಢ ನೀರಾವರಿ ಸೌಲಭ್ಯ ದೊರೆಯಲಿದೆ. ರಾಜ್ಯದ ೭೦% ಜನಸಂಖ್ಯೆಗೆ ಶಾಶ್ವತ ಕುಡಿಯುವ ನೀರು ಪೂರೈಸಲು ಈ ಯೋಜನೆಯಿಂದ ಸಾಧ್ಯವಿದೆ.
ಈ ಒಂದು ಯೋಜನೆಯಿಂದ ತೆಲಂಗಾಣದ ರೈತರು ವಾರ್ಷಿಕ ಎರಡು ಬೆಳೆ ಬೆಳೆಯುವಷ್ಟು ಸಮರ್ಥರಾಗುತ್ತಾರೆ. ತೆಲಂಗಾಣದ ಆರ್ಥಿಕ ಶಕ್ತಿ ಒಂದೇ ವರ್ಷದಲ್ಲಿ ನಾಲ್ಕು ಪಟ್ಟು ಹೆಚ್ಚಾಗುತ್ತದೆ. ಶುದ್ದ ಕುಡಿಯುವ ನೀರು, ಮೀನುಗಾರಿಕೆ, ಕೈಗಾರಿಕರಣ, ಜಲಕ್ರೀಡೆ, ಪ್ರವಾಸೋದ್ಯಮ ಎಲ್ಲವೂ ಸಾಧ್ಯವಾಗುತ್ತದೆ. ಒಟ್ಟಿನಲ್ಲಿ ಚಂದ್ರಶೇಖರ ಅವರು ತೆಲಂಗಾಣದ ಜನತೆಗೆ ಕಟ್ಟಿಕೊಟ್ಟ ’ಬಂಗಾರು ತೆಲಂಗಾಣ’ ಕನಸಾಗಿಸುವ ನಿಟ್ಟಿನಲ್ಲಿ ವೀರಮಲ್ಲ ಪ್ರಕಾಶ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಶುದ್ದ ಕುಡಿಯುವ ನೀರಿಗಾಗಿ ಮಿಷನ್ ಭಗೀರಥ
ತೆಲಂಗಾಣ ರಾಜ್ಯದ ಪ್ರತಿ ನಗರ ಮತ್ತು ಗ್ರಾಮೀಣ ಪ್ರದೇಶದ ಮನೆಗಳಿಗೆ ಶುದ್ದವಾದ ಕುಡಿಯುವ ನೀರನ್ನು ಪೂರೈಸುವ ಕ್ರಾಂತಿಕಾರಕ ಯೋಜನೆ ’ಮಿಷನ್ ಭಗೀರಥ’ ವೀರಮಲ್ಲ ಪ್ರಕಾಶರವರ ಕನಸಿನ ಕೂಸಾಗಿದೆ. ಯೋಜನೆಯ ಮುಖ್ಯ ಉದ್ದೇಶ ತೆಲಂಗಾಣ ರಾಜ್ಯದ ೨.೩೨ ಕೋಟಿ ನಿವಾಸಿಗಳಿಗೆ ಶುದ್ದ ಕುಡಿಯುವ ನೀರು ಒದಗಿಸುವುದು.
ಈ ಯೋಜನೆಯ ಮೂಲಕ ನಗರ ಪ್ರದೇಶದ ೨೦ ಲಕ್ಷ ಹಾಗೂ ಗ್ರಾಮೀಣ ಪ್ರದೇಶದ ೬೦ ಲಕ್ಷ ಮನೆಗಳಿಗೆ ಪೈಪಲೈನ್ ಮೂಲಕ ನೇರವಾಗಿ ಶುದ್ದಿಕರಿಸಿದ ಕುಡಿಯುವ ನೀರು ಸರಬರಾಜು ಮಾಡುವುದಾಗಿದೆ. ಗೋದಾವರಿ ನದಿಯ ೫೩.೬೮ ಟಿಎಂಸಿ ಅಡಿ ಹಾಗೂ ಕೃಷ್ಣೆಯ ೩೨.೪೩ ಟಿಎಂಸಿ ಅಡಿ ನೀರನ್ನು ಈ ಯೋಜನೆಗಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ತೆಲಂಗಾಣದ ಜಲಶಕ್ತಿಯ ಸಾಧಕರಿಗೆ ಬಸವಶ್ರೀ ಪುರಸ್ಕಾರ
ಇಂತಹ ಮಹಾನ್ ಸಾಧಕರು ಬಸವಣ್ಣರ ನಾಡು ಕೂಡಲ ಸಂಗಮಕ್ಕೆ ಆಗಮಿಸಿ ಪಂಚಮಸಾಲಿ ಪೀಠದಿಂದ ಹೆಮ್ಮೆಯ ಹಾಗೂ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿಯನ್ನು ಶ್ರೀಪೀಠದಿಂದ ಸ್ವೀಕರಿಸಿರುವುದು ಹೆಮ್ಮೆಯ ವಿಷಯ. ಒಂದು ಪ್ರದೇಶದ ಸಮಗ್ರ ಅಭಿವೃದ್ದಿಗಾಗಿ ಎದ್ದು ನಿಲ್ಲಲು ಇಚ್ಚಿಸುವ ಎಲ್ಲರಿಗೂ ವೀರಮಲ್ಲ ಪ್ರಕಾಶ ಪ್ರೇರಕರಾಗಿದ್ದಾರೆ.
ನಮ್ಮ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಕುರಿತು ಅನಗತ್ಯ ವಿಳಂಬವಾಗುತ್ತಿವೆ. ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣವಾಗಿಲ್ಲ. ಮಹಾದಾಯಿ ಬಗೆಹರಿಯದ ಸಮಸ್ಯೆಯಾಗಿ ಕಾಡುತ್ತಿದೆ. ಅದರೊಡನೆ ಉತ್ತರ ಕರ್ನಾಟಕದ ಹಸಿರು ಕ್ರಾಂತಿಗಾಗಿ ಹೊಸ ನೀರಾವರಿ ಯೋಜನೆಗಳ ಅವಶ್ಯಕತೆ ಇದೆ.
ಶೋಷಿತ ನಾಡಿನ ಜನರ ಬದುಕು ’ಕಲ್ಯಾಣ’ವಾಗಲಿ
ಉತ್ತರ ಕರ್ನಾಟಕವು ತೆಲಂಗಾಣದಂತೆ ಮೊದಲಿನಿಂದಲೂ ನೀರಾವರಿ ಯೋಜನೆ ಸೇರಿದಂತೆ ಪ್ರತಿ ವಿಭಾಗದಲ್ಲಿಯೂ ತುಳಿತಕ್ಕೊಳಗಾಗಿದ್ದೇವೆ. ದಕ್ಷಿಣದಲ್ಲಿರುವ ವಿಧಾನಸೌಧದಲ್ಲಿ ಕುಳಿತವರಿಗೆ ಉತ್ತರದವರ ಸಮಸ್ಯೆಗೆ ಉತ್ತರ ನೀಡುವುದು ಬಲು ದೂರವಾಗಿತ್ತು. ಉತ್ತರಕ್ಕೆ ಸುವರ್ಣಸೌಧ ಬಂದರೂ ಉತ್ತರದವರ ಬದುಕು ಮಾತ್ರ ಸುವರ್ಣಮಯವಾಗಲಿಲ್ಲ. ಉತ್ತರದ ಎಲ್ಲ ಯೋಜನೆಗಳಿಗೆ ನಿರಾಸೆಯ ಗೋಪೂರ ದಿನೇ ದಿನೇ ಎತ್ತರವಾಗುತ್ತಿದೆ.
ಇಂದು ಯಡಿಯೂರಪ್ಪ ಬಂದಿದ್ದಾರೆ. ಕೃಷಿ ಬಜೆಟ್ ಮಂಡಿಸಿದ ರೈತ ನಾಯಕ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಉತ್ತರ ಕರ್ನಾಟಕಕ್ಕೂ ಯಿಯೂರಪ್ಪನವರಿಗೂ ಅವಿನಾಭಾವ ಸಂಬಂಧವಿದೆ. ಆದ್ಯತೆಯ ಮೇರೆಗೆ ಎಲ್ಲ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ, ಉತ್ತರ ಕರ್ನಾಟಕವನ್ನು ಸಂಪೂರ್ಣ ನೀರಾವರಿಗೊಳಪಡಿಸಿ ಶೋಷಿತ ಉತ್ತರ ಕರ್ನಾಟಕದ ಬದುಕನ್ನು ಕಲ್ಯಾಣಗೊಳಿಸಲಿ. ಬಸವಣ್ಣನ ನಾಡು ಕಲ್ಯಾಣ ಕರ್ನಾಟಕ ಕೃಷಿ ಅಭಿವೃದ್ದಿಯಿಂದ ಕಂಗೊಳಿಸಲಿ.
ಕೃಷ್ಣೆಗೂ ನೀಡಿ ಸಾಂಸ್ಕೃತಿಕ ಸಾರಥ್ಯ
ಕೃಷ್ಣೆ ಉತ್ತರ ಕರ್ನಾಟಕದ ಉಸಿರು. ಈ ಉಸಿರಿಗೆ ನಮ್ಮ ಇಡೀ ನಾಡನ್ನೆ ಹಸಿರಾಗಿಸುವ ಅದಮ್ಯವಾದ ಶಕ್ತಿ ಇದೆ. ನಮ್ಮೆಲ್ಲರ ಬದುಕು ಬೆಳಗುವ ಅಮೋಘವಾದ ಶಕ್ತಿ ಇದೆ. ಕರುನಾಡಿನ ಜೀವನದಿ ಕಾವೇರಿ ಮಾತ್ರ ಅಲ್ಲ. ಕೃಷ್ಣೆ ನಮ್ಮ ಜೀವನದಿಯೂ ಹೌದು. ಜೀವನಾಡಿಯೂ ಹೌದು. ಕಾವೇರಿಗಾಗಿ ರಾಜಕುಮಾರ್, ವಿಷ್ಣುವರ್ದನ್ ಸೇರಿದಂತೆ ಚಿತ್ರರಂಗದ ದೃವತಾರೆಗಳು ಹಾಡಿಕುಣಿದರು. ಸಾಹಿತಿಗಳು, ಕವಿಗಳು ಕಾವೇರಿಯ ವೈಭವವನ್ನು ಪದಪುಂಜಗಳಲ್ಲಿ ಕಾವೇರಿಯ ಸಾಂಸ್ಕೃತಿಕ ವೈಭವವನ್ನು ಕಟ್ಟಿ ಬೆಳಸಿದರು.
ಕುಂಭಮೇಳಗಳನ್ನು ಸಂಘಟಿಸಿ ಧಾರ್ಮಿಕ ಹಿರಿಮೆಯನ್ನು ಗಟ್ಟಿಗೊಳಿಸಿದರು. ಮೈಸೂರು ಮಹಾರಾಜರ ಆದಿಯಾಗಿ ಎಲ್ಲರೂ ಕಾವೇರಿಯನ್ನು ಸಾಂಸ್ಕೃತಿಕವಾಗಿ ಸಂಪನ್ನಗೊಳಿಸಿದರು.
ಕೃಷ್ಣೆ ಉತ್ತರ ಕರ್ನಾಟಕದ ಜನರ ನರ ನಾಡಿಗಳಲ್ಲಿ ಬೆರೆತು ಹೋಗಿದ್ದಾಳೆ. ನಮ್ಮೆಲ್ಲರನ್ನು ಪೊರೆಯುವ ಮಹಾತಾಯಿ ಆಕೆ. ಆ ತಾಯಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುವುದು ಮತ್ತು ಹಿರಿಮೆ-ಗರಿಮೆಗಳನ್ನು ಹೆಚ್ಚಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೂ ಇದೆ.
ಕೃಷ್ಣೆಯ ಅಸ್ಮಿತೆಯನ್ನು ಬೆಳಗಲೂ ಕೃಷ್ಣೆಗೂ ಒಬ್ಬ ಸದ್ಗುರು ಬೇಕು. ಕೃಷ್ಣೆಯ ಪರಿಪೂರ್ಣ ಸದ್ಬಳಕೆಗಾಗಿ ಇಲ್ಲೊಬ್ಬರೂ ವಿ.ಪ್ರಕಾಶರಾವ್, ಚಂದ್ರಶೇಖರರಾವ್‌ರಂತಹ ಜನನಾಯಕರು ಬೇಕು. ಕೃಷ್ಣೆಗಾಗಿ ರಾಜಕುಮಾರ್‌ರಂತೆ ಹಾಡಿಕುಣಿಯಬೇಕು. ಕೃಷ್ಣೆಯ ವೈಭವವನ್ನು ನಮ್ಮ ಸಾಹಿತಿ-ಕವಿಗಳು ಹಾಡು, ಲೇಖನಗಳನ್ನು ಬರೆದು ಐತಿಹಾಸಿಕ, ಪಾರಂಪರಿಕ, ಧಾರ್ಮಿಕ ಹಿನ್ನೆಲೆಯನ್ನು ಜನಪ್ರೀಯಗೊಳಿಸಬೇಕು. ಕುಂಭಮೇಳಗಳನ್ನು ಆಯೋಜಿಸುವ ಮೂಲಕ ಕೃಷ್ಣೆಯ ಧಾರ್ಮಿಕ ಮಾನ್ಯತೆಯನ್ನು ಗಟ್ಟಿಗೊಳಿಸಬೇಕು.
ಜಲ ಜಗತ್ತಿನ ಸರ್ವಶ್ರೇಷ್ಟ ಸಾಧನ. ಜಲದ ಸಮರ್ಪಕ ಬಳಕೆಯಾಗದ ಹೊರತು ಅಭಿವೃಧ್ದಿ ಸಾಧ್ಯವಿಲ್ಲ ಎಂಬುದನ್ನು ಪ್ರಕಾಶ್ ಹಾಗೂ ಕೆ.ಸಿ.ಆರ್ ಜೋಡಿ ಅರಿತು ತೆಲಂಗಾಣದಲ್ಲಿ ಅಭಿವೃದ್ದಿ ಕ್ರಾಂತಿ ಮಾಡಿದೆ. ಇದು ಎಲ್ಲ ಸರ್ಕಾರಗಳಿಗೆ ಹಾಗೂ ಸಮಾಜ ಸುಧಾರಕರಿಗೆ ಮಾದರಿಯಾಗಿದೆ. ಈ ನಿಟ್ಟಿನಲ್ಲಿ ಪ್ರಕಾಶ್‌ರವರ ಸಾಮಾಜಿಕ ಕಳಕಳಿ, ಜಲ ಸಂವರ್ಧನೆಯ ತುಡಿತ ನಮ್ಮ ಯುವಕರಲ್ಲಿಯೂ ಮೂಡಲಿ. ನಮ್ಮ ನಾಡು ಸಮೃದ್ದಿಯಾಗಲಿ ಆ ಮೂಲಕ ಬಸವ ನಾಡಿನ ರೈತನ ಬದುಕು ಹಸನಾಗಲಿ, ಶ್ರಮಿಕನ ದುಡಿಮೆಗೆ ಬೆಲೆ ಸಿಗಲಿ. ಧರ್ಮ ಉಳಿಯಲಿ, ಸಮೃದ್ದಿ ಮೈತಳೆಯಲಿ.
ಇದನ್ನೂ ಓದಿ –
ಉತ್ತರ ಕರ್ನಾಟಕ ಸಮಗ್ರ ನೀರಾವರಿ ಯೋಜನೆ ಮತ್ತು ಮಾರ್ಗೊಪಾಯಗಳು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ