*ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್: ದೇವೇಗೌಡರ ಇಡೀ ಕುಟುಂಬ ರಾಜಕೀಯಕ್ಕೆ ರಾಜೀನಾಮೆ ಕೊಡಲಿ; ವೀರಪ್ಪ ಮೊಯ್ಲಿ ಆಗ್ರಹ*


ಪ್ರಗತಿವಾಹಿನಿ ಸುದ್ದಿ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಯಾರೂ ಪಾತ್ರ ವಹಿಸಿದ್ದಾರೆ ಮುಖ್ಯವಲ್ಲ. ಅಭಿನಯ ಮಾಡಿದ್ದು ಮುಖ್ಯ. ಇದು ಕರ್ನಾಟಕ ರಾಜಕೀಯದಲ್ಲಿ ತಲೆ ತಗ್ಗಿಸುವ ಕೆಲಸವಾಗಿದ್ದು ಇಡೀ ದೇವೇಗೌಡರ ಕುಟುಂಬ ರಾಜಕೀಯಕ್ಕೆ ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಒತ್ತಾಯಿಸಿದರು.
ಗುರುವಾರ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಲೋಕಸಭಾ ಚುನಾವಣೆ ರಾಷ್ಟ್ರದ ಮಹತ್ವದ ಚುನಾವಣೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೇ ಮುಂದುವರೆಸಿಕೊಂಡು ಹೋದರೆ ಲೋಕಸಭಾ, ವಿಧಾನಸಭಾ, ಸ್ಥಳೀಯ ಚುನಾವಣೆ ಒಂದೇ ಸಲ ನಡೆಯುವ ಹಾಗೆ ಮಾಡುತ್ತಾರೆ. ಇದು ವಿಪರ್ಯಾಸ ಎಂದರು.
ತಂತ್ರಜ್ಞಾನ ಮುಂದುವರೆದ ಕಾಲದಲ್ಲಿ ಮೂರು ತಿಂಗಳುಗಳ ಕಾಲ ಚುನಾವಣೆ ನಡೆಸಿದ್ದು ಏಕೆ ? ಉತ್ತರದಿಂದ ಕನ್ಯಾಕುಮಾರಿವರೆಗೂ ಚುನಾವಣೆಯ ಪ್ರಚಾರ ನಡೆಸಲು ಅನುಕೂಲ ಮಾಡಿಕೊಳ್ಳಲು ಎಂದು ಜರಿದರು. ನರೇಂದ್ರ ಮೋದಿ ಆಡಳಿತದಲ್ಲಿ ದೇಶದಲ್ಲಿ ಮಿಲಿಟರಿ ಆಡಳಿತ ತರಲು ಹೊರಟಿದ್ದಾರೆ. ಬಿಜೆಪಿ ಪ್ರಣಾಳಿಕೆಯಲ್ಲಿ ಮೋದಿ ಗ್ಯಾರಂಟಿ ಎಂದು ನಮೂದಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಾವಣೆ ಮಾಡುತ್ತಿದ್ದಾರೆ.ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡಿರುವುದನ್ನು ಮರೆತ್ತಿದ್ದಾರೆ ಎಂದರು.
ಬಿಜೆಪಿ ಪ್ರಣಾಳಿಕೆ ಪಕ್ಷದ್ದಲ್ಲ. ಇದು ಮೋದಿ ಗ್ಯಾರಂಟಿ. ಇದನ್ನು ಜನ ನಂಬುವರೆ ಎಂದು ಪ್ರಶ್ನಿಸಿದ ಅವರು, ಚುನಾವಣಾ ಬಾಂಡ್ ಮೇಲೆ ಕೋಟ್ಯಂತರ ರೂ. ಭ್ರಷ್ಟಾಚಾರ ಮಾಡಿದ್ದಾರೆ ಇದರ ಬಗ್ಗೆ ಕೇಂದ್ರ ಸರಕಾರ ಯಾವ ಕ್ರಮ ಕೈಗೊಂಡಿದೆ ಎಂದರು.
ಕೇಂದ್ರದಲ್ಲಿ ಯುಪಿಎ ಸರಕಾರದ ಸಂದರ್ಭದಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವಧಿಯಲ್ಲಿ ರೈತರ ಮೇಲಿನ ಸಂಪೂರ್ಣ ಸಾಲ ಮನ್ನಾ ಮಾಡಲಾಗಿತ್ತು. ಆದರೆ ನರೇಂದ್ರ ಮೋದಿ ಒಬ್ಬ ರೈತನ ಸಾಲ ಮನ್ನಾ ಮಾಡಿಲ್ಲ. ಇದು ಜನರಿಗೆ ಕೆಟ್ಟ ದಿನ, ಮೋದಿಗೆ ಒಳ್ಳೆಯ ದಿನವಾಗಿದೆ ಎಂದರು.
ಹಾಸನದ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ, ಕರ್ಮಕಾಂಡದಿಂದ ಇಡೀ ಕರ್ನಾಟಕದ ರಾಜಕೀಯದ ಹೆಸರನ್ನು ಕೆಡಿಸಿದ್ದಾನೆ. ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ದೇಶ ಬಿಡುತ್ತೇನೆ ಎಂದಿದ್ದರು. ಈಗ ಅವರ ಪಕ್ಕ ಕುಳಿತುಕೊಂಡು ಚುನಾವಣೆಯ ಪ್ರಚಾರ ನಡೆಸಿದ್ದಾರೆ ಎಂದರು.
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ವಿಶ್ವಾಸ ದ್ರೋಹಿ. ಅವರು ಮುಖ್ಯಮಂತ್ರಿಯಾಗಿದ್ದರು ಎನ್ನುವುದು ಜನರ ಮರೆತ್ತಿದ್ದಾರೆ. ಗಂಡನನ್ನು ಕಳೆದ ವಿಧವೆಗೆ ಟಿಕೆಟ್ ತಪ್ಪಿಸಿ ಶೆಟ್ಟರ್ ಪಡೆದುಕೊಂಡಿದ್ದಾರೆ ಎಂದು ಹರಿಹಾಯ್ದರು.
ಶಾಸಕರಾದ ಆಸೀಫ್ ಸೇಠ್, ನಾಗರಾಜ ಯಾದವ, ಮಾಜಿ ಸಚಿವ ಅಭಯಚಂದ್ರ ಜೈನ್, ವಿನಯ ನಾವಲಗಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ